ಸಮುದ್ರದಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೊರತೆಗೆಯಲು ಕರ್ನಾಟಕದ ಮೊದಲ ಕ್ರಮಗಳು ಹೀಗಿವೆ....
ಕರ್ನಾಟಕ ತನ್ನ ಕರಾವಳಿ ಪ್ರದೇಶದಾದ್ಯಂತ ಸಮುದ್ರದಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೊರತೆಗೆಯುವುದಕ್ಕಾಗಿ ಮೊದಲ ಕ್ರಮಗಳನ್ನು ಕೈಗೊಂಡಿದೆ. ಆದರೆ ಥರ್ಮಾಕೋಲ್ ತ್ಯಾಜ್ಯ ನಿರ್ವಹಣೆಯೇ ಅದಕ್ಕೆ ಸವಾಲಾಗಿ ಪರಿಣಮಿಸಿದೆ.
Published: 05th June 2023 02:05 PM | Last Updated: 05th June 2023 06:54 PM | A+A A-

ಸಮುದ್ರದ ದಡದಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ
ಬೆಂಗಳೂರು: ಕರ್ನಾಟಕ ತನ್ನ ಕರಾವಳಿ ಪ್ರದೇಶದಾದ್ಯಂತ ಸಮುದ್ರದಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೊರತೆಗೆಯುವುದಕ್ಕಾಗಿ ಮೊದಲ ಕ್ರಮಗಳನ್ನು ಕೈಗೊಂಡಿದೆ. ಆದರೆ ಥರ್ಮಾಕೋಲ್ ತ್ಯಾಜ್ಯ ನಿರ್ವಹಣೆಯೇ ಅದಕ್ಕೆ ಸವಾಲಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ತಕ್ಷಣವೇ ಥರ್ಮಾಕೋಲ್ ನ್ನು ನಿಷೇಧಿಸಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧಿಕಾರಿಗಳು ಮತ್ತು ಸಾಗರ ತಜ್ಞರು ಹೇಳಿದ್ದಾರೆ.
2016 ರಲ್ಲಿ ಜಾರಿಗೆ ಬಂದಿದ್ದ ಪ್ಲಾಸ್ಟಿಕ್ ನಿಷೇಧ ನಿಯಮ ಮತ್ತು 2022 ರಲ್ಲಿ ಅವುಗಳ ತಿದ್ದುಪಡಿಯಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ನ್ನು ನಿಷೇಧಿಸುವ ಮೂಲಕ ಹೆಚ್ಚು ಕಠಿಣ ನಿಯಮಗಳನ್ನು ಜಾರಿಗೆ ತರಲಾಯಿತು ಆದರೂ, ಪ್ಲಾಸ್ಟಿಕ್ ನ ಬಳಕೆ ಇನ್ನೂ ಹೇರಳವಾಗಿ ಕಂಡುಬರುತ್ತದೆ. ಪ್ಯಾಕಿಂಗ್, ಸಂಸ್ಕರಣೆ ಮತ್ತು ಸಾರಿಗೆಯಲ್ಲಿ ಥರ್ಮಾಕೋಲ್ ಬಳಕೆಯನ್ನು ನಿಲ್ಲಿಸಲು ಈಗ ಸರಿಯಾದ ಸಮಯ. ಸಮುದ್ರ ಪ್ರದೇಶದಲ್ಲಿ ಥರ್ಮಾಕೋಲ್ ನ್ನು ಸಂಗ್ರಹಿಸುವುದು ಅತ್ಯಂತ ಸವಾಲಿನ ಮತ್ತು ನಿಧಾನಗತಿಯ ಚಟುವಟಿಕೆಯಾಗಿದೆ ಮತ್ತು ಅನೇಕ ಬಾರಿ ಈ ತ್ಯಾಜ್ಯ ಮರುಬಳಕೆಗೂ ಸಹ ಸಾಧ್ಯವಾಗುವುದಿಲ್ಲ, ಇದು ಮುಂದುವರೆದು ಜನರ ರಕ್ತಕ್ಕೆ ಸೇರುವ ಮೈಕ್ರೋಪ್ಲಾಸ್ಟಿಕ್ ತ್ಯಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪ್ಲಾಸ್ಟಿಕ್ ಮಾದರಿಯ ಚರ್ಮ ಹೊಂದಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ: ಶಿಶುವಿಗೆ ಅಪರೂಪದ ಕಾಯಿಲೆ!
ಪರಿಸರ ರಕ್ಷಣೆಯಲ್ಲಿ ಹಾಗೂ ವನ್ಯ ಜೀವಿ ಸಂಕುಲದ ಏರಿಕೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಈಗ ಕರಾವಳಿ ಪ್ರದೇಶದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಿರುವ ಮೊದಲ ರಾಜ್ಯವಾಗಿದ್ದು, ಇದಕ್ಕಾಗಿ ಕೆ-ಶೋರ್ (Karnataka - Surface Sustainable Harvest of Ocean Resources) ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು, ಇದನ್ನು ನೀಲಿ-ಪ್ಲಾಸ್ಟಿಕ್ ಯೋಜನೆ ಎಂದೂ ಹೇಳಲಾಗುತ್ತದೆ. ರಾಜ್ಯದ ಪರಿಸರ ಮತ್ತು ಅರಣ್ಯ ಇಲಾಖೆಗಳು ಅರಬ್ಬಿ ಸಮುದ್ರದಿಂದ ಪ್ಲಾಸ್ಟಿಕ್ ತೆರವುಗೊಳಿಸಲು 5 ವರ್ಷಗಳ ಉಪಕ್ರಮವನ್ನು ಕೈಗೊಂಡಿವೆ.
