ನನ್ನ ಆನೆಯನ್ನ ಬದುಕಿಸಿಕೊಡಿ, ಇಲ್ಲವೇ ಅರ್ಜುನನ ಜೊತೆ ನಮ್ಮನ್ನೂ ಮಣ್ಣು ಮಾಡಿ: ಮಾವುತನ ಗೋಳಾಟ

ಅರ್ಜುನನ ಸೊಂಡಿಲನ್ನು ತಬ್ಬಿಕೊಂಡು ನನ್ನ ಆನೆಯನ್ನು ಬದುಕಿಸಿಕೊಡಿ. ನನ್ನ ಆನೆಯನ್ನು ಮೈಸೂರಿಗೆ ಕಳುಹಿಸಿಕೊಡಿ. ಇಲ್ಲವೇ ನನ್ನನ್ನು ಹಾಗೂ ನನ್ನ ಕುಟುಂಬವನ್ನು ಅರ್ಜುನನ ಜೊತೆ ಮಣ್ಣು ಮಾಡಿ ಎಂದು ಗೋಳಾಡಿದ್ದಾರೆ.
ದಸರಾ ಆನೆ ಅರ್ಜುನ
ದಸರಾ ಆನೆ ಅರ್ಜುನ

ಹಾಸನ: ನಿನ್ನೆ ಕಾಡಾನೆ ಕಾರ್ಯಾಚರಣೆ ವೇಳೆ ಕಾದಾಟದಲ್ಲಿ ಮೃತಪಟ್ಟ ಅರ್ಜುನ ಆನೆಯನ್ನ ನೆನೆದು ಮಾವುತ ವಿನು ಕಣ್ಣೀರಿಟ್ಟಿದ್ದಾರೆ. ಅಂತಿಮ ದರ್ಶನದ ವೇಳೆ ಮಾವುತ ವಿನು ಅರ್ಜುನ ಆನೆಯನ್ನ ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದು, ನನ್ನ ಆನೆಯನ್ನ ಬದುಕಿಸಿಕೊಡಿ. ಇಲ್ಲದಿದ್ದರೇ ನನ್ನನ್ನೂ ಅರ್ಜುನನ ಜೊತೆ ಮಣ್ಣು ಮಾಡಿ ಎಂದು ಗೋಳಾಡಿದ್ದಾರೆ.

ಅರ್ಜುನನ ಸೊಂಡಿಲನ್ನು ತಬ್ಬಿಕೊಂಡು ನನ್ನ ಆನೆಯನ್ನು ಬದುಕಿಸಿಕೊಡಿ. ನನ್ನ ಆನೆಯನ್ನು ಮೈಸೂರಿಗೆ ಕಳುಹಿಸಿಕೊಡಿ. ಇಲ್ಲವೇ ನನ್ನನ್ನು ಹಾಗೂ ನನ್ನ ಕುಟುಂಬವನ್ನು ಅರ್ಜುನನ ಜೊತೆ ಮಣ್ಣು ಮಾಡಿ. ಅರ್ಜುನ ಸತ್ತಿಲ್ಲ ಎಂದು ನನ್ನ ಹೆಂಡತಿ ಮಕ್ಕಳಿಗೆ ಹೇಳಿದ್ದೇನೆ. ಅರ್ಜುನನನ್ನು ನನ್ನ ಜೊತೆ ಕಳುಹಿಸಿಕೊಡಿ ಎಂದು ಮಾವುತ ಅರ್ಜುನನ ಎದುರು ರೋಧಿಸಿದ್ದಾರೆ.

ವಿನು ಅವರು ಅರ್ಜುನನ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ಇದೀಗ ಅರ್ಜುನನ ಸಾವಿನ ನೋವನ್ನು ಅರಗಿಸಿಕೊಳ್ಳಲಾಗದೆ ರೋಧಿಸುತ್ತಿದ್ದಾರೆ. ಮಂಗಳವಾರ ಅರ್ಜುನನ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಚೇತರಿಸಿಕೊಂಡು ಬಂದಿದ್ದ ವಿನು ಅವರು ತನ್ನ ಪ್ರೀತಿಯ ಅರ್ಜುನನ್ನು ಕಂಡು ಬಿಕ್ಕಳಿಸಿ ಬಿಕ್ಕಳಿಸಿ ಅತ್ತಿದ್ದಾರೆ.

ಇತ್ತ ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟ ಅಂಬಾರಿ ಹೊತ್ತ ಅರ್ಜುನನ ಅಂತಿಮ ದರ್ಶನಕ್ಕೆ ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ಮೈಸೂರಿನಿಂದ ಬಂದು ಜನ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಮೃತ ಅರ್ಜುನನ ಕಳೇಬರಕ್ಕೆ ಹಾರ ಹಾಕಿ ನಮನ ಸಲ್ಲಿಸುತ್ತಿದ್ದಾರೆ. ಯಸಳೂರು ವಲಯದ ದಬ್ಬಳ್ಳಿಕಟ್ಟೆ ಸಮೀಪ KFDC ನೆಡು ತೋಪಿನಲ್ಲಿ ಸರಕಾರಿ ಗೌರವದೊಂದಿಗೆ ಅರ್ಜುನನ  ಅಂತ್ಯಸಂಸ್ಕಾರ ನೆರವೇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com