ಷರತ್ತುಗಳಿಲ್ಲದೆ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ: ಗೋವಿಂದ ಕಾರಜೋಳ
ರಾಜ್ಯದ ಕಾಂಗ್ರೆಸ್ ಪಕ್ಷವು ನೀಡಿದ ವಿವಿಧ ಗ್ಯಾರಂಟಿ ಯೋಜನೆಗಳನ್ನು ಷರತ್ತುಗಳಿಲ್ಲದೆ ಅನುಷ್ಠಾನಕ್ಕೆ ತರಬೇಕು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಆಗ್ರಹಿಸಿದ್ದಾರೆ.
Published: 01st June 2023 11:13 AM | Last Updated: 01st June 2023 11:13 AM | A+A A-

ಗೋವಿಂದ ಕಾರಜೋಳ
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಪಕ್ಷವು ನೀಡಿದ ವಿವಿಧ ಗ್ಯಾರಂಟಿ ಯೋಜನೆಗಳನ್ನು ಷರತ್ತುಗಳಿಲ್ಲದೆ ಅನುಷ್ಠಾನಕ್ಕೆ ತರಬೇಕು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಆಗ್ರಹಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆಂದು ಕಾಂಗ್ರೆಸ್‍ನವರು, ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷ ಹಾಗೂ ಈಗಿನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ನಾಡಿನ ಜನತೆಗೆ 5 ಗ್ಯಾರಂಟಿಗಳನ್ನು ಕೊಟ್ಟಿದ್ದರು. ಅಲ್ಲದೆ, ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಟೀಕಿಸಿದರು.
ಗ್ಯಾರಂಟಿ ಕಾರ್ಡ್ ಜೋಪಾನವಾಗಿ ಇಟ್ಟುಕೊಳ್ಳಿ; ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೊದಲನೇ ಸಂಪುಟ ಸಭೆಯಿಂದ ನಾವು 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ನಿಮ್ಮ ಕುಟುಂಬಕ್ಕೆ ಪ್ರತಿ ತಿಂಗಳೂ ಕನಿಷ್ಠ ರೂ. 10 ಸಾವಿರದಷ್ಟು ಅನುಕೂಲ ಆಗಲಿದೆ ಎಂದು ಜನರಿಗೆ ಭರವಸೆ ಕೊಟ್ಟು ಮೋಸ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಇದನ್ನೂ ಓದಿ: ಪ್ರತಿಪಕ್ಷಗಳು ಗೊಂದಲ ಸೃಷ್ಟಿಸಬೇಡಿ: 'ಗ್ಯಾರಂಟಿ' ಜಾರಿಗೆ ಸಮಯ ಕೊಡಿ; ಬಿಜೆಪಿ ಎಂಎಲ್ ಸಿ ವಿಶ್ವನಾಥ್
ಕಾಂಗ್ರೆಸ್ ಪಕ್ಷವು ಮೋಸ, ವಂಚನೆ, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಯಾವ ಮಟ್ಟಕ್ಕಾದರೂ ಹೋಗುವುದನ್ನು ಸ್ವಾತಂತ್ರ್ಯಾನಂತರದ 60 ವರ್ಷಗಳಲ್ಲಿ ಮಾಡುತ್ತಲೇ ಬಂದಿದೆ. ಮೊದಲ 60 ವರ್ಷಗಳಲ್ಲಿ ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತಿ ಆಡಳಿತ ಮಾಡಿದ್ದರು. ಬಡವರ ಮೂಗಿಗೆ ತುಪ್ಪ ಸವರಿದರು, ಗರೀಬಿ ಹಠಾವೋ ಮಾಡುವುದಾಗಿ ಹೇಳಿದ್ದರೂ ಬಡತನ ನಿರ್ಮೂಲನೆ, ಬಡವರ ಕಲ್ಯಾಣ, ದೀನದಲಿತರ ಉದ್ಧಾರ ಮಾಡಲಿಲ್ಲ ಎಂದು ತಿಳಿಸಿದರು.
