ಭಾರಿ ಮಳೆ: ದಕ್ಷಿಣ ಕನ್ನಡ, ಉಡುಪಿ ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ, ಉತ್ತರ ಕನ್ನಡಕ್ಕೆ ರೆಡ್ ಅಲರ್ಟ್
ದಕ್ಷಿಣಕನ್ನಡ: ಕರಾವಳಿ ಕರ್ನಾಟಕದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ.
ಹೌದು.. ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು ಗುರುವಾರವೂ ಧಾರಾಕಾರ ಮಳೆಯಾಗುವ ಸೂಚನೆಯಿದೆ. ಇನ್ನು ನಿರಂತರ ಮಳೆ ಸುರಿಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ಮೇ 6(ಗುರುವಾರ) ರಂದು ರಜೆ ಘೋಷಿಸಲಾಗಿದ್ದರೆ, ಉಡುಪಿ ಜಿಲ್ಲೆಯಲ್ಲೂ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ.
ಹವಾಮಾನ ವರದಿಯ ಪ್ರಕಾರ ಕರಾವಳಿಯ ಗುರುವಾರಂದು 13 ಕಡೆಗಳಲ್ಲಿ ಅತಿ ಭಾರೀ ಮಳೆ, 11 ಕಡೆ ಭಾರೀ ಮಳೆ ಮತ್ತು ಹಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ತಲಾ 3 ಕಡೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಬುಧವಾರದಂದು ದಕ್ಷಿಣ ಗುಜರಾತ್ ನಿಂದ ಉತ್ತರ ಕೇರಳದ ಕರಾವಳಿಗೆ ಸೇರಿರುವ ಸಮುದ್ರ ಪ್ರದೇಶದಲ್ಲಿ ವಾಯುಭಾರ ಕುಸಿತದಿಂದಾಗಿ ಇನ್ನೂ 5 ದಿನಗಳ ಕಾಲ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಕನ್ನಡಕ್ಕೆ ರೆಡ್ ಅಲರ್ಟ್
ಮೇ 6 ಗುರುವಾರದಂದು ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಧಾರವಾಡ, ಗದಗ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮೇ 7ರಂದು ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬುಧವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರ ಮತ್ತು ಶಿರಾಲಿಯಲ್ಲಿ ತಲಾ 18 ಸೆಂ.ಮೀ. ಮಳೆಯಾಗಿದ್ದು, ದಕ್ಷಿಣ ಕನ್ನಡದ ಮುಲ್ಕಿಯಲ್ಲಿ 17 ಸೆಂ.ಮೀ, ಬೆಳ್ತಂಗಡಿಯಲ್ಲಿ 16 ಸೆಂ.ಮೀ ಮಳೆಯಾಗಿದ್ದರೆ ಉಡುಪಿ ಜಿಲ್ಲೆಯ ಉಡುಪಿ ಮತ್ತು ಕಾರ್ಕಳದಲ್ಲಿ ತಲಾ 15 ಸೆಂ.ಮೀ. ಮಳೆ ಸುರಿದಿದೆ.
ಉತ್ತರ ಒಳನಾಡಿನ ಕಲಬುರಗಿ ಜಿಲ್ಲೆಯ ಉಧೋಣಿಯಲ್ಲಿ 11 ಸೆಂ.ಮೀ, ಬೀದರ್ ಜಿಲ್ಲೆ ನಿರ್ಣಾದಲ್ಲಿ 10 ಸೆಂ.ಮೀ, ಕಲಬುರಗಿ ಜಿಲ್ಲೆಯ ಅಡಕೆಯಲ್ಲಿ 10 ಸೆಂ.ಮೀ. ಮಳೆಯಾಗಿದೆ. ಇನ್ನು ದಕ್ಷಿಣ ಒಳನಾಡಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ 9 ಸೆಂ.ಮೀ, ಕೊಡಗು ಜಿಲ್ಲೆ ಭಾಗಮಂಡಲದಲ್ಲಿ 8 ಸೆಂ.ಮೀ, ಚಿಕ್ಕಮಗಳೂರು ಜಿಲ್ಲೆ ಕಮ್ನಾಡಿಯಲ್ಲಿ 7 ಸೆಂ.ಮೀ. ಮಳೆಯಾಗಿದೆ. ಅದು ಬಿಟ್ಟರೆ ಹೆಚ್ಚಿನ ಕಡೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