ಭದ್ರಾವತಿ ಉಕ್ಕಿನ ಕಾರ್ಖಾನೆ ಮುಚ್ಚದಂತೆ ಪ್ರಧಾನಿ ಮೋದಿಗೆ ಹೆಚ್.ಡಿ.ದೇವೇಗೌಡ ಮನವಿ
ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (ವಿಐಎಸ್ಎಲ್) ಮುಚ್ಚುವ ಆದೇಶವನ್ನು ಹಿಂಪಡೆಯುವಂತೆ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Published: 23rd January 2023 08:05 AM | Last Updated: 23rd January 2023 03:32 PM | A+A A-

ಹೆಚ್.ಡಿ.ದೇವೇಗೌಡ
ಶಿವಮೊಗ್ಗ: ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (ವಿಐಎಸ್ಎಲ್) ಮುಚ್ಚುವ ಆದೇಶವನ್ನು ಹಿಂಪಡೆಯುವಂತೆ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಸಾರ್ವಜನಿಕ ವಲಯದ ಸಂಸ್ಥೆಯಾದ ವಿಐಎಸ್ಎಲ್ ಅನ್ನು ಮಹಾನ್ ದೂರದೃಷ್ಟಿಯುಳ್ಳ ಮತ್ತು ಇಂಜಿನಿಯರ್-ರಾಜ್ಯಜ್ಞ ಭಾರತ ರತ್ನ ಎಂ ವಿಶ್ವೇಶ್ವರಯ್ಯ ಸ್ಥಾಪಿಸಿದ್ದರು ಎಂದು ದೇವೇಗೌಡ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
‘1918ರಲ್ಲಿ ಆರಂಭವಾದ ವಿಐಎಸ್‌ಎಲ್ ಅನ್ನು ನಾನು ಪ್ರಧಾನಿಯಾಗಿದ್ದ ಅವಧಿಯಲ್ಲಿ 1996ರಲ್ಲಿ ಭಾರತೀಯ ಉಕ್ಕು ಪ್ರಾಧಿಕಾರದ ವ್ಯಾಪ್ತಿಗೆ ತರಲಾಗಿತ್ತು. ಪ್ರಾಧಿಕಾರವು ರೂ.650 ಕೋಟಿ ವೆಚ್ಚದಲ್ಲಿ ಕಾರ್ಖಾನೆಯನ್ನು ಆಧುನೀಕರಣಗೊಳಿಸಲು ಪ್ರಸ್ತಾವ ಸಿದ್ಧಪಡಿಸಿತ್ತು. ಆದರೆ, ಅದು ಸಾಕಾರಗೊಳ್ಳಲಿಲ್ಲ. 2016ರಲ್ಲಿ ನೀತಿ ಆಯೋಗವು ಹೂಡಿಕೆ ಹಿಂತೆಗೆತಕ್ಕೆ ಶಿಫಾರಸು ಮಾಡಿತ್ತು. ಆದರೆ, ಅದು ಕೂಡ ಸಫಲವಾಗಲಿಲ್ಲ. ಇದರಿಂದಾಗಿ ಕಾರ್ಖಾನೆಯು ಸಂಕಷ್ಟಕ್ಕೆ ಸಿಲುಕಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಐಎಸ್‌ಎಲ್ ಅತ್ಯುತ್ತಮ ಗುಣಮಟ್ಟದ ಉಕ್ಕು ತಯಾರಿಸುವ ಸಾಮರ್ಥ್ಯ ಹೊಂದಿದೆ. ಈ ಹಿಂದೆ ಇದೇ ಕಾರ್ಖಾನೆಯು ಅಣುಶಕ್ತಿ ಕೇಂದ್ರಗಳು, ರೈಲ್ವೆ ಇಲಾಖೆ, ಆಟೊಮೊಬೈಲ್ ಕ್ಷೇತ್ರಕ್ಕೆ ಗುಣಮಟ್ಟದ ಉಕ್ಕಿನ ಉತ್ಪನ್ನಗಳನ್ನು ಒದಗಿಸುತ್ತಿತ್ತು. ಈಗ 20,000 ಕುಟುಂಬಗಳು ಕಾರ್ಖಾನೆಯನ್ನು ಅವಲಂಬಿಸಿವೆ. ಮುಚ್ಚುವ ನಿರ್ಧಾರ ಕೈಗೊಂಡಿರುವುದರಿಂದ ಅವರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
2016ರಲ್ಲಿ ನೀತಿ ಆಯೋಗ ವಿಐಎಸ್‌ಎಲ್ ಕಾರ್ಖಾನೆಯನ್ನು ಖಾಸಗೀಕರಣಕ್ಕೆ ಶಿಫಾರಸು ಮಾಡಿತ್ತು. ಖಾಸಗಿ ಹೂಡಿಕೆದಾರರು ಕಾರ್ಖಾನೆ ಕೊಳ್ಳಲು ಒಲವು ತೋರಲಿಲ್ಲ. ಇದೀಗ ಸರಕಾರ 20 ಸಾವಿರ ಜನರ ಜೀವನಾಧಾರವಾಗಿರುವ ಕಾರ್ಖಾನೆಯನ್ನು ಮುಚ್ಚಲು ಹೊರಟಿದೆ ಎಂದು ತಿಳಿದು ಬಂದಿದೆ. ಕೂಡಲೇ ಉದ್ದೇಶಿತ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಆತ್ಮನಿರ್ಭರ ಭಾರತಕ್ಕೆ ಈ ಕಾರ್ಖಾನೆ ಹೆಚ್ಚಿನ ಕೊಡುಗೆ ನೀಡಬಲ್ಲದು. ರಕ್ಷಣಾ ಕ್ಷೇತ್ರ, ಪರಮಾಣು ವಲಯ, ಆಟೋಮೊಬೈಲ್ ಹಾಗೂ ರೈಲ್ವೆ ಉಪಕರಣಗಳಿಗೆ ಪೂರಕ ಉತ್ಪನ್ನಗಳನ್ನು ಇದರಿಂದ ಪೂರೈಕೆ ಮಾಡಬಹುದು. ಹೀಗಾಗಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಪ್ರಸ್ತಾವ ಕೈ ಬಿಟ್ಟು, ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವಂತೆ ಉಕ್ಕು ಸಚಿವಾಲಯ ಹಾಗೂ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಪ್ರಧಾನಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.