ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 9 ಸಾವಿರ ಸಿಬ್ಬಂದಿಗಳ ನೇಮಕ: ಸಚಿವ ರಾಮಲಿಂಗಾ ರೆಡ್ಡಿ

ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಸುಮಾರು 9,000 ಸಿಬ್ಬಂದಿಗಳನ್ನು ಶೀಘ್ರದಲ್ಲಿಯೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಶುಕ್ರವಾರ ಹೇಳಿದರು.
ಬಿಎಂಟಿಸಿಯ 50 ಹೊಸ ಬೊಲೆರೊ ಜೀಪ್‌ಗಳು ಮತ್ತು ತರಬೇತಿ ವಾಹನಗಳಿಗೆ ಚಾಲನೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ.
ಬಿಎಂಟಿಸಿಯ 50 ಹೊಸ ಬೊಲೆರೊ ಜೀಪ್‌ಗಳು ಮತ್ತು ತರಬೇತಿ ವಾಹನಗಳಿಗೆ ಚಾಲನೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ.
Updated on

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಸುಮಾರು 9,000 ಸಿಬ್ಬಂದಿಗಳನ್ನು ಶೀಘ್ರದಲ್ಲಿಯೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಶುಕ್ರವಾರ ಹೇಳಿದರು.

ಬಿಎಂಟಿಸಿಯ 50 ಹೊಸ ಬೊಲೆರೊ ಜೀಪ್‌ಗಳು ಮತ್ತು ತರಬೇತಿ ವಾಹನಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿಯಲ್ಲಿ 3,745 ಚಾಲನಾ ಸಿಬ್ಬಂದಿಗಳು ಹಾಗೂ 726 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಈಗಾಗಲೇ ಕರೆಯಲಾಗಿದ್ದು, ಜಾಹೀರಾತು ಪ್ರಕ್ರಿಯೆಯನ್ನು ಮುಂದುವರೆಸಿ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಜೊತೆಗೆ ಹೊಸದಾಗಿ 1,433 ಚಾಲನಾ ಸಿಬ್ಬಂದಿಗಳ ಮತ್ತು 2,738 ತಾಂತ್ರಿಕ ಸಿಬ್ಬಂದಿಗಳನ್ನು ನೇರ ನೇಮಕಾತಿ ಮೂಲಕ ತುಂಬಲು ಸರ್ಕಾರದಿಂದ ಅನುಮತಿ ಪಡೆಯಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಇದಲ್ಲದೆ, ನಿಗಮಗಳಿಗೆ 4,000 ಬಸ್‌ಗಳನ್ನು ಖರೀದಿಸಲಾಗುವುದು. ಸಾರಿಗೆ ನಿಗಮಗಳು ಪ್ರಸ್ತುತ 24,000 ಬಸ್‌ಗಳನ್ನು ಹೊಂದಿದ್ದು, ಜನಸಂಖ್ಯೆ ಅನುಗುಣವಾಗಿ ಇನ್ನೂ 10,000 ರಿಂದ 12,000 ಬಸ್‌ಗಳ ಅಗತ್ಯವಿದೆ. ಕೆಕೆಆರ್‌ಟಿಸಿಗೆ 150 ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ 706 ಬಸ್‌ಗಳನ್ನು ಖರೀದಿಸಲು ಚಿಂತನೆ ನಡೆಸಲಾಗಿದ್ದು, ಎನ್‌ಡಬ್ಲ್ಯುಕೆಆರ್‌ಟಿಸಿಗೆ ಜಿಸಿಸಿ ಆಧಾರದ ಮೇಲೆ 450 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಟೆಂಡರ್ ಆಹ್ವಾನಿಸಲು ಅನುಮತಿ ನೀಡಲಾಗಿದೆ, ಇದಕ್ಕಾಗಿ 24 ಇತರೆ ಬಸ್‌ಗಳನ್ನು ಖರೀದಿಸಲಾಗುತ್ತದೆ. "ಪ್ರೀಮಿಯರ್ ಕೋಚ್‌ಗಳ ಹೆಚ್ಚುವರಿ ಅವಶ್ಯಕತೆಗಳನ್ನು ಪೂರೈಸಲು ಮತ್ತು ಖಾಸಗಿ ನಿರ್ವಾಹಕರಿಗೆ ಪೈಪೋಟಿ ನೀಡಲು, 44 ನಾನ್ ಎಸಿ ಸ್ಲೀಪರ್ ಬಸ್‌ಗಳು ಮತ್ತು 4 ಎಸಿ ಸ್ಲೀಪರ್ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಫ್ಲೀಟ್‌ಗೆ ಸೇರ್ಪಡೆಗೊಳಿಸಲಾಗುವುದು ಎಂದು ತಿಳಿಸಿದರು.

ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್‌ಗೆ 10 ಪೆಟ್ರೋಲ್ ಬಂಕ್ ಮಳಿಗೆಗಳನ್ನು ಪ್ರಾರಂಭಿಸಲು ಒಪ್ಪಿಗೆ ನೀಡಲಾಗಿದ್ದು, ಕೆಎಸ್‌ಆರ್‌ಟಿಸಿಯ ಲಭ್ಯವಿರುವ ಭೂಮಿಯಲ್ಲಿ ಇನ್ನೂ 36 ಪೆಟ್ರೋಲ್ ಬಂಕ್‌ಗಳನ್ನು ಪ್ರಾರಂಭಿಸಲು ಟೆಂಡರ್ ಆಹ್ವಾನಿಸಲಾಗುತ್ತದೆ. ಅಲ್ಲದೆ, ಕಾರ್ಪೊರೇಷನ್‌ನ ವಾಣಿಜ್ಯ ಆದಾಯವನ್ನು ಹೆಚ್ಚಿಸಲು ಪಾರ್ಸೆಲ್‌ಗಳು ಮತ್ತು ಕೊರಿಯರ್‌ಗಳ ಸಾಗಣೆಗೆ ಅನುಕೂಲವಾಗುವಂತೆ “ನಮ್ಮ ಕಾರ್ಗೋ” ಲಾಜಿಸ್ಟಿಕ್ ಯೋಜನೆಗೆ 6 ಟನ್ ಸಾಮರ್ಥ್ಯದ 20 ಪೂರ್ಣ ನಿರ್ಮಿತ ಟ್ರಕ್ಕುಗಳನ್ನು ಖರೀದಿಸಲಾಗುತ್ತಿದೆ. ಈ ಟ್ರಕ್‌ಗಳನ್ನು ಕೆಎಸ್‌ಆರ್‌ಟಿಸಿ ಡಿಪೋ ಮತ್ತು ವಿಭಾಗೀಯ ಕಾರ್ಯಾಗಾರಗಳಲ್ಲಿಯೂ ಬಳಸಲಾಗುವುದು ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com