ಗೋಹತ್ಯೆ ಕುರಿತು ಪಶುಸಂಗೋಪನಾ ಸಚಿವರ ಹೇಳಿಕೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಖಂಡನೆ

ಎಮ್ಮೆ, ಕೋಣಗಳನ್ನು ಕಡಿಯಬಹುದಾದರೆ, ಹಸುವನ್ನು ಏಕೆ ಕಡಿಯಬಾರದು ಎಂಬ ಪಶುಸಂಗೋಪನಾ ಸಚಿವ ಕೆ ವೆಂಕಟೇಶ್ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ ಭಾನುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ಎಮ್ಮೆ, ಕೋಣಗಳನ್ನು ಕಡಿಯಬಹುದಾದರೆ, ಹಸುವನ್ನು ಏಕೆ ಕಡಿಯಬಾರದು ಎಂಬ ಪಶುಸಂಗೋಪನಾ ಸಚಿವ ಕೆ ವೆಂಕಟೇಶ್ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ ಭಾನುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಹೇಳಿಕೆಯನ್ನು ಖಂಡಿಸಿರುವ ಬೊಮ್ಮಾಯಿ, ಭಾರತೀಯರು ಹಸುಗಳೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಹೊಂದಿದ್ದಾರೆ ಮತ್ತು ಅವುಗಳನ್ನು ತಾಯಿಯಂತೆ ಪೂಜಿಸುತ್ತಾರೆ ಎಂದು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ಗೋವುಗಳನ್ನು ಏಕೆ ಕಡಿಯಬಾರದು ಎಂದು ಪ್ರಶ್ನಿಸಿರುವ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರ ಹೇಳಿಕೆ ಆಶ್ಚರ್ಯ ತಂದಿದ್ದು, ಅವರ ಹೇಳಿಕೆ ಖಂಡನೀಯ. ಭಾರತೀಯರಾದ ನಾವು ಗೋವಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದು, ತಾಯಿ ಸ್ಥಾನದಲ್ಲಿ ಗೋವನ್ನು ಪೂಜಿಸುತ್ತೇವೆ ಎಂದು ಬೊಮ್ಮಾಯಿ ಹೇಳಿದರು.

ಸಚಿವ ಕೆ. ವೆಂಕಟೇಶ್ ಅವರು ಯಾರ ಓಲೈಕೆಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ತಮಗೆ ನೀಡಿರುವ ಖಾತೆಯನ್ನು ಬದಲಾಯಿಸಲಿ ಎಂದೋ ಅಥವಾ ಹೈಕಮಾಂಡ್ ಅನ್ನು ಮೆಚ್ಚಿಸಲು ಈ ಹೇಳಿಕೆ ನೀಡಿದ್ದಾರೆಯೇ? ಎಂದರು.

ಗೋಹತ್ಯೆ ನಿಷೇಧವನ್ನು ಪ್ರಥಮವಾಗಿ ಪ್ರತಿಪಾದಿಸಿದ್ದು ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರು. ಪೂಜ್ಯ ಮಹಾತ್ಮಾ ಗಾಂಧಿ ಪ್ರತಿಪಾದಿಸಿದ ಗೋಹತ್ಯೆ ನಿಷೇಧಕ್ಕಾಗಿ 1960ರ ದಶಕದಲ್ಲಿ ಹಲವಾರು ರಾಜ್ಯಗಳಲ್ಲಿ ಕಾನೂನನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದ್ದಾರೆ. 

ಸಚಿವರ ಈ ರೀತಿಯ ಹೇಳಿಕೆಯಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋವುಗಳ ಕಳ್ಳ ಸಾಗಣೆ, ಸಾಮೂಹಿಕ ಗೋಹತ್ಯೆ ಮಾಡುವ ಕಾರ್ಖಾನೆಗಳು ತಲೆ ಎತ್ತಲಿವೆ. ನಮ್ಮ ಸರ್ಕಾರದ ಅವಧಿಯಲ್ಲಿ ಕಾನೂನು ಬಾಹಿರ ಕಸಾಯಿ ಖಾನೆಗಳನ್ನು ತಡೆಗಟ್ಟಲು ಕಾನೂನು ತರಲಾಗಿದೆ.  ಕರ್ನಾಟಕದಲ್ಲಿ ಹೊಸ ಕಾಯಿದೆ ತಂದಿಲ್ಲ. ಇರುವ ಕಾನೂನಿಗೆ ಬಲ ತುಂಬಿದ್ದೇವೆ‌ ಎಂದು ಸ್ಪಷ್ಟಪಡಿಸಿದರು.

