ಡಾ.ಶಿವಮೂರ್ತಿ ಮುರುಘಾ ಶರಣರು ನಮ್ಮ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯವೆಸಗಿಲ್ಲ: ವಸತಿ ನಿಲಯದ ಬಾಲಕಿಯರು
ಮಠಾಧೀಶ ಡಾ.ಶಿವಮೂರ್ತಿ ಮುರುಘಾ ಶರಣರು ತಮ್ಮ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ಎಸಗಿಲ್ಲ ಎಂದು ಮುರುಘಾ ಮಠದ ಅಕ್ಕಮಹಾದೇವಿ ವಸತಿ ನಿಲಯದಲ್ಲಿ ಉಳಿದುಕೊಂಡು ಮಠದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 103 ಬಾಲಕಿಯರು ಹೇಳಿಕೆ ನೀಡಿದ್ದಾರೆ.
Published: 05th January 2023 10:29 AM | Last Updated: 05th January 2023 05:05 PM | A+A A-

ಮರುಘಾಮಠದ ಶಿವಮೂರ್ತಿ ಶರಣರು.
ಚಿತ್ರದುರ್ಗ: ಮಠಾಧೀಶ ಡಾ.ಶಿವಮೂರ್ತಿ ಮುರುಘಾ ಶರಣರು ತಮ್ಮ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ಎಸಗಿಲ್ಲ ಎಂದು ಮುರುಘಾ ಮಠದ ಅಕ್ಕಮಹಾದೇವಿ ವಸತಿ ನಿಲಯದಲ್ಲಿ ಉಳಿದುಕೊಂಡು ಮಠದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 103 ಬಾಲಕಿಯರು ಹೇಳಿಕೆ ನೀಡಿದ್ದಾರೆ.
ಇಬ್ಬರು ಅಪ್ರಾಪ್ತ ಬಾಲಕಿಯರ ದೂರಿನ ಆಧಾರದ ಮೇಲೆ ಮುರುಘಾ ಮಠದ ಅಂದಿನ ಮುಖ್ಯಸ್ಥ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ದೂರು ದಾಖಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 1 ರಂದು ಮುರುಘಾ ಶರಣರನ್ನು ಬಂಧಿಸಲಾಗಿತ್ತು.
ಘಟನೆ ಬಳಿಕ ಚಿತ್ರದುರ್ಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಕೂಡಲೇ ಮಕ್ಕಳನ್ನು ಹಾಸ್ಟೆಲ್‌ನಿಂದ ಬಿಡುಗಡೆಗೊಳಿಸಿ ಆಯಾ ಜಿಲ್ಲೆಗಳಿಗೆ ಕಳುಹಿಸಿದೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಆಯಾ ಜಿಲ್ಲಾ ಆಡಳಿತಗಳಿಗೆ ಹೆಣ್ಣುಮಕ್ಕಳಿಗೆ ಕೌನ್ಸೆಲಿಂಗ್ ನಡೆಸುವಂತೆ ಮತ್ತು ಯಾವುದೇ ಲೈಂಗಿಕ ದೌರ್ಜನ್ಯದ ಬಗ್ಗೆ ವರದಿ ಮಾಡಿದರೆ ತಕ್ಷಣವೇ ಪ್ರಕರಣಗಳನ್ನು ದಾಖಲಿಸುವಂತೆ ಸೂಚಿಸಿದೆ.
ಹೀಗಾಗಿ ಆಯಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಚಿತ್ರದುರ್ಗ ಜಿಲ್ಲೆಯಲ್ಲಿ 46, ಬೆಂಗಳೂರಿನಲ್ಲಿ 1, ದಾವಣಗೆರೆಯಲ್ಲಿ 14, ಧಾರವಾಡದಲ್ಲಿ 2, ಬಾಗಲಕೋಟೆಯಲ್ಲಿ 3, ಬಳ್ಳಾರಿಯಲ್ಲಿ 17, ರಾಯಚೂರಿನಲ್ಲಿ 3, ಕೊಪ್ಪಳದಲ್ಲಿ 1, ಬೆಳಗಾವಿಯಲ್ಲಿ 6, ಶಿವಮೊಗ್ಗದಲ್ಲಿ 5 ಬಾಲಕಿಯರಿಗೆ ಮೂರು ಬಾರಿ ಕೌನ್ಸೆಲಿಂಗ್ ನಡೆಸಿವೆ. ಆದರೆ, ಯಾವುದೇ ಮಗು ಮಠಾಧೀಶರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿಲ್ಲ.
ಇದನ್ನೂ ಓದಿ: ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸಿನಲ್ಲಿ ತಾತ್ಕಾಲಿಕ ರಿಲೀಫ್: ಅತ್ಯಾಚಾರವಾಗಿಲ್ಲ ಎಂದ ವೈದ್ಯಕೀಯ ವರದಿ
ಮಕ್ಕಳು ಅಂತಹ ಯಾವುದೇ ಸಮಸ್ಯೆಗಳನ್ನು ಎದುರಿಸಲಿಲ್ಲ ಎಂದು ಚಿತ್ರದುರ್ಗದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೂಲಗಳು ತಿಳಿಸಿದ್ದು, ಈ ಸಂಬಂಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ಏತನ್ಮಧ್ಯೆ, ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಸಲ್ಲಿಸಿದ ಭಾಗಶಃ ಆರೋಪಪಟ್ಟಿಯಲ್ಲಿ ಮೊದಲ ಪೋಕ್ಸೊ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಆರಂಭದಲ್ಲಿ ಹಿಂಜರಿದಿದ್ದರು. ನಂತರ ಪರೀಕ್ಷೆಗೊಳಗಾದರು ಎಂದು ತಿಳಿದುಬಂದಿದೆ.
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳ ವರದಿಯಲ್ಲಿಯೂ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ತಿಳಿದುಬಂದಿದೆ.
ಚಾರ್ಜ್‌ಶೀಟ್‌ನಲ್ಲಿನ ವೈದ್ಯಕೀಯ ವರದಿಯಲ್ಲಿಯೂ ಇಬ್ಬರೂ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ತಿಳಿಸಿದೆ ಎಂದು ತಿಳಿದುಬಂದಿದೆ.
ಆದಾಗ್ಯೂ, ವೈದ್ಯಕೀಯ ಪರೀಕ್ಷೆಗೆ ಒಳಪಡುವ ಮೊದಲು ಆಪ್ತಸಮಾಲೋಚಕರ ಮುಂದೆ ನೀಡಿದ ಹೇಳಿಕೆಯಲ್ಲಿ, ಮಠಾಧೀಶರು ಪದೇ ಪದೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸುತ್ತಿದ್ದರು ಎಂದು ಹುಡುಗಿಯರು ಹೇಳಿಕೊಂಡಿದ್ದು, ಇದು ದಾಖಲೆಗಳಲ್ಲಿಯೂ ನೋಂದಾಯಿಸಲ್ಪಟ್ಟಿದೆ ಎನ್ನಲಾಗಿದೆ.