ನೈಸರ್ಗಿಕ ಸಂಪನ್ಮೂಲದ ಮಿತ ಬಳಕೆ ಅಗತ್ಯ; ಪ್ರಕೃತಿ-ಮನುಷ್ಯನ ಜೀವನ ಒಂದಕ್ಕೊಂದು ಹೊಂದಿಕೊಂಡಿದೆ: ಸಿಎಂ ಸಿದ್ದರಾಮಯ್ಯ

ಪೂರ್ವಿಕರಿಗೆ ನಮ್ಮ ಪರಿಸರ ಮತ್ತು ಪ್ರಕೃತಿಯ ಬಗ್ಗೆ ಇದ್ದ ಕಾಳಜಿ ಅನನ್ಯ. ಒಂದು ಮರ ಕಡಿದರೆ ಮತ್ತೊಂದು ಗಿಡ ನೆಡುತ್ತಿದ್ದರು. ಆದರೆ ಈಗ ಕೇವಲ ಮರ ಕಡಿಯುವುದಾಗಿದೆ. ಇದೇ ನಮ್ಮ ಪೂರ್ವಿಕರಿಗೂ ನಮಗೂ ಇರುವ ವ್ಯತ್ಯಾಸ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪೂರ್ವಿಕರಿಗೆ ನಮ್ಮ ಪರಿಸರ ಮತ್ತು ಪ್ರಕೃತಿಯ ಬಗ್ಗೆ ಇದ್ದ ಕಾಳಜಿ ಅನನ್ಯ. ಒಂದು ಮರ ಕಡಿದರೆ ಮತ್ತೊಂದು ಗಿಡ ನೆಡುತ್ತಿದ್ದರು. ಆದರೆ ಈಗ ಕೇವಲ ಮರ ಕಡಿಯುವುದಾಗಿದೆ. ಇದೇ ನಮ್ಮ ಪೂರ್ವಿಕರಿಗೂ ನಮಗೂ ಇರುವ ವ್ಯತ್ಯಾಸ. ಪ್ರಕೃತಿ ಮತ್ತು ಮನುಷ್ಯನ ಜೀವನ ಒಂದಕ್ಕೊಂದು ಹೊಂದಿಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಶ್ವ ಪರಿಸರ ದಿನಾಚರಣೆ 2023 ಉದ್ಘಾಟಿಸಿ  ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಪ್ರಕೃತಿಯ ಜೊತೆಗೆ ಮನುಷ್ಯ ಬದುಕಬೇಕು. ಕಾಡು ಚೆನ್ನಾಗಿದ್ದರೆ ಒಳ್ಳೆಯ ಮಳೆ, ಬೆಳೆಯಾಗಿ ಜೀವನ ಸುಗಮವಾಗುತ್ತದೆ. ನಾವು ಪ್ರಕೃತಿಯನ್ನೂ, ಭೂಮಿತಾಯಿಯನ್ನು ಪ್ರೀತಿಸಬೇಕು. ನಾವು ಅದನ್ನು ನಮ್ಮ ಕರ್ತವ್ಯ ಎಂದು ಭಾವಿಸಬೇಕು. ಪರಿಸರ ಉತ್ತಮವಾಗಿದ್ದರೆ, ಆರೋಗ್ಯಕರ ಜೀವನ ಸಾಧ್ಯ ಎಂದರು.

ಪ್ರಕೃತಿ, ಭೂಮಿ ಆರೋಗ್ಯಕರವಾಗಿದ್ದರೆ ಬದುಕು ಹಸನಾಗುತ್ತದೆ:
ಪರಿಸರದ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ನಮ್ಮ ಪರಿಸರವನ್ನು ಚೊಕ್ಕಟವಾಗಿಡುವಂತಹ ಜಾಗೃತಿ ಎಲ್ಲರಲ್ಲೂ ಮೂಡಬೇಕು.  ಪ್ರಕೃತಿ,, ಭೂಮಿ ಆರೋಗ್ಯಕರವಾಗಿದ್ದರೆ ಮಾತ್ರ ನಮ್ಮ ಬದುಕು ಹಸನಾಗಿರುತ್ತದೆ . ಪ್ರಕೃತಿಯ ವಿಕೋಪಕ್ಕೆ ನಾವು ಒಳಗಾಗುತ್ತಿದ್ದೇವೆ. ಪ್ರಕೃತಿಯಲ್ಲಿ ಅನೇಕ ಬದಲಾವಣೆ ಕಾಣುತ್ತಿದ್ದೇವೆ. ಪ್ರಕೃತಿಯಲ್ಲಾಗುವ ಅನಾಹುತಗಳನ್ನು ತಪ್ಪಿಸಬೇಕಿದೆ ಎಂದರು.

