ಸ್ಯಾಂಟ್ರೋ ರವಿಯ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ, ಸ್ಯಾಂಟ್ರೋ ರವಿ ದಂಧೆ ಕಾಂಗ್ರೆಸ್ ಅಧಿಕಾರದಲ್ಲಿಯೇ ನಡೆದಿರುವುದು : ಸಿಎಂ ಬೊಮ್ಮಾಯಿ

ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಈಗಾಗಲೇ ಸೂಕ್ತ ತನಿಖೆ ಮಾಡಲಾಗಿದ್ದು, ಆತನ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಸಾರ್ವಜನಿಕರ ಅಹವಾಲು ಆಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿಯಲ್ಲಿಂದು ಸಾರ್ವಜನಿಕರ ಅಹವಾಲು ಆಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಈಗಾಗಲೇ ಸೂಕ್ತ ತನಿಖೆ ಮಾಡಲಾಗಿದ್ದು, ಆತನ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯ ಆದರ್ಶನಗರದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ(Santro Ravi) ವಿಚಾರದಲ್ಲಿ ಹೆಚ್ಚು ಮಹತ್ವ ಕೊಡುವುದು ಬೇಡ. ಆತ ಯಾರ ಜೊತೆಗೆ ನಂಟು ಹೊಂದಿದ್ದ ಆತನ ಹಿನ್ನೆಲೆ ಏನು, ಯಾವ ಸಚಿವರು, ಶಾಸಕರು, ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದ ಎಂದೆಲ್ಲ ತನಿಖೆ ಮಾಡಲು ಆದೇಶ ನೀಡಿದ್ದೇವೆ ತನಿಖೆಯಿಂದ ಸತ್ಯಾಂಶ ಹೊರಗೆ ಬರಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದರು.

ಶಾಶ್ವತ ಆಯೋಗದ ವರದಿ ಬಂದ ಮೇಲೆ ಕ್ರಮ: ಪ್ರವರ್ಗ 2ರಲ್ಲಿ ಬರಬೇಕಾದ ಸಮುದಾಯಗಳ ಬಗ್ಗೆ ಈಗಾಗಲೇ ಮೊದಲ ನಿರ್ಣಯ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಎಷ್ಟು ಪ್ರಮಾಣ ಹೆಚ್ಚಾಗುತ್ತದೆ ಎಂದು ಅಂತಿಮ ವರದಿ ಬಂದ ಮೇಲೆ ನಿರ್ಣಯವಾಗುತ್ತದೆ. ನಾವು ಏನೇ ಮಾಡಿದ್ದರೂ ಸಂವಿಧಾನಬದ್ಧ ಹಿಂದುಳಿದ ವರ್ಗ ಶಾಶ್ವತ ಆಯೋಗದಿಂದ ಬರುವ ವರದಿ ಮೇಲೆ ಮಾಡಬೇಕಾಗುತ್ತದೆ. ಅದನ್ನು ಬೇಗನೆ ನೀಡಲು ಹೇಳಿದ್ದು ಬಂದ ಕೂಡಲೇ ಸಂಪೂರ್ಣ ಸ್ಪಷ್ಟತೆ ಸಿಗುತ್ತದೆ ಎಂದರು.

ಕಾಂಗ್ರೆಸ್ ಕಾಲದಲ್ಲಿಯೇ ಅವ್ಯವಹಾರ: ಸ್ಯಾಂಟ್ರೋ ರವಿ ನಡೆಸಿದ ಎಲ್ಲ ಅವ್ಯವಹಾರ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಕಾಲದಲ್ಲಿಯೇ ಆಗಿದೆ. ಅವರ ಕಾಲದಲ್ಲಿಯೇ ಜೈಲಿನಿಂದ ಹೊರಗೆ ಬಂದಿರುವುದು, ಆದ್ದರಿಂದ ಇದರಲ್ಲಿ ಯಾರ ಯಾರ ಪಾತ್ರ ಎಷ್ಟೋ ಇದೆ ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ, ಕಾಂಗ್ರೆಸ್ ನವರು ಇದಕ್ಕೆ ಉತ್ತರ ಕೊಡಬೇಕು ಎಂದು ಹೇಳಿದರು. 

ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸಲು ತೀರ್ಮಾನಿಸಿರುವ ಬಗ್ಗೆ ಕೇಳಿದಾಗ, ಅದು ಅವರ ನಿರ್ಧಾರ, ಚುನಾವಣೆಗೆ ಸ್ಪರ್ಧಿಸುವಾಗ ನಮ್ಮ ನಿಲುವುಗಳು, ನಿರ್ಣಯಗಳು, ಹಿಂದೆ ಮಾಡಿರುವ ಕೆಲಸಗಳು ಒರಗೆ ಹಚ್ಚುತ್ತಾರೆ, ಕೋಲಾರ ಆಯ್ಕೆ ಮಾಡಿರುವುದು ಅವರ ಮತ್ತು ಪಕ್ಷದ ವಿಚಾರ, ಕೋಲಾರ ಜನತೆ ತೀರ್ಮಾನ ಮಾಡುತ್ತಾರೆ ಎಂದರು.

ಇನ್ನು, ಜನವರಿ 12 ರಿಂದ ಜನವರಿ 16 ರವರೆಗೆ ನಡೆಯಲಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಹುಬ್ಬಳ್ಳಿ ಧಾರವಾಡದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದು, ಇದಕ್ಕೆ ಮಹತ್ವ ನೀಡಲಾಗಿದೆ. ಇದನ್ನು ಮಾದರಿ ಕಾರ್ಯಕ್ರಮ ಆಗಿಸಲು ಹೆಚ್ಚು ಒತ್ತು ನೀಡಲಾಗುತ್ತದೆ. ಐದು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮ ಅತ್ಯಂತ ಉಪಯುಕ್ತ ಮತ್ತು ಮಾದರಿ ಕಾರ್ಯಕ್ರಮ ಆಗಬೇಕು. ಕಲೆ ಸಾಹಿತ್ಯ ಸಂಗೀತ ಹೀಗೇ ಹತ್ತು ಹಲವಾರು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com