ಹಿಜಾಬ್ ನಮ್ಮ ಹಕ್ಕು, ಇನ್ಮುಂದೆ ಸಹೋದರ- ಸಹೋದರಿಯರಂತೆ ಬಾಳೋಣ: ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್
ಮಂಡ್ಯ: ಹಿಜಾಬ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವ ಸಿಎಂ ಸಿದ್ದರಾಮಯ್ಯನವರ ಘೋಷಣೆಗೆ ಪ್ರತಿಕ್ರಿಯಿಸಿದ ಮಂಡ್ಯ ಜಿಲ್ಲೆಯ ವಿದ್ಯಾರ್ಥಿ ಹಾಗೂ 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದ ಗುಂಪಿನ ವಿರುದ್ಧ 'ಅಲ್ಲಾ ಹು ಅಕ್ಬರ್' ಎಂದು ಘೋಷಣೆ ಕೂಗಿದ್ದ ಮುಸ್ಕಾನ್, 'ಹಿಜಾಬ್' ಧರಿಸುವುದು ನಮ್ಮ ಹಕ್ಕು ಮತ್ತು ಇನ್ನ್ಮುಂದೆ ನಾವು ಸಹೋದರ ಸಹೋದರಿಯರಂತೆ ಬದುಕೋಣ' ಎಂದಿದ್ದಾರೆ.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಮುಸ್ಕಾನ್, ಹಿಜಾಬ್ ನಮ್ಮ ಸಂಸ್ಕೃತಿ, ಅದು ನಮ್ಮ ಹಕ್ಕು, ನಮಗೆ ಆ ಹಕ್ಕು ಸಿಗುತ್ತದೆ ಎಂಬ ನಂಬಿಕೆ ನನ್ನದು, ಶಿಕ್ಷಣದಲ್ಲಿ ರಾಜಕೀಯ ಬೇಡ ಎಂದು ಹೇಳಿದರು.
'ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹಮದ್ ಖಾನ್, ಸ್ಪೀಕರ್ ಯುಟಿ ಖಾದರ್, ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಹಕ್ಕುಗಳನ್ನು ಮರಳಿ ಕೊಟ್ಟಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರು ನಮ್ಮ ಸಂಸ್ಕೃತಿಯನ್ನು ಬೆಂಬಲಿಸಿದ್ದಾರೆ. ನಾವು ಕಾಲೇಜಿನಲ್ಲಿ ಸಹೋದರ- ಸಹೋದರಿಯರಂತೆ ಓದುತ್ತಿದ್ದೆವು. ಇದು ಸದಾ ಹೀಗೆಯೇ ಇರಬೇಕು' ಎಂದು ಹೇಳಿದರು.
'ಹಿಜಾಬ್ ನಮ್ಮ ಧರ್ಮ ಮತ್ತು ನಾವು ಅದನ್ನು ಅನುಸರಿಸಬೇಕಾಗಿದೆ. ಹಿಜಾಬ್‌ನ ನಿಷೇಧದಿಂದಾಗಿ ಅನೇಕ ವಿದ್ಯಾರ್ಥಿನಿಯರು ತಮ್ಮ ಮನೆಗಳಲ್ಲಿ ಉಳಿಯಬೇಕಾಯಿತು. ಒಂದು ವರ್ಷ ಕಾಲೇಜಿಗೆ ಹೋಗಿರಲಿಲ್ಲ. ಈಗ ನಾನು ಪಿಇಎಸ್ ಕಾಲೇಜಿಗೆ ಹೋಗುತ್ತಿದ್ದೇನೆ. ಉಳಿದವರು ಸಹ ಹೊರಗೆ ಬಂದು ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು' ಎಂದು ಮುಸ್ಕಾನ್ ಹೇಳಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಹಿಜಾಬ್ ಬಿಕ್ಕಟ್ಟು ಉತ್ತುಂಗದಲ್ಲಿದ್ದಾಗ, ಕಾಲೇಜು ಕ್ಯಾಂಪಸ್‌ನಲ್ಲಿ ಹಿಂದೂ ಪರ ಘೋಷಣೆಗಳನ್ನು ಕೂಗುತ್ತಿದ್ದ ವಿದ್ಯಾರ್ಥಿಗಳ ಗುಂಪನ್ನು ಮುಸ್ಕಾನ್ ಅವರು ಇಸ್ಲಾಂ ಪರ ಘೋಷಣೆ ಕೂಗುವ ಮೂಲಕ ಎದರುಸಿದ್ದರು.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಭಯೋತ್ಪಾದಕ ಅಲ್-ಖೈದಾ ನಾಯಕ ಅಯ್ಮಾನ್ ಅಲ್-ಜವಾಹಿರಿ ಮುಸ್ಕಾನ್ ಕೂಡ ವಿದ್ಯಾರ್ಥಿನಿಯ ನಡೆಗೆ ಮೆಚ್ಚುಗೆ ಸೂಚಿಸಿ, ಅವರನ್ನು ಸಹೋದರಿ ಎಂದು ಸಂಬೋಧಿಸಿದ್ದರು. ಆ ವಿಡಿಯೋದಲ್ಲಿ ಅವರು ಭಾರತದ ಮುಸ್ಲಿಮರಿಗೆ ಧ್ವನಿ ಎತ್ತುವಂತೆ ಮನವಿ ಮಾಡಿದ್ದರು. ಆಗ ಈ ಬೆಳವಣಿಗೆ ಹಲವು ಆತಂಕಗಳನ್ನು ಹುಟ್ಟು ಹಾಕಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