ಕಟ್ಟಡದ ಅಗ್ನಿ ಸುರಕ್ಷತಾ ಕ್ರಮ ಉಲ್ಲಂಘನೆ ಆರೋಪ: ಸಚಿವ ಬೈರತಿ ಸುರೇಶ್‌ ವಿರುದ್ಧದ ದೋಷಾರೋಪ ಪಟ್ಟಿಗೆ ಹೈಕೋರ್ಟ್ ತಡೆ

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು 9 ವರ್ಷಗಳಿಂದ ಹಿಂದೆ ಖರೀದಿಸಿದ್ದ ವಾಣಿಜ್ಯ ಕಟ್ಟಡದಲ್ಲಿ ‘ಕರ್ನಾಟಕ ಅಗ್ನಿಶಾಮಕ ದಳ ಕಾಯಿದೆ-1964’ರ ಸೆಕ್ಷನ್ 13ರಡಿ ಬರುವ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಿಸಲಾಗಿರುವ ಆರೋಪ ಪಟ್ಟಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಸಚಿವ ಬೈರತಿ ಸುರೇಶ್‌
ಸಚಿವ ಬೈರತಿ ಸುರೇಶ್‌
Updated on

ಬೆಂಗಳೂರು: ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು 9 ವರ್ಷಗಳಿಂದ ಹಿಂದೆ ಖರೀದಿಸಿದ್ದ ವಾಣಿಜ್ಯ ಕಟ್ಟಡದಲ್ಲಿ ‘ಕರ್ನಾಟಕ ಅಗ್ನಿಶಾಮಕ ದಳ ಕಾಯಿದೆ-1964’ರ ಸೆಕ್ಷನ್ 13ರಡಿ ಬರುವ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಿಸಲಾಗಿರುವ ಆರೋಪ ಪಟ್ಟಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ತಮ್ಮ ವಿರುದ್ಧದ ಆರೋಪ ಪಟ್ಟಿ ಹಾಗೂ ಆ ಸಂಬಂಧ ಬೆಂಗಳೂರಿನ 10ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಸಚಿವ ಬಿ ಎಸ್ ಸುರೇಶ್ (ಬೈರತಿ ಸುರೇಶ್) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಬೈರತಿ ಸುರೇಶ್ ಹಾಗೂ ಇತರರ ವಿರುದ್ಧ ಇಂದಿರಾನಗರ ಪೊಲೀಸರು 10ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರೋಪ ಪಟ್ಟಿಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಡಿಸೆಂಬರ್‌ 15ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲೆ ಲೀಲಾ ಪಿ. ದೇವಾಡಿಗ ವಾದ ಮಂಡಿಸಿದರು.

