ಕಾವೇರಿ ವಿವಾದ: ದೆಹಲಿಗೆ ಸರ್ವಪಕ್ಷ ನಿಯೋಗ ಒಯ್ಯಲು ಸರ್ಕಾರ ನಿರ್ಧಾರ, ರಾಜಕೀಯ ಪ್ರೇರಿತ ಎಂದ ಬಿಜೆಪಿ

'ಸಂಕಷ್ಟ ಹಂಚಿಕೆ ಸೂತ್ರ' ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಒಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದು ರಾಜಕೀಯ ಪ್ರೇರಿತ ಎಂದು ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.
ಬೆಂಗಳೂರಿನಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಹಾಜರಿರುವುದು.
ಬೆಂಗಳೂರಿನಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಹಾಜರಿರುವುದು.
Updated on

ಬೆಂಗಳೂರು: 'ಸಂಕಷ್ಟ ಹಂಚಿಕೆ ಸೂತ್ರ' ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಒಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದು ರಾಜಕೀಯ ಪ್ರೇರಿತ ಎಂದು ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.

ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯುವ ಮುನ್ನ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ (ಐಎ) ಸಲ್ಲಿಸಬೇಕು. ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ನೆಲ, ಜಲ ವಿಚಾರವಾಗಿ ನಾವು ರಾಜಕೀಯ ಬಿಟ್ಟು ಸಲಹೆ ಕೊಟ್ಟಿದ್ದೇವೆ. ತಮಿಳುನಾಡು ಸರ್ಕಾರದ ರಾಜ್ಯ ಸರ್ಕಾರ ವಿರುದ್ಧ ಪ್ರಬಲ ವಾದ ಮಂಡಿಸಬೇಕಿದೆ.  ಮೊದಲ ಹಂತದಲ್ಲಿ ಸರ್ಕಾರ ಕೆಲವು ಕಡೆ ಎಡವಿದೆ. ಅದನ್ನು ಹೇಳಿದ್ದೇವೆ, ಆದರೆ, ಅದನ್ನು ಅವರು ಒಪ್ಪಿಲ್ಲ. ಆದರೂ 10 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿದ್ದು ತಪ್ಪು. ಸುಪ್ರೀಂಕೋರ್ಟ್ ನಲ್ಲಿ ಮನವರಿಕೆ ಮಾಡಿಕೊಡಲು ತಿಳಿಸಿದ್ದೇವೆ ಎಂದು ಹೇಳಿದರು.

ರಾಜ್ಯದ ನೀರು ಮತ್ತು ಭೂಮಿಗೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯ ಸರ್ಕಾರವನ್ನು ಬೆಂಬಲಿಸಲು ನಾವು ಸಿದ್ಧರಿದ್ದೇವೆ. ಜಲ ವಿವಾದಗಳಿಗೆ ಸಂಬಂಧಿಸಿದ ರಾಜ್ಯದ ಪ್ರಕರಣಗಳನ್ನು ಸಮರ್ಥ ರೀತಿಯಲ್ಲಿ ವಾದಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಹಂತದಲ್ಲಿ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಪ್ರಶ್ನೆ ಉದ್ಭವಿಸುವುದಿಲ್ಲ. ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯಲು ಯತ್ನಿಸುವ ಮೂಲಕ ಸರ್ಕಾರ ಸಮಸ್ಯೆಯನ್ನು ರಾಜಕೀಯಗೊಳಿಸುತ್ತಿದೆ ಎಂದು ತಿಳಿಸಿದರು.

ಸಂಸದ ತೇಜಸ್ವಿ ಸೂರ್ಯ ಅವರು ಮಾತನಾಡಿ, ಕರ್ನಾಟಕದ ನೆಲ ಮತ್ತು ಭಾಷೆಗೆ ಸಂಬಂಧಿಸಿದ ವಿಚಾರಗಳಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ.

ಜೆಡಿಎಸ್ ಮುಖಂಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ತಮಿಳುನಾಡಿಗೆ ನೀರು ಬಿಡುವ ಮುನ್ನವೇ ಸರ್ವಪಕ್ಷ ಸಭೆ ಕರೆದಿದ್ದರೆ ಸರಿ ಎನ್ನಬಹುದಿತ್ತು. ಈಗಾಗಲೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗುತ್ತಿದ್ದು, ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಿಮ್ಮ ನಡೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಸಭೆಯನ್ನು ಮೊದಲೇ ಕರೆಯಬೇಕಿತ್ತು. ಸುಪ್ರೀಂ ಕೋರ್ಟ್ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಸರಿಯಾದ ವಾದ ಮಂಡಿಸಬೇಕಿತ್ತು. ಕರ್ನಾಟಕದಲ್ಲಿ ನೈರುತ್ಯ ಮುಂಗಾರು ಬಹುತೇಕ ಮುಕ್ತಾಯವಾಗುತ್ತಿದೆ. ಈಶಾನ್ಯ ಮಾನ್ಸೂನ್ ಋತುವಿನಲ್ಲಿ ತಮಿಳುನಾಡು ತುಂತುರು ಮಳೆಯನ್ನು ಪಡೆಯುತ್ತದೆ. ಆದರೆ, ನಮ್ಮ ರಾಜ್ಯ ಮಳೆ ಕೊರತೆ ಎದುರಿಸುತ್ತಿದೆ. ದ್ದರಿಂದ ಈ ಎಲ್ಲ ವಿಚಾರಗಳನ್ನು ನ್ಯಾಯಾಲಯದ ಮುಂದೆ ಸೂಕ್ತ ರೀತಿಯಲ್ಲಿ ವಾದ ಮಂಡಿಸಬೇಕೆಂದು ತಿಳಿಸಿದರು.

ಕರ್ನಾಟಕದ ನೆಲ, ಜಲ, ಗಡಿ ಮತ್ತು ಭಾಷೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ರಾಜ್ಯದ ರಾಜಕೀಯ ಪಕ್ಷಗಳು ಒಂದೇ ಧ್ವನಿಯಲ್ಲಿ ಮಾತನಾಡಿವೆ. ಯಾರೂ ಈ ಸಮಸ್ಯೆಗಳನ್ನು ರಾಜಕೀಯಗೊಳಿಸಲು ಪ್ರಯತ್ನಿಸಲಿಲ್ಲ ಮತ್ತು ಮಾಡಬಾರದು. ರಾಜ್ಯದ 7 ಕೋಟಿ ಜನರ ಕಲ್ಯಾಣವನ್ನು ನಾವೆಲ್ಲರೂ ರಕ್ಷಿಸಬೇಕಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com