ಉಡುಪಿ ಕಾಲೇಜು ವಿಡಿಯೋ ಪ್ರಕರಣ: ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ- ಖುಷ್ಬೂ ಸುಂದರ್
ಉಡುಪಿ: ಉಡುಪಿಯ ನೇತ್ರಾ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಂದೂ ಯುವತಿಯ ವಿಡಿಯೋ ರೆಕಾರ್ಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ಕಾನೂನು ಪ್ರಕಾರ ಕ್ರಮಕೈಗೊಂಡಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು)ದ ಸದಸ್ಯೆ ಖುಷ್ಬು ಸುಂದರ್ ಅವರು ಗುರುವಾರ ಹೇಳಿದ್ದಾರೆ.
ಇಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಖುಷ್ಬು, ಇದೊಂದು ಸೂಕ್ಷ್ಮ ವಿಷಯವಾಗಿದ್ದು, ರಾಜಕೀಯ ಮಾಡಬಾರದು ಎಂದು ಸಮರ್ಥಿಸಿಕೊಂಡರು. "ಪೊಲೀಸರಿಂದ ನನಗೆ ಮಾಹಿತಿ ಸಿಕ್ಕಿದೆ. ತನಿಖೆ ಮುಗಿದಿಲ್ಲ ಮತ್ತು ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ" ಎಂದು ಅವರು ಹೇಳಿದರು.
ಇದು ಒಂದೇ ದಿನದಲ್ಲಿ ತೀರ್ಮಾನ ಆಗುವುದಿಲ್ಲ, ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ. ಕಾಲೇಜು ಆಡಳಿತ ಮಂಡಳಿ ಪತ್ರಿಕಾಗೋಷ್ಠಿ ನಡೆಸಿ ವಿಡಿಯೋ ಡಿಲೀಟ್ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ದೂರು ದಾಖಲಿಸಿದ್ದಾರೆ ಎಂದು ತಿಳಿಸಿದರು.
ಈ ವಿಚಾರವಾಗಿ ಮಾತನಾಡುವವರು ಕಾನೂನನ್ನು ಅರಿತು ಮಾತನಾಡಬೇಕು. ವದಂತಿ ಹಬ್ಬಿಸಬಾರದು. ಹೆಣ್ಣು ಮಕ್ಕಳ ರಕ್ಷಣೆ ನಮಗೆ ಮುಖ್ಯ. ಆ ಹೆಣ್ಣುಮಕ್ಕಳು ನಮ್ಮ ಕುಟುಂಬಕ್ಕೆ ಸೇರಿದವರು. ಸಮಸ್ಯೆ ಪರಿಹರಿಸುವುದು ಮುಖ್ಯ. ಧಾರ್ಮಿಕ ಅಥವಾ ರಾಜಕೀಯ ಕಾರಣಗಳಿಗಾಗಿ ನಾನು ಇಲ್ಲಿಗೆ ಬಂದಿಲ್ಲ. ಪೋಷಕರಾಗಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುವುದು" ಖುಷ್ಬು ಹೇಳಿದ್ದಾರೆ.
"ರಾಜಕೀಯ ಮುಖಂಡರು ಮತ್ತು ರಾಜಕೀಯ ಪಕ್ಷಗಳು ಈ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು. ವಿದ್ಯಾರ್ಥಿಗಳು ದೇಶದ ಆಸ್ತಿ ಮತ್ತು ಭವಿಷ್ಯ. ಅವರನ್ನು ರಕ್ಷಿಸಬೇಕು ಮತ್ತು ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸಬೇಕು. ನಾನು ಯಾರನ್ನೂ ದೂಷಿಸಲು ಇಲ್ಲಿಗೆ ಬಂದಿಲ್ಲ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