ನೈಸರ್ಗಿಕ ಸಂಪನ್ಮೂಲಗಳ ಹಿತಮಿತ ಬಳಕೆ ಅಗತ್ಯ
2016 ರಲ್ಲಿ  ನಮ್ಮ ಸರ್ಕಾರದ ಅವಧಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇದಿಸಲಾಗಿತ್ತು. ಪ್ಲಾಸ್ಟಿಕ್ ನಿಂದ  ಪ್ರಕೃತಿಗೆ ಹಾನಿಯಾಗುತ್ತದೆ. ಕೈಗಾರಿಕೆ ತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ಬಳಕೆ, ಕಾಡು ಕಡಿಯುವುದು, ನೀರಿನ ಬಳಕೆಯನ್ನು ಪ್ರಕೃತಿಯ ಹಿತದೃಷ್ಟಿಯಿಂದ ಬಳಸುವುದನ್ನು ಕಲಿತರೆ, ನಮಗೆ ಹಾಗೂ ಪ್ರಕೃತಿಗೆ ಒಳಿತು ಎಂದರು. 

ಮುಂದಿನ ಪೀಳಿಗೆಗೆ ಮಾರ್ಗದರ್ಶನ
ಮಕ್ಕಳಲ್ಲಿ ಪ್ರಕೃತಿಯನ್ನು ಕಾಪಾಡುವ ಮನೋಭಾವ ಬಂದರೆ ಅದು ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ. ನಾವು ಮಾಡುವುದನ್ನೇ ಮಕ್ಕಳು ಕಲಿಯುತ್ತಾರೆ. ಎಳೇ ಮನಸ್ಸಿನ ಮೇಲೆ ಒಳ್ಳೆಯದರ ಪರಿಣಾಮವನ್ನು ಉಂಟು ಮಾಡಬೇಕು. ಒಳ್ಳೆಯದನ್ನು ಅನುಸರಿಸಿ ಜೀವನ ನಡೆಸಿದರೆ ಮುಂದಿನ ಪೀಳಿಗೆಗೆ ಅನುಕೂಲ ಹಾಗೂ ಮಾರ್ಗದರ್ಶನವಾಗುತ್ತದೆ ಎಂದರು. 

ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಗೆ ದಕ್ಷಿಣ ವಲಯದಿಂದ ಮಂಜುನಾಥ್ ಹೆಚ್, ಮಲೆನಾಡು ಮತ್ತು ಕರಾವಳಿ ವಲಯದ ಡಾ. ಎಂ.ಡಿ. ಸುಭಾಷ್ ಚಂದ್ರನ್, ಉತ್ತರ ವಲಯದ ಡಾ. ಎಂ.ಆರ್.ದೇಸಾಯಿ ಅವರುಗಳು ಭಾಜನರಾಗಿದ್ದಾರೆ. ಸಂಸ್ಥೆಗಳ ಪೈಕಿ ದಕ್ಷಿಣ ವಲಯದ ಕಿದ್ವಾಯಿ ಮಾರಕ  ಗಂಥಿ ಸಂಸ್ಥೆ,ಬೆಂಗಳೂರು, ಮಲೆನಾಡು ಮತ್ತು ಕರಾವಳಿ ವಲಯದ ಶ್ರೀ ದೇವಿರಮ್ಮ ವನಸಿರಿ ಟ್ರಸ್ಟ್ , ಹಾಸನ ಜಿಲ್ಲೆ, ಉತ್ತರ ವಲಯದ ವನಸಿರಿ ಪ್ರತಿಷ್ಠಾನ, ಸಿಂಧನೂರು ತಾಲ್ಲೂಕು, ರಾಯಚೂರು ಜಿಲ್ಲೆ ಪ್ರಶಸ್ತಿ ಪಡೆದಿವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com