ಇಂತಹ ಹೇಳಿಕೆ ನೀಡುವ ಮುನ್ನ ಎರಡು ಬಾರಿ ಯೋಚಿಸಿ ಎಂದು ವೆಂಕಟೇಶ್ ಅವರಿಗೆ ಸೂಚಿಸಿದ ಬೊಮ್ಮಾಯಿ, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಹೋದ್ಯೋಗಿಗೆ ಸೂಕ್ತ ಸಲಹೆ ನೀಡಬೇಕು ಎಂದು ಮನವಿ ಮಾಡಿದರು.
ಈ ರೀತಿಯ ಹೇಳಿಕೆ ನೀಡುವ ಮೊದಲು ಸಚಿವರು ಆಲೋಚನೆ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗೆ ಸೂಕ್ತ ಸಲಹೆ ನೀಡಬೇಕು ಎಂದು ತಿಳಿಸಿದ್ದಾರೆ.

ಪಶುಸಂಗೋಪನಾ ಖಾತೆ ಸಚಿವ ಕೆ. ವೆಂಕಟೇಶ್ ಅವರು, ಎಮ್ಮೆ, ಕೋಣಗಳನ್ನು ಕಡಿಯಬಹುದಾದರೇ ಹಸುಗಳನ್ನು ಏಕೆ ಕಡಿಯಬಾರದು ಎಂದು ಪ್ರಶ್ನಿಸಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದು ಶನಿವಾರ ತಿಳಿಸಿದರು.

ಈ ಬಗ್ಗೆ ನಾವಿನ್ನೂ ನಿರ್ಧರಿಸಿಲ್ಲ. ಹಿಂದಿನ ಬಿಜೆಪಿ ಸರ್ಕಾರವು ಎಮ್ಮೆ ಮತ್ತು ಕೋಣಗಳ ಹತ್ಯೆಗೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಗೋಹತ್ಯೆ ಮಾಡಬಾರದು ಎಂದು ಕಾನೂನನ್ನು ತಂದಿತ್ತು. ನಾವು ಚರ್ಚಿಸಿ ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದು ವೆಂಕಟೇಶ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ವಯಸ್ಸಾದ ಹಸುಗಳ ನಿರ್ವಹಣೆಯಲ್ಲಿ ರೈತರು ಎದುರಿಸುತ್ತಿರುವ ತೊಂದರೆಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸತ್ತ ಹಸುವನ್ನು ಹೂಳಲು ಮಣ್ಣು ತೆಗೆಯುವ ಯಂತ್ರವನ್ನು ಬಳಸಿಕೊಳ್ಳಬೇಕಾದ ಉದಾಹರಣೆಯನ್ನು ಹಂಚಿಕೊಂಡರು.

ಬೊಮ್ಮಾಯಿ, ಮೈಸೂರು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಬಿಜೆಪಿ ಮುಖಂಡರು ಸಚಿವರ ಹೇಳಿಕೆಯನ್ನು ಖಂಡಿಸಿದರು.

2021ರಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದ ಕರ್ನಾಟಕ ಗೋಹತ್ಯೆ ತಡೆ ಮತ್ತು ಸಂರಕ್ಷಣೆ ಕಾಯ್ದೆ ರಾಜ್ಯದಲ್ಲಿ ಜಾನುವಾರು ಹತ್ಯೆಯ ಮೇಲೆ ಸಂಪೂರ್ಣ ನಿಷೇಧ ಹೇರಿದೆ.

ಮಾರಣಾಂತಿಕವಾಗಿ ಅನಾರೋಗ್ಯಕ್ಕೆ ಒಳಗಾಗಿರುವ ದನ ಮತ್ತು 13 ವರ್ಷ ಮೇಲ್ಪಟ್ಟ ಎಮ್ಮೆಗಳನ್ನು ಮಾತ್ರ ವಧೆ ಮಾಡಲು ಅನುಮತಿಸಲಾಗಿದೆ. ಆಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಈ ಕಾಯ್ದೆಯನ್ನು ವಿರೋಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com