ಬೊಮ್ಮಾಯಿ ಅಂಕಲ್, ಸ್ಯಾಂಕಿ ಮೇಲ್ಸೇತುವೆ ಬೇಡ: ಮಕ್ಕಳ ಪತ್ರ !

ಉದ್ದೇಶಿತ ಸ್ಯಾಂಕಿ ಮೇಲ್ಸೇತುವೆಯನ್ನು ಕೈಬಿಡುವಂತೆ ಒತ್ತಾಯಿಸಿ, ರಾಜ್ಯ ಸರ್ಕಾರಕ್ಕೆ  ಸುಮಾರು 2,000 ವಿದ್ಯಾರ್ಥಿಗಳು ಶುಕ್ರವಾರ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಗೆ ಕೈಬರಹದ ಪೋಸ್ಟ್‌ಕಾರ್ಡ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
ಬೊಮ್ಮಾಯಿಗೆ ಮಕ್ಕಳ ಪತ್ರ
ಬೊಮ್ಮಾಯಿಗೆ ಮಕ್ಕಳ ಪತ್ರ

ಬೆಂಗಳೂರು: ಉದ್ದೇಶಿತ ಸ್ಯಾಂಕಿ ಮೇಲ್ಸೇತುವೆಯನ್ನು ಕೈಬಿಡುವಂತೆ ಒತ್ತಾಯಿಸಿ, ರಾಜ್ಯ ಸರ್ಕಾರಕ್ಕೆ  ಸುಮಾರು 2,000 ವಿದ್ಯಾರ್ಥಿಗಳು ಶುಕ್ರವಾರ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಗೆ ಕೈಬರಹದ ಪೋಸ್ಟ್‌ಕಾರ್ಡ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

ಬೆಂಗಳೂರಿನ ಸ್ಯಾಂಕಿ ರಸ್ತೆ ವಿಸ್ತರಣೆ ಮತ್ತು ಮೇಲ್ಸೇತುವೆ ಯೋಜನೆ ಪರಿಸರಕ್ಕೆ ಮಾರಕ ಎಂದು ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಪರಿಸರವಾದಿಗಳು, ಸ್ಥಳಿಯರ ಜೊತೆಗೆ ಈಗ ಶಾಲಾ ಮಕ್ಕಳು ಸಹ ಸ್ಯಾಂಕಿ ಕೆರೆ ಉಳಿವಿಗಾಗಿ ಪಣ ತೊಟ್ಟಿದ್ದಾರೆ.

ಪತ್ರದಲ್ಲಿ, ಆತ್ಮೀಯ ಬೊಮ್ಮಾಯಿ ಅಂಕಲ್, ದಯವಿಟ್ಟು ನಮ್ಮ ಪರಿಸರವನ್ನು ರಕ್ಷಿಸಿ. ನಾವು ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣದಲ್ಲಿ ಕಲಿಯಲು ಮತ್ತು ಒಟ್ಟಿಗೆ ಆಡಲು ಬಯಸುತ್ತೇವೆ" ಎಂದು ಬರೆಯಲಾಗಿದೆ. ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ಪತ್ರ ಬರೆದು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ.

ನಗರದಲ್ಲಿ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಸ್ಯಾಂಕಿ ರಸ್ತೆ ವಿಸ್ತರಣೆ ಮತ್ತು ಅದೇ ರಸ್ತೆಯ ಭಾಷ್ಯಂ ವೃತ್ತದಿಂದ ಮಲ್ಲೇಶ್ವರಂ 18ನೇ ಕ್ರಾಸ್‌ವರೆಗೆ ಮೇಲ್ಸೇತುವೆ ನಿರ್ಮಾಣ ಮಾಡಲು ಸರ್ಕಾರ ಟೆಂಡರ್ ಕರೆದಿದ್ದು, ಕೆಲಸಕ್ಕೆ ಕೈ ಹಾಕಿದೆ. ಈ ಯೋಜನೆಗಾಗಿ ಪೂರ್ಣ ಪ್ರಮಾಣದಲ್ಲಿ ಬೆಳೆದು ನಿಂತ ರಾಜಧಾನಿಯ ಪಾರಂಪರಿಕ 40 ಮರಗಳಿಗೆ ಕೊಡಲಿ ಹಾಕಲು ನಿರ್ಧರಿಸಲಾಗಿದ್ದು, ಇದಕ್ಕೆ ಪರಿಸರವಾದಿಗಳು ಸೇರಿದಂತೆ ಸ್ಥಳಿಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಯೋಜನೆಯಿಂದ ಬಿಬಿಎಂಪಿ ಹಿಂದೆ ಸರಿಯುತ್ತಿಲ್ಲ. ಹೀಗಾಗಿ ಬೆಂಗಳೂರಿನ ಕೆಲವು ನಿವಾಸಿಗಳು ಆನ್‌ಲೈನ್‌ ಅರ್ಜಿ ಅಭಿಯಾನ ಆರಂಭಿಸಿದ್ದರು. ಇವರಿಗೆ ಈಗ ಮಕ್ಕಳು ಪತ್ರದ ಮೂಲಕ ಸಾಥ್ ನೀಡಿದ್ದಾರೆ.

