ಅಖಿಲ ಭಾರತ 86ನೇ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿ ಸಜ್ಜು: ಸರ್ವಜ್ಞನ ನಾಡಿನಲ್ಲಿ 3 ದಿನ ಕನ್ನಡ ಹಬ್ಬದ ಸಂಭ್ರಮ

ಅಖಿಲ ಭಾರತ 86ನೇ ಸಾಹಿತ್ಯ ಸಮ್ಮೇಳನ ಸರ್ವಜ್ಞನ ನಾಡು ಹಾವೇರಿ ಜಿಲ್ಲೆಯಲ್ಲಿ ಶುಕ್ರವಾರ ಆರಂಭವಾಗಲಿದೆ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನಕ್ಕೆ ಇಡೀ ನಗರ ಕನ್ನಡ ಬಾವುಟ ಹಾಗೂ ಸಾಹಿತಿಗಳು, ಮಹಾಪುರುಷರ ಕಟೌಟ್‍ಗಳಿಂದ ರಾರಾಜಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಾವೇರಿ: ಅಖಿಲ ಭಾರತ 86ನೇ ಸಾಹಿತ್ಯ ಸಮ್ಮೇಳನ ಸರ್ವಜ್ಞನ ನಾಡು ಹಾವೇರಿ ಜಿಲ್ಲೆಯಲ್ಲಿ ಶುಕ್ರವಾರ ಆರಂಭವಾಗಲಿದೆ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನಕ್ಕೆ ಇಡೀ ನಗರ ಕನ್ನಡ ಬಾವುಟ ಹಾಗೂ ಸಾಹಿತಿಗಳು, ಮಹಾಪುರುಷರ ಕಟೌಟ್‍ಗಳಿಂದ ರಾರಾಜಿಸುತ್ತಿದೆ.

ಅಕ್ಷರ ಜಾತ್ರೆಗೆ ಲಕ್ಷಾಂತರ ಜನ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಅವರಿಗೆ ಆತಿಥ್ಯ ಮತ್ತು ಕನ್ನಡ ಮನಸ್ಸುಗಳಿಗೆ ಮುದ ನೀಡಲು ಹಲವು ಕಾರ್ಯಕ್ರಮಗಳನ್ನು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದೆ. ಕಸಾಪ ರಾಜ್ಯ ಅಧ್ಯಕ್ಷ ಮಹೇಶ್ ಜೋಷಿ ಈಗಾಗಲೇ ರಾಜ್ಯಾದ್ಯಂತ ಸಂಚರಿಸಿ ಪ್ರಚಾರ ಮಾಡಿದ್ದಾರೆ.

ಹುತಾತ್ಮ ಮಹದೇವ ಮೈಲಾರ ಮಹಾದ್ವಾರ ನಿಜಶರಣ ಅಂಬಿಗರ ಚೌಡಯ್ಯ ಮಂಟಪದ ಸಮೀಪ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಅರಬೈಲ್ ಶಿವರಾಮ ಹೆಬ್ಬಾರ ಅವರು ಶುಕ್ರವಾರ ಬೆಳಗ್ಗೆ 7 ಗಂಟೆಗೆ ರಾಷ್ಟ್ರಧ್ವಜಾರೋಹಣ ಮಾಡಲಿದ್ದು, ನಾಡೋಜ ಡಾ. ಮಹೇಶ್ ಜೋಷಿ ಅವರು ಪರಿಷತ್‍ನ ಧ್ವಜಾರೋಹಣ ಮಾಡಲಿದ್ದಾರೆ.

ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ನಾಡಧ್ವಜಾರೋಹಣ ಮಾಡಿ ಅಕ್ಷರ ಜಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ನಂತರ ಬೆಳಗ್ಗೆ 7.30ಕ್ಕೆ ಸಮ್ಮೇಳನಾಧ್ಯಕ್ಷ ಪದ್ಮಶ್ರೀ ಡಾ. ದೊಡ್ಡರಂಗೇಗೌಡರನ್ನು ಭವ್ಯ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳುವ ಕಾರ್ಯಕ್ರಮವನ್ನು ಹಾವೇರಿ ನಗರ ಸಭೆ ಅಧ್ಯಕ್ಷ ಸಂಜೀವ ಕುಮಾರ ನೀಲರಗಿ ಉದ್ಘಾಟಿಸಲಿದ್ದಾರೆ.

ಮಾಜಿ ಸಚಿವ ಬಸವರಾಜ ಶಿವಣ್ಣ ಅಧ್ಯಕ್ಷತೆ ವಹಿಸಲಿದ್ದು, ಇದರಲ್ಲಿ ಜಿಲ್ಲಾಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಮೊಹಮ್ಮದ್ ರೋಷನ್, ಎಸ್‍ಪಿ ಹನುಮಂತರಾಯ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು ಬಸ್ ನಿಲ್ದಾಣ, ಆರ್‌ಟಿಒ ಕಚೇರಿ ಮಾರ್ಗವಾಗಿ ಸಮ್ಮೇಳನ ವೇದಿಕೆಯ ಸಮೀಪ ತಲುಪಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಂತರ ಬೆಳಗ್ಗೆ 10.30ಕ್ಕೆ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ಸಚಿವರಾದ ಸುನೀಲ್ ಕುಮಾರ್, ಬಿಸಿ ಪಾಟೀಲ್, ಬಿಸಿ ನಾಗೇಶ್, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಶ್ರೀನಿವಾಸ ಮಾನೆ, ಪರಿಷತ್ ಸದಸ್ಯರಾದ ಸಂಕನೂರ, ಸಲೀಂ ಅಹಮದ್, ಆರ್. ಶಂಕರ್, ಪ್ರದೀಪ್ ಶೆಟ್ಟರ್ ಸೇರಿ ಹಲವು ಗಣ್ಯರು ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com