ಬೆಂಗಳೂರಿನಲ್ಲಿ ಗಿಡ ನೆಡಲು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಿ: ಬಿಬಿಎಂಪಿಗೆ ಡಿಕೆ ಶಿವಕುಮಾರ್ ನಿರ್ದೇಶನ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಜ್ಯ ರಾಜಧಾನಿಯಲ್ಲಿ ಗಿಡ ನೆಡುವ ಅಭಿಯಾನಕ್ಕೆ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೋಮವಾರ ಸೂಚಿಸಿದರು.
Published: 05th June 2023 01:55 PM | Last Updated: 05th June 2023 06:54 PM | A+A A-

ಡಿ,ಕೆ ಶಿವಕುಮಾರ್
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಜ್ಯ ರಾಜಧಾನಿಯಲ್ಲಿ ಗಿಡ ನೆಡುವ ಅಭಿಯಾನಕ್ಕೆ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೋಮವಾರ ಸೂಚಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಚೇನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಬೆಂಗಳೂರಿನ ರಸ್ತೆಗಳ ಇಕ್ಕೆಲಗಳಲ್ಲಿ ಮರಗಳಿಲ್ಲದ ಎಷ್ಟು ರಸ್ತೆಗಳಿವೆ ಎಂಬ ವರದಿ ಸಿದ್ಧಪಡಿಸುವಂತೆ ಬಿಬಿಎಂಪಿಗೆ ಸೂಚಿಸಿದರು.
ಸಸಿಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ಸ್ಥಳೀಯ ವಿದ್ಯಾರ್ಥಿಗಳಿಗೆ ನೀಡಬೇಕು. ‘ಬಿಬಿಎಂಪಿ ಅವರಿಗೆ ಗಿಡಗಳು ಮತ್ತು ರಕ್ಷಣೆಯ ಜಾಲರಿಗಳನ್ನು ಒದಗಿಸಬೇಕು. ಸಸಿ ನೆಟ್ಟ ಮಗುವಿನ ಹೆಸರನ್ನು ಅವಕ್ಕೆ ಇಡಬೇಕು ಮತ್ತು ಆ ಮಗು ಸಸಿಯನ್ನು ನೋಡಿಕೊಳ್ಳಬೇಕು’ ಎಂದರು.
ಈ ಕುರಿತು ಶಾಲಾ ಮಕ್ಕಳ ನಡುವೆ ಸ್ಪರ್ಧೆ ಏರ್ಪಡಿಸಿ. ಅವರು ಮರಗಳನ್ನು ನೆಟ್ಟು ಪೋಷಿಸಲು ಸಂತೋಷದಿಂದ ಮುಂದೆ ಬರುತ್ತಾರೆ. ನಾವು ನಮ್ಮ ಮಕ್ಕಳ ಬೆಳವಣಿಗೆಯನ್ನು ಹೇಗೆ ಖಚಿತಪಡಿಸಿಕೊಳ್ಳುತ್ತೇವೆಯೋ ಹಾಗೆಯೇ ಮರಗಳ ಬೆಳವಣಿಗೆಯನ್ನು ನೋಡಿಕೊಳ್ಳಬೇಕು. ನಾನು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿದ್ದೇನೆ. ಇದು ನಾನು ಬಿಬಿಎಂಪಿ ಅಧಿಕಾರಿಗಳಿಗೆ ನೀಡುತ್ತಿರುವ ಮೊದಲ ಕೆಲಸವಾಗಿದೆ. ಒಂದು ತಿಂಗಳಲ್ಲಿ ಈ ಬಗ್ಗೆ ಸ್ಪಷ್ಟ ಯೋಜನೆ ರೂಪಿಸಬೇಕು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಉಳ್ಳವರು ಗ್ಯಾರಂಟಿಗಳನ್ನು ತ್ಯಜಿಸಿ, ಸರ್ಕಾರದ ಹೊರೆಯನ್ನು ಕಡಿಮೆ ಮಾಡಿ: ಸಿಎಂ ಸಿದ್ದರಾಮಯ್ಯ ಮನವಿ
ಮಾನವನ ಜೀವನವು ಪ್ರಕೃತಿಯೊಂದಿಗೆ ಬೆರೆತುಹೋಗಿದೆ. ವಿಶ್ವ ಪರಿಸರ ದಿನಾಚರಣೆಯ ಆಚರಣೆ ಕೇವಲ ಸಾಂಕೇತಿಕವಾಗಿದೆ. ನಾವು ಪ್ರತಿದಿನ ಪ್ರಕೃತಿಯನ್ನು ಸಂರಕ್ಷಿಸಬೇಕು. ಆಗ ಮಾತ್ರ ಪ್ರಕೃತಿಯನ್ನು ಬಲಪಡಿಸಬಹುದು. ತಿಳಿದೋ ತಿಳಿಯದೆಯೋ ಪ್ಲಾಸ್ಟಿಕ್ ಹಸಿರು ಚಾಪೆಗಳನ್ನು ಬಳಸಿ ಪ್ರಕೃತಿಯನ್ನು ಸಂಭ್ರಮಿಸುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಈ ಬಗ್ಗೆ ಶಾಶ್ವತ ಯೋಜನೆ ರೂಪಿಸುವಂತೆ ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಸೂಚಿಸಿದರು.
ಉದ್ಯಾನಗಳಲ್ಲಿ ಅರಣ್ಯವನ್ನು ಅಭಿವೃದ್ಧಿಪಡಿಸಬಾರದು, ಉದ್ಯಾನಗಳು ಉದ್ಯಾನಗಳಂತಿರಲಿ, ಎಲ್ಲಿ ಮರಗಳಿಲ್ಲವೋ ಅಲ್ಲಿ ಅವುಗಳನ್ನು ಬೆಳೆಸಬೇಕು. ಬೆಂಗಳೂರು ಹಸಿರಿಗೆ ಹೆಸರುವಾಸಿಯಾಗಿದೆ ಮತ್ತು ಈ ನಗರದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸಲು ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಯೋಜನೆ ರೂಪಿಸಬೇಕು ಎಂದು ಶಿವಕುಮಾರ್ ಹೇಳಿದರು.