ಯಾವ ಶಕ್ತಿ ನನ್ನನ್ನು ತಡೆಯುತ್ತದೆ ನೋಡೋಣ: ಐಪಿಎಸ್ ಅಧಿಕಾರಿ ರೂಪಾ ಗುಡುಗು; ಸಿಂಧೂರಿ ಹೊಸ ಮನೆ ಫೋಟೋ ಬಿಡುಗಡೆ

ಮತ್ತೆ ಗುಡುಗಿರುವ ಡಿ ರೂಪಾ, ರೋಹಿಣಿ ಸಿಂಧೂರಿ ವಿರುದ್ಧ ಅಕ್ರಮ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದ್ದು ಯಾವ ಶಕ್ತಿ ನನ್ನನ್ನು ತಡೆ.ಯುತ್ತದೆ ನೋಡೋಣ ಎಂದು ಸವಾಲು ಹಾಕಿದ್ದಾರೆ. 
ಡಿ ರೂಪಾ, ರೋಹಿಣಿ ಸಿಂಧೂರಿ(ಸಂಗ್ರಹ ಚಿತ್ರ)
ಡಿ ರೂಪಾ, ರೋಹಿಣಿ ಸಿಂಧೂರಿ(ಸಂಗ್ರಹ ಚಿತ್ರ)
Updated on

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ IAS ಅಧಿಕಾರಿ ರೋಹಿಣಿ ಸಿಂಧೂರಿಯವರಿಗೆ ಸಂಬಂಧಿಸಿದ ಕೆಲವು ವೈಯಕ್ತಿಕ ಫೋಟೋಗಳನ್ನು ಬಿಡುಗಡೆ ಮಾಡಿದಲ್ಲಿಂದ ಆರಂಭಿಸಿ ಸರ್ಕಾರದ ಮಟ್ಟದವರೆಗೆ ದೂರು ಹೋಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ, ಗೃಹ ಸಚಿವರಾದಿಯಾಗಿ ಹಲವರಿಂದ ಛೀಮಾರಿ ಹಾಕಿಸಿಕೊಂಡು ಬಹಿರಂಗವಾಗಿ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದರೂ ಸಹ IPS ಅಧಿಕಾರಿ ರೂಪಾ ಅವರ ಆರೋಪ, ಆಕ್ರೋಶ ಇನ್ನೂ ನಿಂತಿಲ್ಲ.

ನಿನ್ನೆ ರೋಹಿಣಿ ಸಿಂಧೂರಿಯವರ ಮೇಲೆ ಬೆಂಗಳೂರಿನ ಜಾಲಹಳ್ಳಿಯಲ್ಲಿ ಕೋಟಿ ರೂಪಾಯಿಗಳ ಬಂಗಲೆಯನ್ನು ನಿರ್ಮಿಸುತ್ತಿದ್ದು, ಅದಕ್ಕೆ ಪೂರೈಕೆಯಾಗುತ್ತಿರುವ ವಸ್ತುಗಳು, ಮನೆ ನಿರ್ಮಾಣಕ್ಕೆ ಮಾಡುತ್ತಿರುವ ಖರ್ಚುಗಳ ಬಗ್ಗೆ ಪ್ರಶ್ನೆ ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದ ಐಪಿಎಸ್ ಅಧಿಕಾರಿ ರೂಪಾ ಇಂದು ಜಾಲಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಮನೆ, ಅದರ ನಕ್ಷೆ, ವಾಸ್ತು, ಕೊಠಡಿಗಳ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. 

