ನಾನು ಯಾರಿಗೆ ಫೋಟೋ ಕಳಿಸಿದ್ದೇನೆ ಎಂದು ಮೂವರು ಅಧಿಕಾರಿಗಳ ಹೆಸರು ಬಹಿರಂಗಪಡಿಸಲಿ: ರೂಪಾಗೆ ರೋಹಿಣಿ ಸಿಂಧೂರಿ ಸವಾಲು

ಐಪಿಎಸ್ ಮತ್ತು ಐಎಎಸ್ ಮಹಿಳಾ ಅಧಿಕಾರಿಗಳ ವಾಕ್ಸಮರ ತಾರಕಕ್ಕೇರಿ ವೈಯಕ್ತಿಕ ವಿಚಾರಗಳನ್ನು ಕೆದಕಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿ ಇದೀಗ ಸರ್ಕಾರ ಮಟ್ಟಕ್ಕೂ ಹೋಗಿದೆ. ಇಬ್ಬರು ಮಹಿಳಾ ಅಧಿಕಾರಿಗಳ ಜಗಳ ಕಂಡು ಮುಖ್ಯಮಂತ್ರಿಗಳು ಇಬ್ಬರಿಗೂ ನೊಟೀಸ್ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ

ಬೆಂಗಳೂರು: ಐಪಿಎಸ್ ಮತ್ತು ಐಎಎಸ್ ಮಹಿಳಾ ಅಧಿಕಾರಿಗಳ ವಾಕ್ಸಮರ ತಾರಕಕ್ಕೇರಿ ವೈಯಕ್ತಿಕ ವಿಚಾರಗಳನ್ನು ಕೆದಕಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿ ಇದೀಗ ಸರ್ಕಾರ ಮಟ್ಟಕ್ಕೂ ಹೋಗಿದೆ. ಇಬ್ಬರು ಮಹಿಳಾ ಅಧಿಕಾರಿಗಳ ಜಗಳ ಕಂಡು ಮುಖ್ಯಮಂತ್ರಿಗಳು ಇಬ್ಬರಿಗೂ ನೊಟೀಸ್ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಇನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಇಬ್ಬರಿಗೂ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಂತರ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರನ್ನು ಭೇಟಿ ಮಾಡಿ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ವಿರುದ್ದ ದೂರು ನೀಡಿದ್ದಾರೆ. ವಂದಿತಾ ಶರ್ಮ ಅವರ ಕೊಠಡಿಯಲ್ಲಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ ರೋಹಿಣಿ ಸಿಂಧೂರಿ, ರೂಪಾ ಅವರು ಮೊದಲಿನಂದಲೂ ನನ್ನ ಮೇಲೆ ವೈಯಕ್ತಿಕ ಆರೋಪ, ದ್ವೇಷ ಮಾಡುತ್ತಾ ಬಂದಿದ್ದಾರೆ. ನನ್ನ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿ ಹೊರಗೆ ಬಂದ ಬಳಿಕ ವಿಧಾನಸೌಧ ಮುಂದೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ರೋಹಿಣಿ ಸಿಂಧೂರಿ, ಮುಖ್ಯ ಕಾರ್ಯದರ್ಶಿಗಳಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ. ರೂಪಾ ಅವರು ಕಾನೂನು ವ್ಯಾಪ್ತಿ ಮೀರಿದ್ದಾರೆ, ಪದೇ ಪದೆ ನಮ್ಮ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ,ಸೋಷಿಯಲ್​ ಮಿಡಿಯಾದಲ್ಲಿ ನನ್ನ ಮೇಲೆ ಆರೋಪ ಮಾಡಿದ್ದಾರೆ, ಐಎಎಸ್, ಐಪಿಎಸ್ ಅಧಿಕಾರ ವ್ಯಾಪ್ತಿಯಲ್ಲಿ ಇಂತಹ ಕ್ರಮಗಳು ಕಾನೂನು ವ್ಯಾಪ್ತಿಗೆ ಮೀರಿದ್ದಾಗಿವೆ ಎಂದಿದ್ದಾರೆ.

ಮಾಧ್ಯಮಗಳ ಮುಂದೆ ಅಧಿಕಾರಿಗಳು ಮಾತನಾಡಬಾರದು ಎಂದು ಸುತ್ತೋಲೆ ನಿಯಮವಿದೆ. ರೂಪಾ ಅವರು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿ ಬಂದಿದ್ದೇನೆ. ಅದರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೇಳಿದ್ದೇನೆ. ಐಪಿಎಸ್ ಅಧಿಕಾರಿಯಾಗಿರುವ ರೂಪಾ ಅವರ ಕಾರ್ಯವ್ಯಾಪ್ತಿಗೂ ನಮಗೂ ಸಂಬಂಧವಿಲ್ಲ. ಅವರದ್ದು ಸೇವೆಯ ವ್ಯಾಪ್ತಿಯೇ ಬೇರೆ, ನನ್ನ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ಟಾರ್ಗೆಟ್ ಮಾಡಿ ಹಾಕುತ್ತಿದ್ದಾರೆ. ನನ್ನ ಅಕೌಂಟ್ ಸೋಷಿಯಲ್ ಮೀಡಿಯಾದಲ್ಲಿ ಇಲ್ಲ.

ನಾನು ಮೂವರು ಅಧಿಕಾರಿಗಳಿಗೆ ನನ್ನ ವೈಯಕ್ತಿಕ ಫೋಟೋಗಳನ್ನು ಕಳುಹಿಸಿದ್ದೇನೆ ಎಂದು ಆರೋಪ ಮಾಡುತ್ತಿದ್ದಾರೆ. ಆ ಮೂವರು ಅಧಿಕಾರಿಗಳ ಹೆಸರನ್ನು ರೂಪಾ ಅವರು ಬಹಿರಂಗಪಡಿಸಲಿ. ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು. 

ರೋಹಿಣಿ ಸಿಂಧೂರಿ ದೂರು ಕೊಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ರೂಪಾ ಅವರಿಗೆ ಬುಲಾವ್​​​ ನೀಡಿದ್ದು, ರೂಪಾ ಮೌದ್ಗಿಲ್ ಯಾವುದೇ ಕ್ಷಣ​​​​​​ ವಿಧಾನಸೌಧಕ್ಕೆ ಬರುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com