ಇಂದಿರಾನಗರ ಎಚ್‌ಎಎಲ್ 2ನೇ ಹಂತದಲ್ಲಿ ಸರ್ವೆ ನಂಬರ್ 765ರಲ್ಲಿ 2005-06ರಲ್ಲಿ ನಕ್ಷೆ ಮಂಜೂರಾತಿ ಹೊಂದಿದ್ದ ವಾಣಿಜ್ಯ ಕಟ್ಟಡವನ್ನು ಬೈರತಿ ಸುರೇಶ್ 2014ರಲ್ಲಿ ಖರೀದಿಸಿದ್ದರು. 2015ರ ಪರಿಷ್ಕೃತ ಮಾಸ್ಟರ್ ಪ್ಲಾನ್ ಪ್ರಕಾರ 24 ಮೀಟರ್ ಎತ್ತರದ ಕಟ್ಟಡಗಳು ಅಗ್ನಿಶಾಮಕ ಇಲಾಖೆಯಿಂದ ಎನ್‌ಓಸಿ ಪಡೆದುಕೊಳ್ಳಬೇಕು ಎಂದಿದೆ. ಆದರೆ, ಈ ಕಟ್ಟಡವು 24 ಮೀಟರ್ ಒಳಗೆ ಇದೆ. ಆದಾಗ್ಯೂ ಅತೀ ಎತ್ತರದ ಕಟ್ಟಡಗಳಿಗೆ ಅಳವಡಿಸಬೇಕಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ನೀಡಿದ ದೂರು ಆಧರಿಸಿ, ಇಂದಿರಾನಗರ ಪೊಲೀಸರು ಬೈರತಿ ಸುರೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇದಕ್ಕೆ 2019ರ ಸೆಪ್ಟೆಂಬರ್‌ 9ಕ್ಕೆ ನ್ಯಾಯಾಲಯ ತಡೆ ನೀಡಿತ್ತು. ಆದರೆ ಪೊಲೀಸರು 2019ರ ಅಕ್ಟೋಬರ್‌ 11ರಂದು 10ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ನಕ್ಷೆ ಮಂಜೂರಾತಿ ಹಾಗೂ ಇತರ ಪರವಾನಿಗೆ ಹೊಂದಿದ್ದ ಕಟ್ಟಡವನ್ನು ಅರ್ಜಿದಾರರು ಖರೀದಿಸಿದ್ದಾರೆ. ಪರಿಷ್ಕೃತ ಮಾಸ್ಟರ್ ಪ್ಲ್ಯಾನ್ ಜಾರಿಗೆ ಬರುವ ಮೊದಲೇ ಈ ಕಟ್ಟಡ ಖರೀದಿಸಲಾಗಿತ್ತು. 2011ರಲ್ಲಿ ಅಗ್ನಿ ಶಾಮಕ ದಳ ಹೊರಡಿಸಿದ ಅಧಿಸೂಚನೆಯ 3 ವರ್ಷದ ಬಳಿಕ ಹಾಗೂ ಕಟ್ಟಡ ನಿರ್ಮಾಣ ಮಾಡಿದ 8 ವರ್ಷಗಳ ನಂತರ ಅರ್ಜಿದಾರರು ಕಟ್ಟಡವನ್ನು ಖರೀದಿಸಿದ್ದಾರೆ. ಹೀಗಾಗಿ, ಮೂಲ ಮಾಲೀಕರು ಅಳವಡಿಸಿದ ಸುರಕ್ಷತಾ ಕ್ರಮಗಳಿಗೆ ಅರ್ಜಿದಾರರು ಹೊಣೆಗಾರರಲ್ಲ. ಹಿಂದೆ ನ್ಯಾಯಾಲಯದ ತಡೆ ಇದ್ದರೂ, ವಿಚಾರಣಾಧೀನ ನ್ಯಾಯಾಲಯ ಡಿಸೆಂಬರ್‌ 9ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್‌ ಜಾರಿ ಮಾಡಿದೆ. ಅದರ ಬಳಿಕವಷ್ಟೇ ವಿಚಾರ ಅರ್ಜಿದಾರರ ಗಮನಕ್ಕೆ ಬಂದಿದೆ. ಅರ್ಜಿದಾರರು ಶಾಸಕ ಮತ್ತು ಸಚಿವ ಆಗಿದ್ದರಿಂದ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಾಗಿದೆ. ಹೀಗಾಗಿ ವಿಚಾರಣೆಗೆ ಹಾಜರಾಗಲು ಆಗುವುದಿಲ್ಲ ಅರ್ಜಿದಾರರ ಪರ ವಕೀಲರು ಪೀಠಕ್ಕೆ ವಿವರಿಸಿದರು.

ಆದ್ದರಿಂದ ಅರ್ಜಿದಾರರ ವಿರುದ್ಧ ಇಂದಿರಾನಗರ ಪೊಲೀಸರು ದಾಖಲಿಸಿರುವ ಆರೋಪ ಪಟ್ಟಿ ಹಾಗೂ ಅದರ ಸಂಬಂಧ 10ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com