ಬೆಂಗಳೂರು: ಜೈನ ಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ. ಪ್ರಕರಣದ ತನಿಖೆ ನಡೆಸಲು ನಮ್ಮ ಪೊಲೀಸರು ಸಮರ್ಥವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವಿಧಾನಸಭೆ ತಿಳಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ನಾಯಕರು ಜೈನಮುನಿ ಹತ್ಯೆ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಜೈನ ಮುನಿ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿದೆ. ಜೈನ ಮುನಿಯ ಹತ್ಯೆ ಅಮಾನುಷ ಕಗ್ಗೊಲೆಯಾಗಿದೆ. ಇಬ್ಬರು ಆರೋಪಿಗಳ ಹೆಸರು ಎಫ್ ಐ ಆರ್ ನಲ್ಲಿ ಇದೆ. ಇಬ್ಬರು ಆರೋಪಿಗಳ ಬಂದನವೂ ಆಗಿದೆ. ಮೃತದೇಹವನ್ನು ಪತ್ತೆ ಹಚ್ಚಲಾಗಿದೆ. ಪೊಲೀಸರು ತಪ್ಪು ಎಲ್ಲಿದೆ? ಎಂದು ಪ್ರಶ್ನಿಸಿದರು.
ಜೈನ ಮುನಿಗಳ ಹತ್ಯೆ ಪ್ರಕರಣದಲ್ಲಿ ಪೊಲೀಸರು ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಇದರ ಹಿಂದೆ ಎಷ್ಟೇ ಪ್ರಭಾವಿಗಳು ಇದ್ದರೂ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತೇವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿದೆ ಎಂದು ಸಿಎಂ ಭರವಸೆ ನೀಡಿದರು.
ಟಿ ನರಸೀಪುರ ಅಥವಾ ಜೈನ ಮುನಿ ಪ್ರಕರಣದಲ್ಲಿ ಯಾವ ಒತ್ತಡಕ್ಕೆ ಮಣಿಯಲ್ಲ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಲಿದೆ. ಈ ಪ್ರಕರಣಗಳನ್ನು ಸಿಬಿಐಗೆ ಕೊಡುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಟಿ. ನರಸೀಪುರದಲ್ಲಿ ಹನುಮ ಜಯಂತಿ ಸಂದರ್ಭದಲ್ಲಿ ನಡೆದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಇದ್ದರೆ ಕ್ರಮ ಕೈಗೊಳ್ಳುತ್ತೇವೆ. ಹನುಮ ಜಯಂತಿಗೆ ಸರಿಯಾದ ಬಂದೋಬಸ್ತ್ ಮಾಡಲಾಗಿತ್ತು. ಹಳೆ ವೈಷಮ್ಯದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.
Advertisement