ಡಬಲ್ ಮರ್ಡರ್ ಪ್ರಕರಣ: ಕಾಲಿಗೆ ಗುಂಡು ಹಾರಿಸಿ ಇಬ್ಬರು ಆರೋಪಿಗಳ ಸೆರೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡ ಬೆಳವಂಗಲ ಪೊಲೀಸರು, ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಹುಲಿಕುಂಟೆ ಗ್ರಾಮದ ವಿನಯ್ ಹಾಗೂ ತ್ರಿಮೂರ್ತಿ ಬಂಧಿತರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದೊಡ್ಡಬೆಳವಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡ ಬೆಳವಂಗಲ ಪೊಲೀಸರು, ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಹುಲಿಕುಂಟೆ ಗ್ರಾಮದ ವಿನಯ್ ಹಾಗೂ ತ್ರಿಮೂರ್ತಿ ಬಂಧಿತರು.

ಶುಕ್ರವಾರ ದೊಡ್ಡ ಬೆಳವಳವಂಗಲದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ವೇಳೆ ಎರಡು ಗುಂಪಿನ ನಡುವೆ ನಡೆದ ಮಾರಾಮಾರಿಯಲ್ಲಿ ಭರತ್ ಮತ್ತು ಪ್ರೀತಿಕ್ ಎಂಬ ಯುವಕರಿಗೆ ಆರೋಪಿಗಳು ಚಾಕುವಿನಿಂದ ಇರಿದಿದ್ದರು. ಘಟನೆ ನಡೆದ ನಂತರ ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. 

ಭಾನುವಾರ ಮುಂಜಾನೆ ಸ್ನೇಹಿತರೊಬ್ಬರ ಬಳಿ ಹಣ ವಸೂಲಿ ಮಾಡಲು ಆರೋಪಿಗಳು ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಬಳಿ ಬರುತ್ತಾರೆ ಎಂಬ ಮಾಹಿತಿ ಪೊಲೀಸ್ ತಂಡಗಳಿಗೆ ಲಭಿಸಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ಧಾವಿಸಿ ಆರೋಪಿಗಳನ್ನು ಸುತ್ತುವರಿದಿದ್ದಾರೆ. ಆದರೆ, ಶರಣಾಗಲು ನಿರಾಕರಿಸಿದ ಆರೋಪಿಗಳು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾರೆ.

ಪೊಲೀಸರು ಎಚ್ಚರಿಕೆಯ ಗುಂಡು ಹಾರಿಸಿದರೂ ಆರೋಪಿಗಳು ಕದಲಲಿಲ್ಲ ಹೀಗಾಗಿ ಪೊಲೀಸರು ಅವರ ಕಾಲಿಗೆ ಗುಂಡು ಹಾರಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಚೇತರಿಸಿಕೊಂಡ ನಂತರ ವಿಚಾರಣೆ ನಡೆಸಲಾಗುವುದು. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಯಾವುದೇ ಪಂದ್ಯಾವಳಿಗಳಿಗೆ ಅನುಮತಿ ನೀಡದಂತೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com