ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳಾಗುವಷ್ಟರಲ್ಲೇ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ 500 ಕೋಟಿ ರು. ಕೈ ಬದಲಾವಣೆ ಆಗಿದೆ ಎಂಬ ಮಾಹಿತಿ ಸಿಕ್ಕಿದೆ’ ಎಂದು ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ವರ್ಗಾವರ್ಗಿ ದಂಧೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಬಗ್ಗೆ ನನಗೆ ಮಾಹಿತಿ ಇದೆ. ಕರ್ನಾಟಕ ಸಮೃದ್ಧವಾಗಿದೆ. ಜನ ಪ್ರಾಮಾಣಿಕವಾಗಿ ತೆರಿಗೆ ಕಟ್ಟಿ ಖಜಾನೆ ತುಂಬಿಸುತ್ತಿದ್ದಾರೆ. ಕಾಂಗ್ರೆಸ್‌ನವರು ಇಲ್ಲಿ ಚೆನ್ನಾಗಿ, ಪೊಗದಸ್ತಾಗಿ ಮೇಯುತ್ತಿದ್ದಾರೆ. ಆ ಮೇವನ್ನು ಇಡೀ ದೇಶಕ್ಕೆಲ್ಲ ಹಂಚಲು ಹೊರಟಿದ್ದಾರೆ. ಇದೇನಾ ಕರ್ನಾಟಕದ ಮಾದರಿ ಅಂದ್ರೆ? ಇದೇನಾ ಹೊಸ ಭರವಸೆ, ಹೊಸ ಕನಸು? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ವರ್ಗಾವಣೆ ದಂಧೆಯಲ್ಲಿ ನಾನು ತೊಡಗಿಲ್ಲ, ಬೇರೆ ಯಾರಾದರೂ ಹಾಗೆ ಮಾಡುತ್ತಿದ್ದರೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿಯವರು ವಿಧಾನಸಭೆಯಲ್ಲಿ ಹೇಳಿದ್ದಾರೆ. ಮುಖ್ಯಮಂತ್ರಿಯೇ ಹೀಗೆ ಹೇಳಿದರೆ ಅರ್ಥವೇನು’ ಎಂದು ಪ್ರಶ್ನಿಸಿದರು. ಚಾಲ್ತಿಯಲ್ಲಿರುವ ಕಾಮಗಾರಿಗಳ ಅಂದಾಜು ವೆಚ್ಚವನ್ನು ಶೇಕಡ 20ರಿಂದ 30ರಷ್ಟು ಹೆಚ್ಚಿಸಲಾಗುತ್ತಿದೆ. ಕಮಿಷನ್ ಹೊಡೆಯುವುದಕ್ಕೆ ಏನು ಬೇಕೋ ಅದೆಲ್ಲವನ್ನೂ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರೇಟ್ ಕಾರ್ಡ್ ರಿಲೀಸ್ ಆಯಿತು. ಎಕ್ಸೆಲ್ ಶೀಟ್‌ನಲ್ಲಿ ಇವರ ಭ್ರಷ್ಟಾಚಾರದ ವಿಶ್ವರೂಪ ಬಯಲಾಯಿತು. ಇವರ ಹಣೆಬರಹ ಏನೂಂತ ಇಡೀ ಜಗತ್ತಿಗೆ ಗೊತ್ತಾಯಿತು. ನನ್ನ ಕಾಲದಲ್ಲಿ ಏನೂ ಇಲ್ಲ. 2008 ರಿಂದ 2013ರ ಅವಧಿಯಲ್ಲಿ ಮಾಗಡಿ ವಿಧಾನಸಭೆಯಲ್ಲಿ ನಡೆದ ರಸ್ತೆ ಕಾಮಗಾರಿ ಹೇಳಲಿ ನೋಡೋಣ. ಇದು ಸಿದ್ದರಾಮಯ್ಯ, ಮಹದೇವಪ್ಪ ಅವರ ಕಾಲದ್ದು ಎಂದು ಕುಮಾರಸ್ವಾಮಿ ಹೇಳಿದರು.
Advertisement