ಬೆಳಗಾವಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸರ್ಕಾರ

ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಖಂಡಿಸಿ ಪ್ರತಿಪಕ್ಷ ಬಿಜೆಪಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಸಂತ್ರಸ್ತ ಮಹಿಳೆಗೆ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಸಚಿವ ಸತೀಶ್ ಜಾರಕಿಹೊಳಿ
ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಖಂಡಿಸಿ ಪ್ರತಿಪಕ್ಷ ಬಿಜೆಪಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಸಂತ್ರಸ್ತ ಮಹಿಳೆಗೆ 2.03 ಎಕರೆ ಜಮೀನು ಹಾಗೂ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣದ ಸಂತ್ರಸ್ತ ಮಹಿಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮೂಲಕ ಭೂಮಾಲೀಕತ್ವ ಯೋಜನೆಯಡಿ ಜಮೀನು ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪಾಲಿಕೆ ಕೂಡ ತಡಮಾಡದೆ ಭೂಮಿ ಮಂಜೂರು ಮಾಡಿದೆ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಇದಕ್ಕು ಮುನ್ನ ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ವಂಟಮೂರಿಯಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿರುವುದು ಖಂಡನಾರ್ಹ. ಇದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಹೈಕೋರ್ಟ್ ಸಹ ಸರ್ಕಾರಕ್ಕೆ ಛಾಟಿ ಬೀಸಿದೆ. ಮುಖ್ಯಮಂತ್ರಿಗಳು ಸಂತ್ರಸ್ಥೆಯನ್ನು ಇದವರೆಗೂ ಭೇಟಿ ಮಾಡಿಲ್ಲ. ಗೃಹ ಸಚಿವರು ಹೊರತುಪಡಿಸಿ ಬೇರೆ ಯಾರು ಭೇಟಿ ನೀಡಿಲ್ಲ. ರಾಜ್ಯಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಟೀಕಿಸಿದರು.

ಇದೇ ವೇಳೆ ಬೆಳಗಾವಿ ಪೊಲೀಸರು ನಿನ್ನೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.ವಂಟಮುರಿ ನಿವಾಸಿಗಳಾದ ಸಂತೋಷ್ ಬಸಪ್ಪ ನಾಯಕ್, ಶೋಭಾ ರಾಜಪ್ಪ ನಾಯಕ್ ಮತ್ತು ಲಕ್ಕವ್ವ ಯಲ್ಲಪ್ಪ ನಾಯಕ್ ಬಂಧಿತರು.

ಕಾಕತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯಕುಮಾರ್ ಸಿನ್ನೂರ್ ಅವರ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಅವರು ಅಮಾನತುಗೊಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com