ಮಹದಾಯಿ ಜಲ ವಿವಾದ: ತನ್ನ ಪರವಾದ ತೀರ್ಪಿಗೆ ಗೋವಾ ಕೊನೆಯ ಪ್ರಯತ್ನ, ಕೇಂದ್ರ ಗೃಹ ಸಚಿವರ ಮುಂದೆ ನಿಯೋಗ ಒಯ್ಯಲಿರುವ ಸಿಎಂ
ಮಹದಾಯಿ ನದಿಯ ಹಂಚಿಕೆ ನೀರನ್ನು ರಾಜ್ಯದತ್ತ ತಿರುಗಿಸಲು ಕಳಸಾ-ಬಂಡೂರಿ ಯೋಜನೆ ಮೂಲಕ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದ್ದರೆ ಅತ್ತ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ದೆಹಲಿಗೆ ಉನ್ನತ ಮಟ್ಟದ ನಿಯೋಗ ಕರೆದುಕೊಂಡು ಹೋಗಿ ಗೃಹ ಸಚಿವರನ್ನು ಭೇಟಿ ಮಾಡಿ ನೀರು ಹಂಚಿಕೆ ಯೋಜನೆಯನ್ನು ಸ್ಥಗಿತಗೊಳಿಸಲು ಕೊನೆಯ ಪ್ರಯತ್ನ ಮಾಡುತ್ತಿದ್ದಾರೆ.
Published: 12th January 2023 09:02 AM | Last Updated: 13th January 2023 08:29 AM | A+A A-

ಮಹದಾಯಿ ಯೋಜನೆ
ಬೆಳಗಾವಿ: ಮಹದಾಯಿ ನದಿಯ ಹಂಚಿಕೆ ನೀರನ್ನು ರಾಜ್ಯದತ್ತ ತಿರುಗಿಸಲು ಕಳಸಾ-ಬಂಡೂರಿ ಯೋಜನೆ ಮೂಲಕ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದ್ದರೆ ಅತ್ತ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ದೆಹಲಿಗೆ ಉನ್ನತ ಮಟ್ಟದ ನಿಯೋಗ ಕರೆದುಕೊಂಡು ಹೋಗಿ ಗೃಹ ಸಚಿವರನ್ನು ಭೇಟಿ ಮಾಡಿ ನೀರು ಹಂಚಿಕೆ ಯೋಜನೆಯನ್ನು ಸ್ಥಗಿತಗೊಳಿಸಲು ಕೊನೆಯ ಪ್ರಯತ್ನ ಮಾಡುತ್ತಿದ್ದಾರೆ.
ನಿಯೋಗ ಮೊನ್ನೆ ಬುಧವಾರ ಗೃಹ ಸಚಿವರನ್ನು ಭೇಟಿ ಮಾಡಿ ಕಳಸಾ-ಬಂಡೂರಿ ಯೋಜನೆ ಜಾರಿಗೆ ಕರ್ನಾಟಕಕ್ಕೆ ನೀಡಿರುವ ಅನುಮತಿಯನ್ನು ಹಿಂತೆಗೆದುಕೊಳ್ಳಬೇಕೆಂದು ಗೃಹ ಸಚಿವರನ್ನು ಗೋವಾ ಮುಖ್ಯಮಂತ್ರಿ ಮನವಿ ಮಾಡುವ ಸಾಧ್ಯತೆಯಿತ್ತು.
ನಿಯೋಗದಲ್ಲಿ ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವ ಶ್ರೀಪಾದ್ ನಾಯಕ್, ಗೋವಾ ವಿಧಾನಸಭೆ ಸ್ಪೀಕರ್ ರಮೇಶ್ ತಾವಡ್ಕರ್, ಜಲ ಸಂಪನ್ಮೂಲ ಅಭಿವೃದ್ಧಿ ಸಚಿವ ಸುಭಾಷ್ ಶಿರೋಡ್ಕರ್, ಪರಿಸರ ಖಾತೆ ಸಚಿವ ನೀಲೇಶ್ ಕಬ್ರಲ್, ಸಾರಿಗೆ ಸಚಿವ ಮೌವಿನ್ ಗೊಡಿನ್ಹೊ, ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ಇಂಧನ ಖಾತೆ ಸಚಿವ ರಾಮಕೃಷ್ಣ ದಾವಲಿಕರ್ ಮತ್ತು ಸ್ವತಂತ್ರ ಶಾಸಕ ಚಂದ್ರಕಾಂತ್ ಶೆಟೈ ಇದ್ದಾರೆ.
ನಿನ್ನೆ ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಗೋವಾ ಸಿಎಂ, ಎರಡು ರಾಜ್ಯಗಳ ನಡುವಣ ವಿಷಯವಾಗಿರುವ ಮಹದಾಯಿ ವಿವಾದವನ್ನು ಕೇಂದ್ರ ಗೃಹ ಸಚಿವರ ಬಳಿ ತೆಗೆದುಕೊಂಡು ಹೋಗಿ ಬಗೆಹರಿಸುವಂತೆ ಕೇಳಿಕೊಳ್ಳುತ್ತೇವೆ. ಗೋವಾ ಜನರ ಹಿತಾಸಕ್ತಿ ತಮಗೆ ಮುಖ್ಯವಾಗಿದ್ದು ವಿವಾದ ಬಗೆಹರಿಸಲು ಜಲ ನಿರ್ವಹಣಾ ಪ್ರಾಧಿಕಾರ ರಚಿಸುವಂತೆ ಗೃಹ ಸಚಿವರನ್ನು ಕೋರುತ್ತೇವೆ. ವಿಸ್ತೃತ ಯೋಜನಾ ವರದಿಗೆ(DPR) ನೀಡಿರುವ ಅನುಮತಿಯನ್ನು ಹಿಂತೆಗೆದುಕೊಳ್ಳುವಂತೆ ನಿಯೋಗ ಕೇಂದ್ರವನ್ನು ಒತ್ತಾಯಿಸಿದೆ ಎಂದಿದ್ದಾರೆ.
ಸರ್ಕಾರ ಮಹದಾಯಿ ವಿವಾದವನ್ನು ಗಂಭೀರವಾಗಿ ಪರಿಗಣಿಸಿರುವುದರಿಂದ ನಿಯೋಗ ದೆಹಲಿಗೆ ಹೋಗಿದೆ ಎಂದು ಗೋವಾ ಪ್ರವಾಸೋದ್ಯಮ ಸಚಿವ ರೋಹನ್ ಕೌಂಟೆ ಹೇಳಿದ್ದಾರೆ. ಮಹದಾಯಿಗಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲ. ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣ ಧನಾತ್ಮಕವಾಗಿ ಬಗೆಹರಿಯುತ್ತದೆ ಎಂದು ನಾವು ಭಾವಿಸಿದ್ದೇವೆ ಎಂದರು.
ಗೋವಾ ಸರ್ಕಾರ ಈ ವಿವಾದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸುಪ್ರೀಂ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದೆ. ಕರ್ನಾಟಕದ ವಿಸ್ತೃತ ವರದಿಗೆ ಕೇಂದ್ರ ಜಲ ಆಯೋಗ ನೀಡಿರುವ ಅನುಮೋದನೆಯನ್ನು ನಾವು ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ. 1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆಯನ್ನು ಕರ್ನಾಟಕ ಸರ್ಕಾರ ಉಲ್ಲಂಘಿಸುತ್ತಿದೆ ಎಂದು ನಾವು ಈಗಾಗಲೇ ಶೋಕಾಸ್ ನೊಟೀಸ್ ಜಾರಿ ಮಾಡಿದ್ದೇವೆ ಎಂದರು.