‘ಮಕ್ಕಳು ಪ್ರಾರ್ಥನೆ ಸಲ್ಲಿಸುವ, ಕ್ರೀಡಾ ಚಟುವಟಿಕೆ ನಡೆಸುವ ಮತ್ತು ಊಟ ಮಾಡುವ ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಸಮೀಪವಿರುವ ಪೂರ್ಣಪ್ರಜ್ಞ ಶಾಲೆಗೂ ಸಂಕಷ್ಟ ಉಂಟಾಗಲಿದ್ದು, ವಿದ್ಯಾರ್ಥಿಗಳು ನಿತ್ಯವೂ ಕ್ರೀಡಾ ಚಟುವಟಿಕೆಗೆ ಮೈದಾನಕ್ಕೆ ಹೋಗಲು ಸಮಸ್ಯೆಯಾಗಲಿದೆ. ನಮಗೆ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಎದುರಾಗಿದೆ’ ಎಂದು ಸ್ಥಳೀಯರು ಹೇಳಿದರು.

ಅಕ್ಟೋಬರ್ ತಿಂಗಳಲ್ಲಿ ಸ್ಕಾಂಕಿ ಫ್ಲೈ ಓವರ್ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ವರದಿ ಮಾಡಲಾಗಿತ್ತು. ಸ್ಯಾಂಕಿ ರಸ್ತೆ ಹಲವು ಸೀಪೇಜ್ ಪಾಯಿಂಟ್‌ಗಳಿಂದ ಆತಂಕಕಾರಿಯಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಹಾನಿಯನ್ನು ನಿರ್ಣಯಿಸಲು ಮತ್ತು ವಿವರವಾದ ಅಧ್ಯಯನವನ್ನು ನಡೆಸಲು ಏಜೆನ್ಸಿಯನ್ನು ನೇಮಿಸಲಾಗುವುದು ಎಂದು ಅವರು ಘೋಷಿಸಿದರು.

ಬಿಬಿಎಂಪಿ ಅಧಿಕಾರಿಗಳು ಒಮ್ಮೆ ಸ್ಥಗಿತಗೊಂಡಿದ್ದ ಸ್ಯಾಂಕಿ ಮೇಲ್ಸೇತುವೆ ಯೋಜನೆಯನ್ನು ಮುಂದುವರೆಸಿದರು. ಇದನ್ನು ಮೊದಲು 2011 ರಲ್ಲಿ ಪ್ರಸ್ತಾಪಿಸಲಾಯಿತು, ಆದರೆ ಹೆಚ್ಚುತ್ತಿರುವ ವಿರೋಧ ಮತ್ತು ದಾವೆಗಳೊಂದಿಗೆ ಅದನ್ನು ಬದಿಗಿಡಲಾಯಿತು.

ಇದೀಗ ಬಿಬಿಎಂಪಿಯು 60 ಕೋಟಿ ರೂ.ಗಳ ಯೋಜನೆಗೆ ಡಿಪಿಆರ್ ಸಿದ್ಧಪಡಿಸಿದ್ದು, ಈಗಿರುವ ಸ್ಯಾಂಕಿ ರಸ್ತೆಯನ್ನು ಅಗಲೀಕರಣಗೊಳಿಸಿ ಕೆಳಗೆ ರಸ್ತೆ ನಿರ್ಮಿಸಲು 30 ಕೋಟಿ ರೂ. ಉಳಿದ 30 ಕೋಟಿ ರೂ.ಗಳನ್ನು ಸ್ಯಾಂಕಿ ಜಂಕ್ಷನ್‌ನಿಂದ ಕಾವೇರಿ ಜಂಕ್ಷನ್ ಕಡೆಗೆ ಮೇಲ್ಸೇತುವೆ ನಿರ್ಮಿಸಲು ಬಳಸಲಾಗುತ್ತದೆ.

ಡಿಪಿಆರ್ ಸಿದ್ಧಪಡಿಸಲಾಗಿದ್ದು, ಸುಧಾರಣೆ ಅಥವಾ ಟ್ರಾಫಿಕ್ ಪರಿಸ್ಥಿತಿಯನ್ನು ಸುಗಮಗೊಳಿಸಲು ಜನರು ಯಾವುದೇ ಉತ್ತಮ ಸಲಹೆಗಳನ್ನು ಹೊಂದಿದ್ದರೆ ಅದನ್ನು ನೀಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com