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಷಾರಾಮಿ ಬಂಗಲೋ ನಿರ್ಮಾಣ ಆರೋಪ ಕೇಳಿಬಂದಿದೆ. ಐಪಿಎಸ್ ಅಧಿಕಾರಿ ಡಿ.ರೂಪಾ ಮಾಡಿರುವ ಆರೋಪಗಳಲ್ಲಿ‌ ಒಂದಾಗಿರುವ ಬಂಗಲೆ 4,800 ಅಡಿ ವಿಸ್ತೀರ್ಣದ ಜಾಗದಲ್ಲಿ ಭವ್ಯವಾಗಿ ನಿರ್ಮಾಣವಾಗುತ್ತಿದೆ. ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜು ರಸ್ತೆಯಲ್ಲಿರುವ ಸೆಂಚುರಿ ಅರ್ಟಿಜನ್ ಲೇಔಟ್ ನಲ್ಲಿ ನಿವೇಶನದಲ್ಲಿ ನಿರ್ಮಾಣವಾಗುತ್ತಿದ್ದು, ಇಟಾಲಿಯನ್ ಫರ್ನಿಚರ್ ಗಳನ್ನು 1ರಿಂದ 2 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಸುಮಾರು 6 ಲಕ್ಷ ರೂಪಾಯಿ ಬೆಲೆ ಬಾಳುವ ಕಿಟಕಿ-ಬಾಗಿಲುಗಳನ್ನು ಹಾಕುತ್ತಿದ್ದಾರೆ. 26 ಲಕ್ಷ ಖರ್ಚು ಮಾಡಿ ಜರ್ಮನ್ ಮೇಡ್ ಪೀಠೋಪಕರಣಗಳನ್ನು ತರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ ಮತ್ತೆ ಗುಡುಗಿರುವ ಡಿ ರೂಪಾ, ರೋಹಿಣಿ ಸಿಂಧೂರಿ ವಿರುದ್ಧ ಅಕ್ರಮ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದ್ದು ಯಾವ ಶಕ್ತಿ ನನ್ನನ್ನು ತಡೆ.ಯುತ್ತದೆ ನೋಡೋಣ ಎಂದು ಸವಾಲು ಹಾಕಿದ್ದಾರೆ. 

ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ನೀಡಿದ ಆ 3 ಪುಟಗಳ ದೂರಿನಲ್ಲೇನಿದೆ?: ವಿಧಾನಸೌಧದಲ್ಲಿರುವ ಸಿಎಸ್​ ಕಚೇರಿಯಲ್ಲಿ ವಂದಿತಾ ಶರ್ಮಾರನ್ನು ನಿನ್ನೆ ಭೇಟಿಯಾದ ಡಿ.ರೂಪಾ, ಸುಮಾರು 35 ನಿಮಿಷ ಸಿಎಸ್​ ಜೊತೆ ಚರ್ಚಿಸಿ ರೋಹಿಣಿ ಸಿಂಧೂರಿ ವಿರುದ್ಧ ದಾಖಲೆ ಸಮೇತ ದೂರು ನೀಡಿದ್ದಾರೆ. ಕೆಲ ಮಹತ್ವದ ದಾಖಲೆಗಳನ್ನು ನೀಡಿದ್ದಾರೆ.

ಐಎಎಸ್ ಡಾ. ರವಿಶಂಕರ್ ಅವರು ಈಕೆಯ ಮೇಲೆ ಪ್ರಿಲಿಮಿನರಿ ತನಿಖೆಯಲ್ಲಿ ತಪ್ಪುಮಾಡಿರುವುದು ಸಾಬೀತಾಗಿದೆ. ಮೈಸೂರಿನ ಡಿಸಿ ಮನೆ, ಹೆರಿಟೇಜ್ building ಅಂತಾ ಇದ್ದರೂ ಅಲ್ಲಿ ಟೈಲ್ಸ್ ಹಾಕಿದ್ದು, ಸ್ವಿಮ್ಮಿಂಗ್ ಪೂಲ್ ಮಾಡಿದ್ದು. ಅಲ್ಲದೇ ಕೋವಿಡ್ ನಿಂದ ಜನ ಸಾಯುತ್ತಿದ್ದರು ಮಾನವೀಯತೆ ಇಲ್ಲದೇ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿದ್ದು ಸಾಬೀತಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

ಜಾಲಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಮನೆಗೆ ರೋಹಿಣಿ ಸಿಂಧೂರಿ ತೆರಿಗೆ ಇಲ್ಲದೇ 2 ಕೋಟಿ ರೂ. ಬೆಲೆ ಬಾಳುವ ಇಟಲಿ ಫರ್ನೀಚರ್ಸ್ ತರಿಸಿದ್ದಾರೆ. ಮನೆ ಬಾಗಿಲಿಗೆ ಹಾಕುವ, ಕ್ಲಾಂಪ್​ಗಳಿಗೆ 6 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಹೀಗಾಗಿ ರೋಹಿಣಿ ಆದಾಯದ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.

