ಇಬ್ಬರನ್ನು ಕೊಂದಿದ್ದ ಕಾಡಾನೆ ಸೆರೆ ಹಿಡಿದ ಅರಣ್ಯಾಧಿಕಾರಿಗಳ ಮೇಲೆ ಗ್ರಾಮಸ್ಥರಿಂದ ಕಲ್ಲು ತೂರಾಟ
ಈ ಹಿಂದೆ ಇಬ್ಬರನ್ನು ಕೊಂದಿದ್ದ ಕಾಡಾನೆಯನ್ನು ಸೆರೆಹಿಡಿದ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ತಮಗೆ ತೊಂದರೆ ನೀಡುತ್ತಿರುವ ಇತರ ಆನೆಗಳನ್ನು ಸಹ ಅಧಿಕಾರಿಗಳು ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
Published: 24th February 2023 12:42 PM | Last Updated: 24th February 2023 03:35 PM | A+A A-

ಕಾಡಾನೆ (ಸಂಗ್ರಹ ಚಿತ್ರ)
ದಕ್ಷಿಣ ಕನ್ನಡ: ಈ ಹಿಂದೆ ಇಬ್ಬರನ್ನು ಕೊಂದಿದ್ದ ಕಾಡಾನೆಯನ್ನು ಸೆರೆಹಿಡಿದ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ತಮಗೆ ತೊಂದರೆ ನೀಡುತ್ತಿರುವ ಇತರ ಆನೆಗಳನ್ನು ಸಹ ಅಧಿಕಾರಿಗಳು ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾಡಾನೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿರುವ ಅಧಿಕಾರಿಗಳು ಸಂಭ್ರಮಾಚರಣೆ ನಡೆಸುತ್ತಿರುವಾಗಲೇ ಶುಕ್ರವಾರ ಈ ಘಟನೆ ನಡೆದಿದೆ.
ಸೆರೆ ಹಿಡಿದ ಕಾಡಾನೆಯನ್ನು ಸಾಕಾನೆಗಳ ನೆರವಿನಿಂದ ರಸ್ತೆ ಬದಿಗೆ ತಂದಿದ್ದರು. ಈ ವೇಳೆ ಅಲ್ಲಿ ಸೇರಿದ್ದ ಸಾರ್ವಜನಿಕರು ಆನೆಗಳನ್ನು ಹಿಡಿಯುವ ಕಾರ್ಯಾಚರಣೆ ಪೂರ್ಣಗೊಳಿಸಿಲ್ಲ. ಕೇವಲ ಒಂದು ಆನೆಯನ್ನು ಮಾತ್ರ ಹಿಡಿದಿದ್ದೀರಿ ಎಂದು ಆರೋಪಿಸಿ ಅಧಿಕಾರಿಗಳ ಮೇಲೆ ಮುಗಿಬಿದ್ದಿದ್ದಾರೆ. ಇದೇ ವಿಚಾರವಾಗಿ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದೆ.
ಕಾರ್ಯಾಚರಣೆಯನ್ನು ನಿಲ್ಲಿಸಿಲ್ಲ. ನಾಳೆ ಮತ್ತೆ ಬರುತ್ತೇವೆ ಎಂದು ಅಧಿಕಾರಿಗಳು ಹೇಳಿದರೂ ಕೇಳದೇ ಸಾರ್ವಜನಿಕರು ಕಲ್ಲು ತೂರಾಟ ನಡೆಸಿ, ಹಲ್ಲೆಗೆ ಮುಂದಾಗಿದ್ದಾರೆ.
ಕಲ್ಲು ತೂರಾಟದಿಂದಾಗಿ ಎರಡು ಪೊಲೀಸ್ ಇಲಾಖೆಯ ಜೀಪ್, ಅರಣ್ಯ ಇಲಾಖೆಯ ಒಂದು ಜೀಪ್, ವಲಯ ಅರಣ್ಯಾಧಿಕಾರಿಯೊಬ್ಬರ ಬ್ರೀಝಾ ಕಾರುಗಳಿಗೆ ಹಾನಿ ಉಂಟಾಗಿದೆ. ಡಿವೈಎಸ್ಪಿ ಒಬ್ಬರ ಮೇಲೂ ಕಲ್ಲು ತೂರಲಾಗಿದೆ’ ಎಂದು ಗೊತ್ತಾಗಿದೆ.
ಇನ್ನಾದರೂ ಅಧಿಕಾರಿಗಳು ಇತ್ತ ಗಮನಹರಿಸಿ ಈ ಪ್ರದೇಶದಲ್ಲಿ ತೊಂದರೆ ಕೊಡುತ್ತಿರುವ ಆನೆಗಳನ್ನು ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರೆದಿದ್ದು, ಅಧಿಕಾರಿಗಳು ಈ ವಿಷಯವನ್ನು ಹಿರಿಯ ಅಧಿಕಾರಿಗಳಿಗೆ ವರದಿ ಮಾಡಿದ್ದಾರೆ.
ಫೆಬ್ರುವರಿ 20 ರಂದು ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲಾ ಎಂಬಲ್ಲಿ ಇದೀಗ ಸೆರೆ ಸಿಕ್ಕಿರುವ ಆನೆ 21 ವರ್ಷದ ಮಹಿಳೆ ಹಾಗೂ 52 ವರ್ಷದ ಪುರುಷನನ್ನು ಕೊಂದು ಹಾಕಿತ್ತು.
ಅರಣ್ಯಾಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಅಧಿಕಾರಿಗಳು ಐದು ಪಳಗಿದ ಆನೆಗಳನ್ನು ಬಳಸಿ ಹಗ್ಗ ಹಾಕಿ ಕಾಡಾನೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದರು. ಆನೆ ಪತ್ತೆಗೆ ಡ್ರೋನ್‌ಗಳನ್ನೂ ಬಳಸಿದ್ದರು.