ಏರೋಸ್ಪೆಸ್ ಬೆಳವಣಿಗೆ, ರಕ್ಷಣಾ ಸಲಕರಣೆಗಳ ರಫ್ತಿನಲ್ಲಿ ಹೆಚ್ಚಳ, ಹೂಡಿಕೆದಾರರಿಗೆ ಕರ್ನಾಟಕವೇ ಮೊದಲ ಆಯ್ಕೆ: ಪ್ರಧಾನಿ ಮೋದಿ

ಆಧ್ಯಾತ್ಮಿಕ ನೆಲೆಯಾಗಿರುವ ಕರ್ನಾಟಕದಲ್ಲಿ ಡ್ರೋನ್‌ನಿಂದ ತೇಜಸ್ ವಿಮಾನಗಳ ತಯಾರಿಕೆ ನಡೆಯುತ್ತಿದೆ. ಹೂಡಿಕೆದಾರರಿಗೆ ರಾಜ್ಯವೇ ಮೊದಲ ಆಯ್ಕೆಯಾಗಿದ್ದು, ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಉದ್ಘಾಟನೆಯಿಂದ ತುಮಕೂರು ಔದ್ಯೋಗಿಕ ಜಿಲ್ಲೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ತುಮಕೂರು: ಆಧ್ಯಾತ್ಮಿಕ ನೆಲೆಯಾಗಿರುವ ಕರ್ನಾಟಕದಲ್ಲಿ ಡ್ರೋನ್‌ನಿಂದ ತೇಜಸ್ ವಿಮಾನಗಳ ತಯಾರಿಕೆ ನಡೆಯುತ್ತಿದೆ. ಹೂಡಿಕೆದಾರರಿಗೆ ರಾಜ್ಯವೇ ಮೊದಲ ಆಯ್ಕೆಯಾಗಿದ್ದು, ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಉದ್ಘಾಟನೆಯಿಂದ ತುಮಕೂರು ಔದ್ಯೋಗಿಕ ಜಿಲ್ಲೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ಬಳಿ ಹೆಚ್ ಎಎಲ್ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಲೋಕಾರ್ಪಣೆ ಹಾಗೂ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕ ಯುವ ಪ್ರತಿಭೆ, ಆವಿಷ್ಕಾರದ ತಾಣವಾಗಿದ್ದು, ಡಬಲ್ ಎಂಜಿನ್ ಸರ್ಕಾರ ರಾಜ್ಯದ ಪ್ರಗತಿಗಾಗಿ ಶ್ರಮಿಸುತ್ತಿದೆ. ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಉದ್ಘಾಟನೆಯಿಂದ ಸಾವಿರಾರು ಸಂಖ್ಯೆಯಲ್ಲಿ ಯುವ ಜನತೆಗೆ ಉದ್ಯೋಗ ದೊರೆಯಲಿದೆ. ಅಲ್ಲದೇ, ತುಮಕೂರು ಸುತ್ತಮುತ್ತ ವ್ಯಾಪಾರ ವಹಿವಾಟು ವೃದ್ಧಿಯಾಗಲಿದೆ ಎಂದರು. 

ಕಳೆದ 9 ವರ್ಷಗಳಲ್ಲಿ ಏರೋಸ್ಪೆಸ್ ಬೆಳವಣಿಗೆಯಾಗಿದೆ. ರಕ್ಷಣಾ ಉಪಕರಣಗಳ ರಫ್ತು ಪ್ರಮಾಣ ಹೆಚ್ಚಾಗಿದೆ. ಆಧುನಿಕ ಅಸಾಲ್ಟ್ ರೈಫಲ್‌ಗಳು, ವಿಮಾನ ವಾಹಕ ನೌಕೆ, ಯುದ್ದ ವಿಮಾನಗಳವರೆಗೂ ದೇಶದಲ್ಲಿಯೇ ತಯಾರಿಸಲಾಗುತ್ತಿದೆ. ದೇಶದಲ್ಲಿಯೇ ರಕ್ಷಣಾ ಉಪಕರಣಗಳನ್ನು ತಯಾರಿಸಲಾಗುತ್ತಿದ್ದು, ಸೇನೆ ಕೂಡಾ ಬಳಸುತ್ತಿದೆ. ಹೆಚ್ ಎಎಲ್ ರಕ್ಷಣೆಯಲ್ಲಿ ನಮ್ಮ ಸ್ವಾವಲಂಬನೆಯನ್ನು ಹೆಚ್ಚಿಸಲಿದೆ ಎಂದ ಪ್ರಧಾನಿ ಮೋದಿ, ನಮ್ಮ ರಕ್ಷಣೆಗಾಗಿ ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಬೇಕು, ಆತ್ಮನಿರ್ಭರ್ ಮೂಲಕ ಹೆಲಿಕಾಪ್ಟರ್ ತಯಾರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 4 ಲಕ್ಷ ಕೋಟಿ ವ್ಯಾಪಾರ ವಹಿವಾಟು ನಡೆಯಲಿದೆ.