ಈ ಯೋಜನೆ ತೇಲುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಮಾತ್ರವಲ್ಲದೆ ಪ್ಲಾಸ್ಟಿಕ್ ಗೆ ಸಂಬಂಧಿಸಿದ ಎಲ್ಲಾ ತ್ಯಾಜ್ಯವನ್ನೂ ತೆರವುಗೊಳಿಸುತ್ತಿದೆ. ಜಲಚರಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಮೈಕ್ರೋಪ್ಲಾಸ್ಟಿಕ್ ಸಮಸ್ಯೆಯನ್ನು ಪರಿಹರಿಸಲು ಇದು ಸಹಾಯ ಮಾಡುತ್ತದೆ. ಈ ಕಾರ್ಯಕ್ರಮ ನದಿಮುಖಗಳು, ಮ್ಯಾಂಗ್ರೋವ್‌ಗಳು, ಕರಾವಳಿ ತೋಟಗಳು ಮತ್ತು ಅರಣ್ಯ ರಕ್ಷಣೆಯನ್ನು ಒಳಗೊಂಡಿದೆ.
ಇದನ್ನೂ ಓದಿ: ಪ್ಲಾಸ್ಟಿಕ್ ಬಾಟಲಿ ಮರುಬಕೆಯಿಂದ ತಯಾರಿಸಲಾದ ಜಾಕೆಟ್ ಧರಿಸಿ ಸಂಸತ್ತಿಗೆ ಬಂದ ಪ್ರಧಾನಿ ಮೋದಿ!
ಕರ್ನಾಟಕ ಮೀನುಗಾರಿಕೆ ಇಲಾಖೆಯ ಪ್ರಕಾರ, ಮಾರ್ಚ್ 2023 ರವರೆಗೆ, 12.25 ಲಕ್ಷ ಮೆಟ್ರಿಕ್ ಟನ್ ಸಮುದ್ರ ಮತ್ತು ಒಳನಾಡು ಮೀನುಗಳನ್ನು ಹಿಡಿಯಲಾಗಿದೆ, ಅದರಲ್ಲಿ 7.3 ಲಕ್ಷ ಮೆಟ್ರಿಕ್ ಟನ್ ಸಮುದ್ರ ಮೀನು. ಜಲಚರಗಳ ದೇಹದಲ್ಲಿ ಮೈಕ್ರೋಪ್ಲಾಸ್ಟಿಕ್ ಇರುವಿಕೆಯನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ಈ ಕುರಿತು ಇಲ್ಲಿಯವರೆಗೆ ಯಾವುದೇ ಅಧ್ಯಯನಗಳೂ ನಡೆದಿಲ್ಲ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಮೀನುಗಾರರು ಪ್ಲಾಸ್ಟಿಕ್ ಮೀನುಗಾರಿಕೆ ಬಲೆಗಳನ್ನು ಬಳಸುವುದನ್ನು ಅಥವಾ ತಮ್ಮ ಉತ್ಪನ್ನಗಳನ್ನು ಪ್ಯಾಕ್ ಮಾಡಲು ಮತ್ತು ಸಂಗ್ರಹಿಸಲು ಬಳಸುವ ಪ್ಲಾಸ್ಟಿಕ್ ಮತ್ತು ಥರ್ಮಾಕೋಲ್ ನ್ನು ನಾವು ನಿಷೇಧಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏನಿದು ಕೆ-ಶೋರ್ (K-SHORE)?
ಯೋಜನೆಯಡಿಯಲ್ಲಿ, ಕರ್ನಾಟಕ ಅರಣ್ಯ ಮತ್ತು ಪರಿಸರ ಇಲಾಖೆಯ ನೇತೃತ್ವದ ರಾಜ್ಯ ಸರ್ಕಾರದ ಇಲಾಖೆಗಳು ಸಮುದ್ರದಲ್ಲಿನ ಪ್ಲಾಸ್ಟಿಕ್‌ನ ಪ್ರಮಾಣ ಮತ್ತು ಗುಣಮಟ್ಟವನ್ನು ಅಧ್ಯಯನ ಮಾಡುತ್ತದೆ ಮತ್ತು ಅದನ್ನು ತೆರವುಗೊಳಿಸುತ್ತದೆ.
ವಿಶ್ವಬ್ಯಾಂಕ್‌ನ ಬೆಂಬಲದೊಂದಿಗೆ ಈ ಯೋಜನೆಯನ್ನು 5 ವರ್ಷಗಳ ಕಾಲ ಕೈಗೆತ್ತಿಕೊಳ್ಳಲಾಗಿದೆ. ಈ ಉಪಕ್ರಮಕ್ಕಾಗಿ ವಿಶ್ವಬ್ಯಾಂಕ್ 840 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಪುರಸಭೆ ಆಡಳಿತಗಳು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪ್ರವಾಸೋದ್ಯಮ ಮತ್ತು ಮೀನುಗಾರಿಕೆ ಇಲಾಖೆಗಳು, ನಗರ ನಿಗಮಗಳು, ಕರ್ನಾಟಕ ಜೀವವೈವಿಧ್ಯ ಮಂಡಳಿ ಮತ್ತು ತಜ್ಞರಂತಹ ಇತರ ಪಾಲುದಾರರನ್ನು ಒಳಗೊಳ್ಳುವ ಮೂಲಕ ಯೋಜನೆಯನ್ನು ಕಾರ್ಯಗತಗೊಳಿಸಲು ಅರಣ್ಯ ಇಲಾಖೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದೆ.