ಉಡುಪಿ: ಅಪ್ರಾಪ್ತ ಮಲಮಗಳ ಮೇಲೆ ಅತ್ಯಾಚಾರ ಎಸಗಿದ 49 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ
ಅಪ್ರಾಪ್ತ ಮಲ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ 49 ವರ್ಷದ ವ್ಯಕ್ತಿಗೆ ಉಡುಪಿಯ ಪೊಕ್ಸೊ ಪ್ರಕರಣಗಳ ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
Published: 08th February 2023 02:59 PM | Last Updated: 08th February 2023 05:31 PM | A+A A-

ಪ್ರಾತಿನಿಧಿಕ ಚಿತ್ರ
ಉಡುಪಿ: ಅಪ್ರಾಪ್ತ ಮಲ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ 49 ವರ್ಷದ ವ್ಯಕ್ತಿಗೆ ಉಡುಪಿಯ ಪೊಕ್ಸೊ ಪ್ರಕರಣಗಳ ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ವ್ಯಕ್ತಿಯನ್ನು ಗಣೇಶ್ ನಾಯಕ್ ಎಂದು ಗುರುತಿಸಲಾಗಿದೆ.
ಚಾರ್ಜ್ ಶೀಟ್ ಪ್ರಕಾರ, ನಾಯಕ್ ಸಂತ್ರಸ್ತೆಯ ತಾಯಿಯೊಂದಿಗೆ ಎರಡನೇ ಮದುವೆಯಾಗಿದ್ದರು ಮತ್ತು ನಂತರ ಅವರೊಂದಿಗೆ ವಾಸಿಸುತ್ತಿದ್ದರು. ಅವರ ಪತ್ನಿ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದಾಗ, ನಾಯಕ್ 2021ರ ಅಕ್ಟೋಬರ್‌ನಲ್ಲಿ ಅಪ್ರಾಪ್ತ ಮಲಮಗಳಿಗೆ ಮದ್ಯ ಬೆರೆಸಿದ ಜ್ಯೂಸ್ ನೀಡಿ ಲೈಂಗಿಕ ಕಿರುಕುಳ ನೀಡಿದ್ದರು.
ಮೂರು ತಿಂಗಳ ನಂತರ ತಾಯಿ ಹಿಂದಿರುಗಿದಾಗ ಮಗಳು ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಸಂತ್ರಸ್ತೆ ತನಗಾದ ಸಂಕಟವನ್ನು ವಿವರಿಸಿದಾಗ 2022ರ ಜನವರಿಯಲ್ಲಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ: ಮಂಗಳೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕರಾಟೆ ಶಿಕ್ಷಕನಿಗೆ 10 ವರ್ಷ ಜೈಲು ಶಿಕ್ಷೆ
ಆಗಿನ ಸರ್ಕಲ್ ಇನ್ಸ್‌ಪೆಕ್ಟರ್ ಕೆಆರ್ ಗೋಪಿಕೃಷ್ಣ ಅವರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ವೇಳೆ ಒಟ್ಟು 10 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಯಿತು.
ಜೀವಾವಧಿ ಶಿಕ್ಷೆಯ ಜೊತೆಗೆ, ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು ಅಪರಾಧಿಗೆ 10,000 ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಅವರು ಹೆಚ್ಚುವರಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ.
ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ವೈಟಿ ರಾಘವೇಂದ್ರ ವಾದ ಮಂಡಿಸಿದ್ದರು.