ಕುಡಿದು ಬಂದು ಕಿರುಕುಳ; ಪೆಟ್ರೋಲ್ ಸುರಿದು ಪುತ್ರನನ್ನೇ ಸಜೀವ ದಹನ ಮಾಡಿದ ತಂದೆ!
ಚಿಕ್ಕಬಳ್ಳಾಪುರ ಜಿಲ್ಲೆಯ ವಾಣಿಗರಹಳ್ಳಿಯಲ್ಲಿ ಕುಡಿದು ಬಂದು ತನ್ನ ತಾಯಿಯ ಮೇಲೆ ಹಲ್ಲೆ ಮಾಡುತ್ತಿದ್ದ ಪುತ್ರನ ಕೃತ್ಯಕ್ಕೆ ಬೇಸತ್ತ ತಂದೆಯೊಬ್ಬರು, ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಶನಿವಾರ ನಡೆದಿದೆ.
Published: 01st July 2023 03:08 PM | Last Updated: 01st July 2023 03:08 PM | A+A A-

ಸಾಂದರ್ಭಿಕ ಚಿತ್ರ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ವಾಣಿಗರಹಳ್ಳಿಯಲ್ಲಿ ಕುಡಿದು ಬಂದು ತನ್ನ ತಾಯಿಯ ಮೇಲೆ ಹಲ್ಲೆ ಮಾಡುತ್ತಿದ್ದ ಪುತ್ರನ ಕೃತ್ಯಕ್ಕೆ ಬೇಸತ್ತ ತಂದೆಯೊಬ್ಬರು, ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಶನಿವಾರ ನಡೆದಿದೆ.
ಪೊಲೀಸರ ಪ್ರಕಾರ, ನಿತ್ಯವೂ ಕುಡಿದು ಬರುತ್ತಿದ್ದ 28 ವರ್ಷದ ಆದರ್ಶ ಮನೆಯಲ್ಲಿ ಯಾವಾಗಲೂ ಗಲಾಟೆ ಮಾಡುತ್ತಿದ್ದನು. ಅಲ್ಲದೆ, ಇತರರೊಂದಿಗೂ ಜಗಳವಾಡುತ್ತಿದ್ದನು. ಆದರ್ಶನ ತಂದೆ ಜಯರಾಮಯ್ಯ (58) ಅವರು ಆತನಿಗೆ ಹಲವು ಬಾರಿ ಬುದ್ಧಿ ಹೇಳಿದರೂ ಪ್ರಯೋಜನವಾಗಿರಲಿಲ್ಲ.
ಆದರ್ಶ ತನ್ನ ತಾಯಿಯ ಬಳಿ ಹಣ ಕೇಳಿದ್ದಾನೆ. ಆಕೆ, ಹಣ ನೀಡಲು ನಿರಾಕರಿಸಿದಾಗ ಆತ ಅವರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಆದರ್ಶನ ತಂದೆ ಆತನಿಗೆ ಥಳಿಸಿದ್ದಾರೆ. ಹಲ್ಲೆ ತಾಳಲಾರದೆ ಆದರ್ಶ ಕುಸಿದು ಬಿದ್ದಿದ್ದಾನೆ. ಸಿಟ್ಟಿಗೆದ್ದ ಜಯರಾಮಯ್ಯ ಆದರ್ಶನ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡಿದ್ದಾನೆ.
ದೊಡ್ಡಬೆಳವಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿವರ ನಿರೀಕ್ಷಿಸಲಾಗುತ್ತಿದೆ.