'ಪತ್ರಿಕೆ-ಮಾಧ್ಯಮ ಲಾಭದಾಯಕ ದಂಧೆಯಾಗಿದೆ'- ಕಾರಜೋಳ; 'ಅವರಿಗೆ ಮಾನ, ಮರ್ಯಾದೆ ಇಲ್ಲ' ಎಂದ ಬಸನಗೌಡ ಪಾಟೀಲ್ ಯತ್ನಾಳ್

ಪತ್ರಿಕೋದ್ಯಮ ಲಾಭ, ನಷ್ಟದ ಲೆಕ್ಕಾಚಾರ ಮಾಡುವಂತಾಗಿದ್ದು, ಸಾಮಾಜಿಕ ಕಳಕಳಿ ಮರೆಯಾಗಿದೆ. ಮಾಧ್ಯಮ ಮಿತ್ರರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕ್ರಮ
ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕ್ರಮ

ವಿಜಯಪುರ: ಪತ್ರಿಕೋದ್ಯಮ ಲಾಭ, ನಷ್ಟದ ಲೆಕ್ಕಾಚಾರ ಮಾಡುವಂತಾಗಿದ್ದು, ಸಾಮಾಜಿಕ ಕಳಕಳಿ ಮರೆಯಾಗಿದೆ. ಮಾಧ್ಯಮ ಮಿತ್ರರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ವಿಜಯಪುರ ನಗರದ ಕಂದಗಲ್ ಹನುಮಂತ ರಾಯ ರಂಗಮಂದಿರದಲ್ಲಿ ಆಯೋಜಿರುವ ಎರಡು ದಿನಗಳ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, 'ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೂಡ ಪತ್ರಕರ್ತರು ಆಗಿದ್ದರು. ಹೀಗಾಗಿ ಪತ್ರಕರ್ತರು ಹೆಮ್ಮೆ ಪಡಬೇಕು ಎಂದರು.

ಅಂತೆಯೇ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಪತ್ರಿಕೆಗಳು ಪ್ರೇರಣೆಯಾಗಿದ್ದವು.‌ ಆದರೆ, ಇಂದು ಪತ್ರಿಕಾ ಮಾಧ್ಯಮಗಳಲ್ಲಿ ಸಾಮಾಜಿಕ ಕಳಕಳಿ ಉಳಿದಿಲ್ಲ. ಲಾಭದಾಯಕ ದಂಧೆಯಾಗಿದೆ. ಪತ್ರಿಕೋದ್ಯಮ ಲಾಭ, ನಷ್ಟದ ಲೆಕ್ಕಾಚಾರ ಮಾಡುವಂತಾಗಿದೆ. ಸಾಮಾಜಿಕ ಕಳಕಳಿ ಮರೆಯಾಗಿದೆ. ಮಾಧ್ಯಮ ಮಿತ್ರರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪತ್ರಕರ್ತರು, ರಾಜಕಾರಣಿಗಳು ಸ್ವಯಂ ನೀತಿ ಸಂಹಿತೆ ರೂಪಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

'ಅವರಿಗೆ ಮಾನ, ಮರ್ಯಾದೆ ಇಲ್ಲ'
ಇದೇ ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, 'ಪಾಸ್ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವ ನಕಲಿ ಪತ್ರಕರ್ತರ ಗ್ಯಾಂಗ್ ಹೆಚ್ಚಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಯೂಟ್ಯೂಬ್ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಅವರಿಗೆ ಮಾನ, ಮರ್ಯಾದೆ ಇಲ್ಲ ಎಂದು ಆರೋಪಿಸಿದರು. ಒಬ್ಬ ಪ್ರಬುದ್ಧ ರಾಜಕಾರಣಿ ಆಗಲು 25, 30 ವರ್ಷ ಬೇಕು. ಮಾಧ್ಯಮದವರು ಏಕಾಏಕಿ ರಾಜಕಾರಣಿಗಳ ತೇಜೋವಧೆ ಮಾಡಬೇಡಿ. ವಿಶ್ವಾಸಾರ್ಹತೆ ಉಳಿಸಿಕೊಳ್ಳಿ ಎಂದರು.

ವ್ಯಂಗ್ಯ ಚಿತ್ರ ಪ್ರದರ್ಶನ ಉದ್ಘಾಟಿಸಿದ ನಿರಾಣಿ
ದಿನ ಪತ್ರಿಕೆಗಳು ಇಂದಿಗೂ ತಮ್ಮ ವಿಶ್ವಾಸ ಉಳಿಸಿಕೊಂಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುರುಗೇಶ ನಿರಾಣಿ ಅವರು ವ್ಯಂಗ್ಯ ಚಿತ್ರ ಪ್ರದರ್ಶನ ಉದ್ಘಾಟಿಸಿದರು. ಸಚಿವ ಸಿ.ಸಿ.ಪಾಟೀಲ ಅವರು ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು. ವಿಜಯಪುರ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪತ್ರಕರ್ತರು, ರಾಜಕಾರಣಿಗಳು ಸ್ವಯಂ ನೀತಿ ಸಂಹಿತೆ ರೂಪಿಸಿಕೊಳ್ಳಬೇಕು
ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ ರವೀಂದ್ರ ಭಟ್, ‘ಈ ಪ್ರಪಂಚದಲ್ಲಿ ಒಳ್ಳೆಯದು ಹೇಳಿ ಆಗಿದೆ. ಇನ್ನು ಆಚರಣೆಯಷ್ಟೇ ಬಾಕಿ ಇದೆ’ ಎಂದು ಸಿದ್ದೇಶ್ವರ ಶ್ರೀಗಳು ಹೇಳಿದ್ದಾರೆ. ಹೀಗಾಗಿ ಮಾತಿಗಿಂತ ಕೃತಿಗೆ ಎಲ್ಲರೂ ಆದ್ಯತೆ ನೀಡಬೇಕಿದೆ’ ಎಂದರು.ಪತ್ರಕರ್ತರು, ರಾಜಕಾರಣಿಗಳು ವಿಶ್ವಾಸ ಕಳೆದು ಕೊಂಡಿದ್ದೇವೆ. ಓದುಗರು, ಕೇಳುಗರು, ನೋಡುಗರ ವಿಶ್ವಾಸ ಗಳಿಸುವತ್ತ ಪತ್ರಕರ್ತರು ಗಮನ ಹರಿಸಬೇಕಿದೆ ಎಂದರು. ಸ್ಮಾರ್ಟ್ ಫೋನ್ ಇರುವವರೆಲ್ಲರೂ ಪತ್ರಕರ್ತರಾಗಿದ್ದಾರೆ. ಹೀಗಾಗಿ ನಿಜವಾದ ಪತ್ರಕರ್ತರನ್ನು ಗುರುತಿಸಿಸುವ ಕಾರ್ಯ ಆಗಬೇಕಿದೆ ಎಂದರು.

ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎ.‌ಎಸ್.ಪಾಟೀಲ ನಡಹಳ್ಳಿ, ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ವಿಜುಗೌಡ ಪಾಟೀಲ, ಅಪ್ಪು ಪಟ್ಟಣಶೆಟ್ಟಿ, ಎಸ್.ಕೆ.ಬೆಳ್ಳುಬ್ಬಿ, ಪತ್ರಕರ್ತರ ಸಂಘದ ರಾಜ್ಯ ಘಟಕದ  ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೋಶ, ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಚೂರಿ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್‌ ಶಿಂಧೆ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com