ಯುವತಿಗೆ ಚುಡಾಯಿಸಿದ್ದಕ್ಕೆ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ಯತ್ನ: ಶಿವಮೊಗ್ಗ ಪೊಲೀಸರು

ಸಾಗರ ಪಟ್ಟಣದಲ್ಲಿ ಭಜರಂಗದಳದ ಕಾರ್ಯಕರ್ತ ಸುನೀಲ್ ಮೇಲೆ ಹಲ್ಲೆ ಯತ್ನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸುನೀಲ್ ಮತ್ತು ಆರೋಪಿ ಸಮೀರ್ ನಡುವಿನ ವೈಯಕ್ತಿಕ ದ್ವೇಷದಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸಾಗರದಲ್ಲಿ ಮಂಗಳವಾರ ನಡೆದ ಬಂದ್ ವೇಳೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗರ್ ಬಿಜೆಪಿ ಶಾಸಕ ಹರತಾಳು ಹಾಲಪ್ಪ
ಸಾಗರದಲ್ಲಿ ಮಂಗಳವಾರ ನಡೆದ ಬಂದ್ ವೇಳೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗರ್ ಬಿಜೆಪಿ ಶಾಸಕ ಹರತಾಳು ಹಾಲಪ್ಪ
Updated on

ಶಿವಮೊಗ್ಗ: ಸಾಗರ ಪಟ್ಟಣದಲ್ಲಿ ಭಜರಂಗದಳದ ಕಾರ್ಯಕರ್ತ ಸುನೀಲ್ ಮೇಲೆ ಹಲ್ಲೆ ಯತ್ನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸುನೀಲ್ ಮತ್ತು ಆರೋಪಿ ಸಮೀರ್ ನಡುವಿನ ವೈಯಕ್ತಿಕ ದ್ವೇಷದಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಏತನ್ಮಧ್ಯೆ, ಹಿಂದುತ್ವ ಸಂಘಟನೆಗಳು ಕರೆ ನೀಡಿದ್ದ ಸಾಗರ ಪಟ್ಟಣ ಬಂದ್ ಯಶಸ್ವಿಯಾಗಿದೆ.

ಸುನೀಲ್ ಕಳೆದ ನಾಲ್ಕೈದು ತಿಂಗಳಿಂದ ಸಮೀರ್ ಸಹೋದರಿಯನ್ನು ಚುಡಾಯಿಸುತ್ತಿದ್ದ ಎಂಬ ಕಾರಣ ಸೋಮವಾರ ಬೆಳಗ್ಗೆ ಸಮೀರ್ ಸುನಿಲ್ ಮೇಲೆ ಹಲ್ಲೆಗೆ ಯತ್ನಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ ಕೆ ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

“ನಾವು ಇಲ್ಲಿಯವರೆಗೆ ಕಂಡುಕೊಂಡ ಅಂಶವೆಂದರೆ, ಸುನೀಲ್ ಕಳೆದ ನಾಲ್ಕೈದು ತಿಂಗಳಿಂದ ಸಮೀರ್ ಸಹೋದರಿಯನ್ನು ಚುಡಾಯಿಸುತ್ತಿದ್ದನು. ಸಮೀರ್ ಎರಡು-ಮೂರು ಬಾರಿ ಸುನೀಲ್‌ಗೆ ಎಚ್ಚರಿಕೆ ನೀಡಿ ತನ್ನ ತಂಗಿಗೆ ತೊಂದರೆ ನೀಡದಂತೆ ಕೇಳಿಕೊಂಡಿದ್ದ. ಆದರೆ, ಸುನೀಲ್, ಸಮೀರ್ ಗೆ ಫೋನ್ ಮಾಡಿ ಆತನ ಸಹೋದರಿಯ ಫೋನ್ ನಂಬರ್ ಕೇಳುತ್ತಿದ್ದ. ನಾವು ಕರೆ ಮಾಡಿದ ದಾಖಲೆಗಳನ್ನು ಪರಿಶೀಲಿಸಿದಾಗ ಇದು ನಿಜವೆಂದು ಸಾಬೀತಾಗಿದೆ ”ಎಂದು ಮಿಥುನ್ ಕುಮಾರ್ ಹೇಳಿದ್ದಾರೆ.

ಸೋಮವಾರ ಬೆಳಗ್ಗೆ ಸಮೀರ್ ಲಾಡ್ಜ್‌ನಿಂದ ಹೊರಗೆ ಬಂದು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಆತನನ್ನು ತಡೆದ ಸುನೀಲ್ ತೀವ್ರ ವಾಗ್ವಾದ ನಡೆಸಿದ್ದಾನೆ. ನಂತರ, ಸಮೀರ್ ತನ್ನ ಬಳಿ ಇದ್ದ ಮೇಕೆಗಳಿಗೆ ಹುಲ್ಲು ಕೊಯ್ಯುವ ಮಚ್ಚನಿಂದ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ ”ಎಂದು ಎಸ್ಪಿ ತಿಳಿಸಿದ್ದಾರೆ.

ಚುಡಾಯಿಸುವುದು ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ಕಾನೂನು ಕೈಗೆತ್ತಿಕೊಳ್ಳದೆ ಪೊಲೀಸರನ್ನು ಸಂಪರ್ಕಿಸಿ. ನಾವು ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜನತೆಗೆ ಮನವಿ ಮಾಡಿದರು.

ಮೊದಲು ನನ್ನ ಸಹೋದರನನ್ನು ಬಿಡುಗಡೆ ಮಾಡಿ: ಸಮೀರ್ ಸಹೋದರಿ
ಸಾಗರ್‌ದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಮೀರ್ ಸಹೋದರಿ, ಸುನೀಲ್ ತನ್ನನ್ನು ಚುಡಾಯಿಸುತ್ತಿದ್ದರು ಮತ್ತು ಹಿಜಾಬ್ ಧರಿಸಬೇಡ ಎಂದು ತನಗೆ ಬಲವಂತ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಅಲ್ಲದೆ ಸುನೀಲ್ ನನ್ನನ್ನು ಮತಾಂತರಕ್ಕೆ ಒತ್ತಾಯಿಸುತ್ತಿದ್ದ. ಚುಡಾಯಿಸಿದ ಬಗ್ಗೆ ನಾನು ನನ್ನ ಸಹೋದರನಿಗೆ ಹೇಳಿದೆ. ಆದ್ದರಿಂದ ನನ್ನ ಸಹೋದರ ಅವರಿಗೆ ಬೆದರಿಕೆ ಹಾಕಿರಬಹುದು. ಆದರೆ ಸುನಿಲ್ ಮೇಲೆ ಹಲ್ಲೆ ಮಾಡುವ ಯಾವುದೇ ಉದ್ದೇಶ ಅವರಿಗೆ ಇರಲಿಲ್ಲ. ಹೀಗಾಗಿ ನನ್ನ ಸಹೋದರನನ್ನು ಬಿಡುಗಡೆ ಮಾಡಿ ಎಂದು ಪೊಲೀಸರನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com