ಬೆಳಗಾವಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಪ್ರೇಮಿಗಳಿಗೆ ಸೂಕ್ತ ರಕ್ಷಣೆ ನೀಡಲಾಗುವುದು- ರಾಜ್ಯ ಸರ್ಕಾರ
ಬೆಳಗಾವಿ: ಬೆಳಗಾವಿ ತಾಲೂಕಿನ ಗ್ರಾಮವೊಂದರಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣದಲ್ಲಿ ಪ್ರೀತಿಸಿ ಗ್ರಾಮ ಬಿಟ್ಟು ಹೋಗಿದ್ದ ಪ್ರೇಮಿಗಳಿಗೆ ಪೊಲೀಸ್ ರಕ್ಷಣೆ ನೀಡಲಾಗುವುದು ಗೃಹ ಸಚಿವ ಜಿ ಪರಮೇಶ್ವರ್ ಅವರು ಭಾನುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರೇಮಿಗಳು ಗ್ರಾಮ ಬಿಟ್ಟು ಹೋದ ಬಳಿಕ ತಮಗೆ ರಕ್ಷಣೆ ನೀಡುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಚರ್ಚಿಸಿ ಪ್ರೇಮಿಗಳಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ಹೇಳಿದರು.
''ಇಂತಹ ಘಟನೆಗಳು ನಡೆಯಬಾರದಿತ್ತು. ನಡೆದಿರುವುದು ದುರದೃಷ್ಟಕರ ಸಂಗತಿ. ಇದಕ್ಕೆ ವಿರೋಧ ಪಕ್ಷಗಳು ಸರ್ಕಾರವನ್ನು ದೂಷಿಸಬಾರದು. ಈ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತಡರಾತ್ರಿಯಲ್ಲಿ ಘಟನೆ ಸಂಭವಿಸಿದೆ. ಕೆಲವು ಗ್ರಾಮಸ್ಥರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣ ಗ್ರಾಮಕ್ಕೆ ತೆರಳಿದ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ. ಪೊಲೀಸರು ಸಮಯಕ್ಕೆ ಸರಿಯಾಗಿ ಹೋಗದೇ ಇದ್ದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿತ್ತು ಎಂದು ಸಂತ್ರಸ್ತೆಯೇ ಹೇಳಿದ್ದಾರೆಂದು ತಿಳಿಸಿದರು.
ಸಂತ್ರಸ್ತ ಮಹಿಳೆಗೆ ಈಗಾಗಲೇ ಸರ್ಕಾರ ಜಮೀನು ಹಾಗೂ ರೂ.5 ಲಕ್ಷವನ್ನು ಪರಿಹಾರವನ್ನು ಘೋಷಣೆ ಮಾಡಿದೆ. ಆಕೆಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಇಷ್ಟೆಲ್ಲಾ ಮಾಡಿದರೂ ಸರ್ಕಾರವನ್ನು ದೂರುವುದು ಸರಿಯಲ್ಲ. ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಎಸ್‌ಟಿ ಆಯೋಗವು ಸಂತ್ರಸ್ತರಿಗೆ ಸಹಾಯ ಮಾಡಬಹುದು, ಅವರ ಸಲಹೆಗಳ ಸ್ವೀಕರಿಸಲು ನಾವು ಸಿದ್ಧರಿದ್ದೇವೆ. ವಿನಾಕಾರಣ ನಮ್ಮನ್ನು ದೂಷಿಸಬಾರದು ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