ರೋಹಿಣಿ ಸಿಂಧೂರಿ ಅವರ ವಿರುದ್ಧ ರವಿಚಂದ್ರೇಗವಡ ನೀಡಿರುವ ದೂರಿನ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ವತಿಯಿಂದ ತಿರುಪತಿಯಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನದ 10 ಕೋಟಿ ರೂಪಾಯಿ ಟೆಂಡರ್​ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮೈಸೂರಿನ ಮನೆ ಬಿಟ್ಟು ಹೋಗುವಾಗ ಕೆಲ ಬೆಲೆಬಾಳುವ ವಸ್ತುಗಳನ್ನು ತಮ್ಮ ಸ್ವಂತ ನಿವಾಸಕ್ಕೆ ತೆಗೆದುಕೊಂಡು ಹೋಗಿರುವ ಬಗ್ಗೆ ಆರೋಪ ಮಾಡಿದ್ದಾರೆ. ಹರ್ಷಾ ಗುಪ್ತಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಎರಡು ವರದಿಗಳನ್ನು ಸಲ್ಲಿಸಿದ್ದು, ಆ ಬಗ್ಗೆ ಕ್ರಮಗೊಳ್ಳುವಂತೆ ಕೋರಿದ್ದಾರೆ.

ಅಲ್ಲದೇ ವಿಧಾನಸಭೆ ಸದಸ್ಯರಾದ ಸಾರಾ ಮಹೇಶ್ ಅವರ ಜೊತೆ ಸಂಧಾನಕ್ಕೆ ಹೋಗಿದ್ದಾರೆ. ಈ ಮೂಲಕ ರೋಹಿಣಿ ಸಿಂಧೂರಿ ಅವರು ಸರ್ವಿಸ್ ಕಂಡಕ್ಟ್ ರೂಲ್ಸ್​ ಉಲ್ಲಂಘಿಸಿದ್ದಾರೆ. ವೃತ್ತಿಯಲ್ಲಿ ಈ ರೀತಿ ಸಂಧಾನ ಮಾಡಿಕೊಳ್ಳುವ ಯಾವುದೇ ನಿಯಮವಿಲ್ಲ. ಹಾಗಾಗಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಮಾಧ್ಯಮಗಳ ಬಳಿ ಹೋಗದಂತೆ ರೋಹಿಣಿ- ರೂಪಾಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ತಾಕೀತು: ಇಬ್ಬರೂ ಸಹ ಮಾಧ್ಯಮಗಳ ಮುಂದೆ ಹೋಗಬಾರದು ಎಂದು ರೋಹಿಣಿ ಸಿಂಧೂರಿ ಮತ್ತು ಡಿ.ರೂಪಗೆ ಸಿಎಸ್ ವಂದಿತಾ ಶರ್ಮಾ ತಾಕೀತು ಮಾಡಿದ್ದಾರೆ.

ನಿಮ್ಮಿಬ್ಬರ ನಡೆಯಿಂದ ರಾಜ್ಯ ಸರ್ಕಾರಕ್ಕೆ ಮುಜುಗರವಾಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಏನನ್ನೂ ಪೋಸ್ಟ್ ಮಾಡಬಾರದು. ಇಬ್ಬರೂ ಸಹ ಮಾಧ್ಯಮಗಳ ಮುಂದೆ ಹೋಗಬಾರದೆಂದು. ಈ ವಿಚಾರಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡು ಹೋಗಬಾರದು ಎಂದು ಪ್ರತ್ಯೇಕವಾಗಿ ದೂರು ನೀಡಲು ಬಂದಿದ್ದ ಡಿ.ರೂಪಾ, ರೋಹಿಣಿ ಸಿಂಧೂರಿಗೆ ಸಿಎಸ್ ವಂದಿತಾ ಶರ್ಮಾ ಖಡಕ್ ಸೂಚನೆ ನೀಡಿ ಕಳುಹಿಸಿದ್ದಾರೆ.

ಮೊನ್ನೆಯಿಂದಲೂ ಈ ಇಬ್ಬರ ನಡುವೆ ಸೋಶಿಯಲ್ ಮಿಡಿಯಾದಲ್ಲಿ ಆರೋಪ-ಪ್ರತ್ಯಾರೋಪಗಳ ಜಟಾಪಟಿ ತಾರಕ್ಕಕೇರಿದ್ದು, ಸಾರ್ವಜನಿಕರು ಇಬ್ಬರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬೆಳವಣಿಗೆ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತದೆ ಎಂದು ತಿಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಮ್ಮ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com