ಪಿಎಸ್‌ಐ ನೇಮಕಾತಿ ಹಗರಣ: ಆರೋಪಿ ಆರ್.ಡಿ.ಪಾಟೀಲ್‌ಗೆ ಸಿಐಡಿ ನೋಟಿಸ್, ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಪಿಎಸ್‌ಐ (ಪೊಲೀಸ್ ಸಬ್ ಇನ್ಸ್‌ಪೆಕ್ಟರ್) ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ದಳವು (ಸಿಐಡಿ), ಹಗರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಆರ್.ಡಿ.ಪಾಟೀಲ್'ಗೆ ನೋಟಿಸ್ ಜಾರಿ ಮಾಡಿದ್ದು, ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರಗಿ: ಪಿಎಸ್‌ಐ (ಪೊಲೀಸ್ ಸಬ್ ಇನ್ಸ್‌ಪೆಕ್ಟರ್) ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ದಳವು (ಸಿಐಡಿ), ಹಗರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಆರ್.ಡಿ.ಪಾಟೀಲ್'ಗೆ ನೋಟಿಸ್ ಜಾರಿ ಮಾಡಿದ್ದು, ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಈ ಹಿಂದೆ ಕೂಡ ಆರೋಪಿಗೆ ಹಲವು ಬಾರಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೂ ಆರೋಪಿ ಆರ್.ಡಿ.ಪಾಟೀಲ್ ವಿಚಾರಣೆಗೆ ಗೈರಾಗಿದ್ದ. ಇದೀಗ ಮತ್ತೊಂದು ನೋಟಿಸ್ ಜಾರಿ ಮಾಡಿ, ಜ. 23ರಂದು ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಲು ಸೂಚನೆ ನೀಡಲಾಗಿದೆ.

ಪ್ರಕರಣದ ತನಿಖಾಧಿಕಾರಿ, ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ರಾಥೋಡ್ ಶನಿವಾರ ಸಂಜೆ ನೋಟಿಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ.

ಸಿಐಡಿ ಅಧಿಕಾರಿಗಳು ಶನಿವಾರ ಬೆಳಿಗ್ಗೆ 11.00 ಗಂಟೆಗೆ ಪಾಟೀಲ್ ಅವರ ಮನೆಗೆ ಭೇಟಿ ನೀಡಿದ್ದು, ಸಂಜೆ 7.00 ಗಂಟೆಯವರೆಗೆ ಮನೆಯ ಮುಂದೆಯೇ ಕಾದು ಕುಳಿತಿದ್ದರು. ಆದರೆ, ಆರೋಪಿ ಮನೆಗೆ ಬಂದಿರಲಿಲ್ಲ ಎಂದು ನೋಟಿಸ್'ನಲ್ಲಿ ತಿಳಿಸಲಾಗಿದೆ.

ಆರೋಪಿ ಪಾಟೀಲ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಲಬುರಗಿಯಲ್ಲಿ ಪಿಎಸ್‌ಐ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಸಿಐಡಿ ಮತ್ತು ಇತರ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಭಾರೀ ಹಣವನ್ನು ಪಡೆದ ಹಿನ್ನೆಲೆಯಲ್ಲಿ ಪಾಟೀಲ್'ನನ್ನು ಬಂಧನಕ್ಕೊಳಪಡಿಸಲಾಗಿತ್ತು. ಪಾಟೀಲ್ ಅಭ್ಯರ್ಥಿಗಳಿಗೆ ಬ್ಲೂಟೂತ್ ಸಾಧನಗಳನ್ನು ಸರಬರಾಜು ಮಾಡಿದ್ದು, ಪರೀಕ್ಷಾ ಹಾಲ್‌ನೊಳಗೆ ಅಭ್ಯರ್ಥಿಗಳಿಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ ವಾರವಷ್ಟೇ ಸಿಐಡಿ ಅಧಿಕಾರಿಗಳನ್ನು ತಳ್ಳಿ, ಓಡಿ ಪರಾರಿಯಾಗಿದ್ದ. ಅದಾದ ಬಳಿಕ ಶನಿವಾರ ಅಜ್ಞಾತ ಸ್ಥಳದಿಂದ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಮಾಡಿ, ಈ ನೆಲದ ಕಾನೂನಿಗೆ ಗೌರವ ಕೊಡುವುದಾಗಿ ಹೇಳಿಕೆ ನೀಡಿದ್ದ.

ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿಗಳು, ಅಭ್ಯರ್ಥಿಗಳು ಮತ್ತು ಕೆಲವು ಪೊಲೀಸ್ ಅಧಿಕಾರಿಗಳು ಸೇರಿದಂತೆ 40 ಕ್ಕೂ ಹೆಚ್ಚು ಜನರನ್ನು ಸಿಐಡಿ ಬಂಧಿಸಿದೆ. ಬಂಧಿತರು ಮೂರು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಬಹುತೇಕ ಆರೋಪಿಗಳು ಜಿಲ್ಲಾ ಮತ್ತು ಉಚ್ಚ ನ್ಯಾಯಾಲಯಗಳಿಂದ ಷರತ್ತುಬದ್ಧ ಜಾಮೀನು ಪಡೆದುಕೊಂಡಿದ್ದಾರೆ.

ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದ ಹಗರಣ ಆರೋಪಿ
ಈ ನಡುವೆ ಆರೋಪಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧನಿದ್ದೇನೆಂದು ಹೇಳಿಕೊಂಡಿದ್ದಾರೆ.

ಆರೋಪಿ ಅಫಜಲಪುರ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದು, ಜನರು ಬಯಸಿದಲ್ಲಿ ಮುಂಬರುವ ಚುನಾವಣೆಯಲ್ಲಿ ಅಫಜಲಪುರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿರುವುದು ಕಂಡು ಬಂದಿದೆ. ಈ ವಿಡಿಯೋ ಶನಿವಾರ ವೈರಲ್ ಆಗಿತ್ತು.

“ಸಿಐಡಿ ಅಧಿಕಾರಿಗಳು ನನ್ನ ಮನೆಗೆ ಬಂದಾಗ ಅವರನ್ನು ತಳ್ಳಿ ಓಡಿಹೋದೆ ಎಂಬ ಸುದ್ದಿಗಳು ತಪ್ಪು. ಸಿಐಡಿ ವಿರುದ್ಧ ಹೋಗಲು ಸಾಧ್ಯವಿಲ್ಲ, ಕಾನೂನನ್ನು ನಾನು ಗೌರವಿಸುತ್ತೇನೆ. ನನ್ನನ್ನು ರಾಜಕೀಯ ಷಡ್ಯಂತ್ರದಲ್ಲಿ ಬಲಿಪಶು ಮಾಡಲಾಗಿದೆ ಎಂದು ಕಿಡಿಕಾರಿದ್ದಾನೆ.

ನಾನು ಮತ್ತು ನನ್ನ ಸಹೋದರ ಸಮಾಜ ಸೇವೆ ಮಾಡುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಸೋಲುತ್ತೇವೆಂದು ಕೆಲ ಸಂಚುಕೋರರು ಚಿಂತಿಸಿದ್ದರೆ ಅದು ತಪ್ಪು. ಸುಳ್ಳು ಆರೋಪಿಗಳಿಗೆ ನಾನು ಹೆದರುವುದಿಲ್ಲ. ನನ್ನ ಅನುಯಾಯಿಗಳು ಭೀತಿಗೊಳಗಾಗಬಾರದು. ಪ್ರಕರಣ ಸಂಬಂಧ ಜಾಮೀನಿನ ಮೇಲೆ ಹೊರಬಂದ ನಂತರ ಸಿಬಿಐ ಅಧಿಕಾರಿಗಳ ವಿಚಾರಣೆಗೆ ನಾನು ಸಹಕರಿಸುತ್ತಿಲ್ಲ ಎಂಬ ಮಾತುಗಳು ಸುಳ್ಳು ಎಂದು ಹೇಳಿಕೊಂಡಿದ್ದಾನೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com