ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಧಾನಸೌಧ, ರಾಜಭವನ ಸುತ್ತಲಿನ ಭದ್ರತೆಗೆ ಹೊಸ ತಂತ್ರಜ್ಞಾನ: ಸ್ಪೀಕರ್ ಖಾದರ್

ಬಜೆಟ್ ಮಂಡನೆ ಕಲಾಪ ದಿನದಂದು ಅಪರಿಚಿತ ವ್ಯಕ್ತಿ ಸದನ ಪ್ರವೇಶ ಪ್ರಕರಣದ ಬಳಿಕ ಎಚ್ಚೆತ್ತಿಕೊಂಡಿರುವ ವಿಧಾನಸೌಧ ಭದ್ರತಾ ಸಿಬ್ಬಂದಿ, ತಪಾಸಣೆ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಮತ್ತೊಂದೆಡೆ ವಿಧಾನಸೌಧ, ರಾಜಭವನ ಸುತ್ತಲಿನ ಭದ್ರತೆಗೆ ಹೊಸ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಲಾಗುವುದು.

ಬೆಂಗಳೂರು: ಬಜೆಟ್ ಮಂಡನೆ ಕಲಾಪ ದಿನದಂದು ಅಪರಿಚಿತ ವ್ಯಕ್ತಿ ಸದನ ಪ್ರವೇಶ ಪ್ರಕರಣದ ಬಳಿಕ ಎಚ್ಚೆತ್ತಿಕೊಂಡಿರುವ ವಿಧಾನಸೌಧ ಭದ್ರತಾ ಸಿಬ್ಬಂದಿ, ತಪಾಸಣೆ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಮತ್ತೊಂದೆಡೆ ವಿಧಾನಸೌಧ, ರಾಜಭವನ ಸುತ್ತಲಿನ ಭದ್ರತೆಗೆ ಹೊಸ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸೋಮವಾರ ಹೇಳಿದ್ದಾರೆ.

ಸೋಮವಾರ ವಿಧಾನಸೌಧದ ಸ್ಪೀಕರ್ ಕೊಠಡಿಯಲ್ಲಿ ಭದ್ರತಾ ಲೋಪದ ಬಗ್ಗೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸಭೆ ನಡೆಸಿದರು. ಇದಕ್ಕೂ ಮುನ್ನ ಅವರು ವಿಧಾನಸೌಧ ಭದ್ರತಾ ಪರಿಶೀಲನೆ ನಡೆಸಿದ್ದರು.

ಬಳಿಕ ಪ್ರಶ್ನೋತ್ತರ ಕಲಾಪದ ನಂತರ ಸಭಾಧ್ಯಕ್ಷರು ಈ ವಿಷಯ ಪ್ರಸ್ತಾಪಿಸಿ, ಇತ್ತೀಚೆಗೆ ವಿಧಾನಸಭೆಯ ಸಭಾಂಗಣಕ್ಕೆ ಆಗಮಿಸಿ ಜೆಡಿಎಸ್ ಶಾಸಕಿ ಕರೆಮ್ಮ ಅವರಿಗೆ ಮೀಸಲಾದ ಸ್ಥಾನದಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯನ್ನು ಪತ್ತೆ ಹಚ್ಚಿತ ಇದೀಗ ವಿಧಾನಸೌಧ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ ಎಂದರು.

ಈ ಘಟನೆ ಹಿನ್ನೆಲೆಯಲ್ಲಿ ಮುಂದೆ ಶಾಸಕರು, ಸಚಿವರು ಮತ್ತು ಮಾಧ್ಯಮದವರು ಭದ್ರತಾ ಸಿಬ್ಬಂದಿಗೆ ತಮ್ಮ ಗುರುತಿನ ಚೀಟಿ ತೋರಿಸಿ ಒಳ ಬರಬೇಕು. ಭದ್ರತಾ ಸಿಬ್ಬಂದಿ ಜೊತೆ ಸಹಕರಿಸಬೇಕು. ಯಾರೂ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.

ವಿಧಾನಸೌಧ, ರಾಜಭವನ ಸೇರಿದಂತೆ ಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ಆಗದಂತೆ ಅತ್ಯಾಧುನಿಕ ತಂತ್ರಜ್ಞಾನದ ಭದ್ರತೆಯನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮತ್ತೊಂದೆಡೆ, ಸಚಿವರು, ಶಾಸಕರು ಸೇರಿದಂತೆ ಎಲ್ಲರೂ ತಮ್ಮ ಗುರುತಿನ ಚೀಟಿ ತೋರಿಸಿದರೆ ಮಾತ್ರ ಪ್ರವೇಶ ಕಲ್ಪಿಸಲು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಸೂಚಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com