ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ: ಯುವತಿಗೆ ಮಿಠಾಯಿ ಕೊಟ್ಟಿದ್ದಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು 'ನೈತಿಕ ಪೊಲೀಸ್ ಗಿರಿ' ಪ್ರಕರಣ ವರದಿಯಾಗಿದ್ದು, ಬಾಲಕಿಯೊಬ್ಬಳಿಗೆ ಮಿಠಾಯಿ ಕೊಟ್ಟಿದ್ದಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ.
Published: 15th January 2023 08:33 AM | Last Updated: 15th January 2023 01:37 PM | A+A A-

ಸಂಗ್ರಹ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು 'ನೈತಿಕ ಪೊಲೀಸ್ ಗಿರಿ' ಪ್ರಕರಣ ವರದಿಯಾಗಿದ್ದು, ಬಾಲಕಿಯೊಬ್ಬಳಿಗೆ ಮಿಠಾಯಿ ಕೊಟ್ಟಿದ್ದಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ.
ವೀರಕಂಭ ಗ್ರಾಮದ ಮಂಗಳಪದವ್ ಮೂಲದ ಮೊಹಮ್ಮದ್ ಶಾಕಿರ್ (19) ಹಲ್ಲೆಗೊಳಗಾದ ಯುವಕನಾಗಿದ್ದಾನೆ.
ಸಂತ್ರಸ್ತೆ ಮಂಗಳೂರಿನ ಬಲ್ಮಟ್ಟದಲ್ಲಿರುವ ಯೆನೆಪೋಯ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಶುಕ್ರವಾರ ಸಂಜೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ನಲ್ಲಿ ಮನೆಗೆ ವಾಪಸಾಗುತ್ತಿದ್ದಾಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಹಿಂದೂ ವಿದ್ಯಾರ್ಥಿನಿಯೊಬ್ಬಳಿಗೆ ಚಾಕಲೇಟ್ ನೀಡಿದ್ದಾನೆ. ಇದನ್ನು ಕೆಲ ಯುವಕರು ಗಮನಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ಹಿಂದೂ ಹುಡುಗಿ ಜತೆ ಇದ್ದ ಮುಸ್ಲಿಂ ಹುಡುಗನಿಗೆ ಬಟ್ಟೆ ಬಿಚ್ಚಿ ಥಳಿತ
ಬಸ್ ಕೆಲಿಂಜ ತಲುಪಿದಾಗ, ಆರು ಮಂದಿಯಾದ ಚಂದ್ರಶೇಖರ್, ಪ್ರಜ್ವಲ್, ರೋಹಿತ್ ಮತ್ತು ಇತರ ಮೂವರು ಬಸ್ಸಿನೊಳಗೆ ನುಗ್ಗಿ ಶಾಕಿರ್ ಮೇಲೆ ಹಲ್ಲೆ ನಡೆಸಿ, ಬಸ್ನಿಂದ ಕೆಳಗಿಳಿದಿದ್ದಾರೆಂದು ತಿಳಿದುಬಂದಿದೆ.
ಹಲ್ಲೆಗೊಳಗಾದ ಯುವಕನನ್ನು ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147, 143 (ಕಾನೂನುಬಾಹಿರ ಸಭೆ) ಮತ್ತು 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.