ಜನರಿಗೆ ಸತತವಾಗಿ ಮೋಸ ಮಾಡುತ್ತಾ ಬಂದ ಕಾಂಗ್ರೆಸ್ ಪಕ್ಷವು ಇವತ್ತು ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಗ್ಯಾರಂಟಿಗಳನ್ನು ಕೊಟ್ಟಿದೆ. ಕುಟುಂಬದ ಯಜಮಾನಿಗೆ 2 ಸಾವಿರ ಕೊಡುವುದಾಗಿ ತಿಳಿಸಿದ್ದರು. ಈಗ ಅತ್ತೆಗೆ ಮಾತ್ರ ಕೊಡುವುದಾಗಿ ಹೇಳುತ್ತಿದ್ದಾರೆ. ಅದೇ ಅತ್ತೆಗೆ 4 ಮಕ್ಕಳಿದ್ದರೆ ಅವರು ಬೇರೆ ಬೇರೆ ಮನೆಯಲ್ಲಿರುತ್ತಾರೆ. ಇದನ್ನು ಗಮನಿಸಿ ಯಾವುದೇ ಶರ್ತವಿಲ್ಲದೆ ಪ್ರತಿ ಕುಟುಂಬದ ಯಜಮಾನಿಗೆ 2 ಸಾವಿರ ಕೊಡಬೇಕು ಎಂದು ಆಗ್ರಹಿಸಿದರು.
ಪದವೀಧರ ನಿರುದ್ಯೋಗಿಗೆ 3 ಸಾವಿರ ಕೊಡುವ ಭರವಸೆ ಕೊಟ್ಟಿದ್ದರು. ಇದೀಗ ಈ ವರ್ಷ ಉತ್ತೀರ್ಣರಾದವರಿಗೆ ಮಾತ್ರ ಎನ್ನುತ್ತಿದ್ದಾರೆ. ಚುನಾವಣೆ ಫಲಿತಾಂಶ ಬಂದ ದಿನ ಎಷ್ಟು ಜನ ನಿರುದ್ಯೋಗಿ ಪದವೀಧರರು, ಡಿಪ್ಲೊಮಾ ಪಡೆದವರು ಇದ್ದರೋ ಅಂದರೆ ಸುಮಾರು 50 ಲಕ್ಷದಿಂದ 60 ಲಕ್ಷ ಯುವಜನರಿಗೆ 3 ಸಾವಿರ ಮತ್ತು ಒಂದೂವರೆ ಸಾವಿರ ಕೊಡಲೇಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಐದರಲ್ಲಿ ಮೂರು ಗ್ಯಾರಂಟಿಗಳನ್ನು ಜಾರಿಗೆ ತರುವುದು ಸಲೀಸು: ಸಿದ್ದರಾಮಯ್ಯ ಸರ್ಕಾರಕ್ಕೆ ಇನ್ನೆರಡು ಗ್ಯಾರಂಟಿ ಸವಾಲು
ಈ ವರ್ಷ ಪಾಸಾದವರಿಗೆ ಅಂತ ನಿಮ್ಮ ಪ್ರಣಾಳಿಕೆಯಲ್ಲಿ ಹೇಳಬೇಕಿತ್ತು; ಹೇಳಿಲ್ಲ ಅಲ್ಲವೇ ಎಂದು ಪ್ರಶ್ನಿಸಿದರು. 10 ಕೆಜಿ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಯಾಕೆ ಕೇಳುತ್ತೀರಿ ಎಂದು ಪ್ರಶ್ನಿಸಿದ ಅವರು, ಮಾರ್ಕೆಟ್‍ನಲ್ಲಿ ಅಕ್ಕಿ ಬೇಕಾದಷ್ಟು ಸಿಗುತ್ತದೆ. ಖರೀದಿಸಿ ನಾಳೆಯಿಂದಲೇ ವಿತರಣೆ ಆರಂಭಿಸಿರಿ. ಉಚಿತ ಬಸ್ ಪ್ರಯಾಣ ಕೊಡುವುದಾಗಿ ಹೇಳಿದ್ದಾರೆ. ಸರಕಾರದ ನಿರ್ಧಾರವನ್ನು ಕಾದು ನೋಡೋಣ. ಉಚಿತಗಳ ಗ್ಯಾರಂಟಿ ಜಾರಿ ಮಾಡದಿದ್ದರೆ ನಾಡಿನ ಜನ ಇವರಿಗೆ ರಸ್ತೆಯಲ್ಲಿ ಓಡಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.