ಹೆಚ್ ಎಎಲ್ ಹೆಸರು ಬಳಸಿ ನಮ್ಮನ್ನು  ಬೆದರಿಸಲು ಯತ್ನಿಸಿದರು. ರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಸಂಸತ್ತಿನ ಹಲವು ಕೆಲಸದ ಸಮಯಗಳು ಅದಕ್ಕಾಗಿ ವ್ಯರ್ಥವಾಯಿತು. ಎಚ್‌ಎಎಲ್‌ನ ಹೆಲಿಕಾಪ್ಟರ್ ಫ್ಯಾಕ್ಟರಿ ಮತ್ತು ಅದರ ಹೆಚ್ಚುತ್ತಿರುವ ಶಕ್ತಿ ಸುಳ್ಳು ಆರೋಪ ಮಾಡಿದವರನ್ನು ಬಯಲು ಮಾಡಲಿದೆ ಎಂದು ಹೆಸರು ಹೇಳದೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. 

ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ಅನುದಾನ ನೀಡುವ ಮೂಲಕ ತುಮಕೂರು ಚಿಕ್ಕಬಳ್ಳಾಪುರ, ದಾವಣೆಗೆರೆ, ಚಿತ್ರದುರ್ಗ ಜಿಲ್ಲೆಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಈ ಯೋಜನೆಯಿಂದ ಮಧ್ಯ ಕರ್ವಾಟಕದ ಭಾಗಗಳಿಗೆ ಲಾಭವಾಗಲಿದೆ. ಪ್ರತಿ ಮನೆಗೂ ನೀರು, ಪ್ರತಿ ಜಮೀನಿಗೂ ನೀರಾವರಿ ಕಲ್ಪಿಸುತ್ತೇವೆ, ನಿವಾಸಕ್ಕೆ ನೀರು ಜೊತೆಗೆ ಭೂಮಿಗೆ ನೀರಾವರಿ ಬಲ ತುಂಬಲಾಗುವುದು ಎಂದರು.

ಜಲಜೀವನ್ ಮಿಷನ್ ಯೋಜನೆಯಡಿ ದೇಶದಲ್ಲಿ 3 ಕೋಟಿ ಕುಟುಂಬಗಳಿಗೆ ನೀರು ಪೂರೈಸಲಾಗುತ್ತಿದೆ. ಬಜೆಟ್ ನಲ್ಲಿ ಈ ಯೋಜನೆಯಡಿ ಹೆಚ್ಚಿನ ಹಣ ಮೀಸಲಿಡಲಾಗಿದೆ. ಇದರಿಂದ ಬಡ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದ ಪ್ರಧಾನಿ ಬಜೆಟ್ ನಲ್ಲಿ ಸಿರಿಧಾನ್ಯಗಳ ಉತ್ತೇಜನಕ್ಕೆ ಅವಕಾಶ ನೀಡಲಾಗಿದೆ. ಸಶಕ್ತ ಭಾರತ ನಿರ್ಮಾಣಕ್ಕಾಗಿ ಬಜೆಟ್ ಮಂಡಿಸಲಾಗಿದೆ. ವಿಶ್ವ ಮಟ್ಟದಲ್ಲಿ ಬಜೆಟ್ ಕುರಿತು ಚರ್ಚೆಯಾಗುತ್ತಿದ್ದು. ಸರ್ವ ಪ್ರಿಯ, ಸರ್ವ ಸ್ಪರ್ಶಿ ಬಜೆಟ್ ನೀಡಿದ್ದೇವೆ, ಸಶಕ್ತ ಭಾರತದ ಗುರಿಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು,  ಗತಿಮನ್ ಭಾರತದ ದಿಸೆಯಲ್ಲಿ ಅತಿದೊಡ್ಡ ಹೆಜ್ಜೆಯಾಗಿದೆ ಎಂದು ಬಣ್ಣಿಸಿದರು. 

ಇದಕ್ಕೂ ಮುನ್ನಾ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕರ್ನಾಟಕವೆಂದರೆ ಅಭಿವೃದ್ಧಿ, ಶಾಂತಿ ಮತ್ತು ಸೌಹಾರ್ದತೆಯಾಗಿದ್ದು, ಭಾರತದ ಭವಿಷ್ಯ ಎಂದು ಗುಣಗಾನ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com