ರಾಷ್ಟ್ರೀಯ ಯುವಜನೋತ್ಸವ: ಹುಬ್ಬಳ್ಳಿಗಿಂದು ಪ್ರಧಾನಿ ಮೋದಿ, ಎಲ್ಲೆಡೆ ಬಿಗಿ ಭದ್ರತೆ, ಸಂಚಾರ ಮಾರ್ಗ ಬದಲಾವಣೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದು, 11 ವರ್ಷಗಳ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಹುಬ್ಬಳ್ಳಿಯ ರೈಲ್ವೇ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
Published: 12th January 2023 07:28 AM | Last Updated: 12th January 2023 12:14 PM | A+A A-

ಪ್ರಧಾನಿ ಮೋದಿ
ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದು, 11 ವರ್ಷಗಳ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಹುಬ್ಬಳ್ಳಿಯ ರೈಲ್ವೇ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
2012ರಲ್ಲಿ ಮಂಗಳೂರಿನಲ್ಲಿ ಒಂದು ದಿನದ ಯುವಜನೋತ್ಸವ ನಡೆದಿತ್ತು. ಇದೀಗ ಮೊದಲ ಬಾರಿಗೆ ಉತ್ತರ ಕರ್ನಾಟಕಕ್ಕೆ ಯುವಜನೋತ್ಸವದ ಆತಿಥ್ಯ ಸಿಕ್ಕಿದೆ.
ಇದನ್ನೂ ಓದಿ: ಜನವರಿ 12ಕ್ಕೆ ಹುಬ್ಬಳ್ಳಿಗೆ ಪ್ರಧಾನಿ ಮೋದಿ ಆಗಮನ, ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಭಾಗಿ- ಸಿಎಂ ಬೊಮ್ಮಾಯಿ
ಈ ಉತ್ಸವದ ಉದ್ಘಾಟನೆ ಮಾತ್ರ ಹುಬ್ಬಳ್ಳಿಯಲ್ಲಿ ನಡೆಯಲಿದ್ದು, 5 ದಿನಗಳ ಕಾರ್ಯಕ್ರಮಗಳೆಲ್ಲವೂ ಧಾರವಾಡದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಇದಕ್ಕೆ ಬೇಕಾದ ಸಿದ್ಧತೆಗಳು ಪೂರ್ಣಗೊಂಡಿದ್ದು, ಕಾರ್ಯಕ್ರಮಕ್ಕೆ ಭಾಗವಹಿಸಬೇಕಿದ್ದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಜನರು, ನಾಯಕರು ಈಗಾಗಲೇ ಹುಬ್ಬಳ್ಳಿಗೆ ಆಗಮಿಸಿದ್ದಾರೆಂದು ತಿಳಿದುಬಂದಿದೆ.
ಯುವಜನೋತ್ಸವ ಉದ್ಘಾಟನಾ ಸಮಾರಂಭ ಬರೋಬ್ಬರಿ ಒಂದೂವರೆ ಗಂಟೆಯ ಕಾರ್ಯಕ್ರಮವಾಗಿದ್ದು, ಸಂಜೆ 4 ಗಂಟೆಗೆ ಆರಂಭವಾಗುವ ಕಾರ್ಯಕ್ರಮ ಸಂಜೆ 5.30ರ ಹೊತ್ತಿಗೆ ಪೂರ್ಣಗೊಳ್ಳಲಿದೆ. ಪ್ರಧಾನಿ ಮೋದಿಯವರು 30-40 ನಿಮಿಷಗಳ ಕಾಲ ಭಾಷಣ ಮಾಡಲಿದ್ದಾರೆ.
ರೈಲ್ವೇ ಮೈದಾನದಲ್ಲಿ ಉತ್ಸವ ಉದ್ಘಾಟನೆಯಾಗಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಪಥ ಸಂಚಲನ ಸಾಗುವ ಪ್ರದೇಶಗಳನ್ನು ಅಚ್ಚುಕಟ್ಟಾಗಿ ಅಲಂಕರಿಸಲಾಗಿದೆ. ಅವಶ್ಯವಿರುವ ಕಡೆಗಳಲ್ಲಿ ರಸ್ತೆ ದುರಸ್ತಿ ಹಾಗೂ ಮೀಡಿಯಾನ್‌ಗಳಿಗೆ ಬಣ್ಣ ಬಳಿಯಲಾಗಿದೆ. ಪ್ರಧಾನಿ ಆಗಮನದ 30 ನಿಮಿಷಗಳ ಮೊದಲು ಮತ್ತು ಅವರ ನಿರ್ಗಮನದ ನಂತರ ಈ ರಸ್ತೆಗಳಲ್ಲಿ ಸಂಚಾರವನ್ನು ನಿಯಂತ್ರಿಸಲಾಗುತ್ತಿದೆ. ಪೊಲೀಸರು ಈಗಾಗಲೇ ಸಂಚಾರ ವ್ಯತ್ಯಯ ಹಾಗೂ ಮಾರ್ಗ ಬದಲಾವಣೆಗಳನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಗೆ ನಾಳೆ ಪ್ರಧಾನಿ ಆಗಮನ: ಟೀಕೆ ವ್ಯಕ್ತವಾದ ನಂತರ ಸುತ್ತೋಲೆ ಹಿಂತೆಗೆದುಕೊಂಡ ಧಾರವಾಡ ಪಿಯು ಶಿಕ್ಷಣ ಇಲಾಖೆ
ರೈಲ್ವೇ ಮೈದಾನದಲ್ಲಿ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆಯ ಹೊರತಾಗಿ, ಮುಖ್ಯ ವೇದಿಕೆಯ ಮುಂಭಾಗದಲ್ಲಿ ಪ್ರತಿನಿಧಿಗಳು ಮತ್ತು ಅತಿಥಿಗಳಿಗೆ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ, ಪೊಲೀಸರು ಭಾರೀ ಭದ್ರತಾ ವ್ಯವಸ್ಥೆ, ಬಾಂಬ್ ಪತ್ತೆ ಮತ್ತು ಶ್ವಾನ ದಳವನ್ನೂ ನಿಯೋಜಿಸಿದ್ದಾರೆ.
ಏತನ್ಮಧ್ಯೆ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಅವರು, ಬುಧವಾರ ಸ್ಥಳ ಮತ್ತು ನಗರದಾದ್ಯಂತ ಭದ್ರತಾ ಕ್ರಮಗಳನ್ನು ಪರಿಶೀಲಿಸಿದರು.
ನಗರದಲ್ಲಿ ಏಳು ಎಸ್‌ಪಿ ಶ್ರೇಣಿಯ ಅಧಿಕಾರಿಗಳು, 25 ಡಿಎಸ್‌ಪಿಗಳು, 60 ಇನ್‌ಸ್ಪೆಕ್ಟರ್‌ಗಳು, 18 ಪ್ಲಟೂನ್‌ಗಳಾದ ಕೆಎಸ್‌ಆರ್‌ಪಿ, ಸಿಎಆರ್ ಮತ್ತು ಡಿಎಆರ್ ಸಿಬ್ಬಂದಿ ಸೇರಿದಂತೆ ಒಟ್ಟು 2,900 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.