ಕೊಪ್ಪಳ: ಕೊಪ್ಪಳ ಜಿಲ್ಲೆಯ ಹಿಟ್ನಾಳ್ ಗ್ರಾಮದಲ್ಲಿ ದಲಿತ ಕುಟುಂಬದವರನ್ನು ಥಳಿಸಿದ ಆರೋಪದ ಮೇಲೆ ಎಂಟು ಮಂದಿಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹಲ್ಲೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕಳೆದ ವಾರ ಹಿಟ್ನಾಳ್‌ನಲ್ಲಿ ನಡೆದ ಗ್ರಾಮದ ಜಾತ್ರೆಯಲ್ಲಿಆರೋಪಿಗಳು ಮತ್ತು ಸಂತ್ರಸ್ತರ ನಡುವೆ ವಾಗ್ವಾದ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ. ಜಾತ್ರೆಯಲ್ಲಿ ದಲಿತ ಯುವಕರು ಇತರರಿಗೆ ತೊಂದರೆ ನೀಡುತ್ತಿದ್ದರು ಎಂದು ಗ್ರಾಮಸ್ಥರು ಹೇಳಿಕೊಂಡರೆ, ದೇವಸ್ಥಾನಕ್ಕೆ ನುಗ್ಗಿದ ನಂತರ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದವರು ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಗೊಳಗಾದ ದಲಿಯರು ಹಿಂದಿನ ದಿನ ಸಂಜೆ ದೇವಸ್ಥಾನಕ್ಕೆ ನುಗ್ಗಿದ್ದರು ಎನ್ನಲಾಗಿದೆ. ಇದಕ್ಕೆ ಕೆಲ ಗ್ರಾಮಸ್ಥರು ಚಕಾರವೆತ್ತಲಿಲ್ಲ. ಮರುದಿನ ಗ್ರಾಮದ ಮೇಲ್ವರ್ಗದ ಸದಸ್ಯರು ದಲಿತರ ಮನೆಗೆ ನುಗ್ಗಿ ಥಳಿಸಲು ಆರಂಭಿಸಿದ್ದಾರೆ. ಆಗ ದಲಿತರ ಕಾಲೋನಿಯಲ್ಲಿ ಹೆಚ್ಚು ಜನ ಜಮಾಯಿಸಿದಾಗ ಮೇಲ್ಜಾತಿಯವರು ಎಚ್ಚರಿಕೆ ನೀಡಿ ಅಲ್ಲಿಂದ ತೆರಳಿದರು.
ಗಾಯಾಳುಗಳಿಗೆ ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಅದೇ ದಿನ ನಾವು ಪೊಲೀಸರನ್ನು ಸಂಪರ್ಕಿಸಿದ್ದೇವೆ. ಮೊದಲ ಎರಡು ದಿನ ಅನೇಕ ಗ್ರಾಮಸ್ಥರು ಮತ್ತು ರಾಜಕೀಯ ಮುಖಂಡರು ಪ್ರಕರಣ ದಾಖಲಿಸದಂತೆ ತಡೆಯಲು ಪ್ರಯತ್ನಿಸಿದರು. ಇದು ಮೊದಲ ಬಾರಿ ಅಲ್ಲದ ಕಾರಣ ನಾವು ದೂರು ನೀಡಿದ್ದೇವೆ. ಗ್ರಾಮದಲ್ಲಿ ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂದು ಗಾಯಗೊಂಡ ವ್ಯಕ್ತಿಯೊಬ್ಬ ಹೇಳಿದರು.
ಘಟನೆ ಸಂಬಂಧ ಹಿಟ್ನಾಳ್ ನಿವಾಸಿಗಳಾದ ಫಕೀರವ್ವ ಗುನ್ನಾಳ್, ಶ್ರೀಧರ ಮಡಿವಾಳ್, ಗಣೇಶ್ ಬೆಣಕಲ್, ಗುರುಕಿರಣ್ ಇಳಿಗೇರ್, ಕಾಶಿನಾಥ ಉಪ್ಪಾಪರ್, ದುರ್ಗೇಶ್ ಗೊಲ್ಲರ, ಶಿವಕುಮಾರ ಭಜಂತ್ರಿ, ಅಪ್ಪಾಜಿ ವಾಲ್ಮೀಕಿ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುನಿರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Advertisement