ಸರ್ಕಾರಿ ನೌಕರಿಯಲ್ಲಿರುವ ಸಿಂಗಲ್ ಪುರುಷ ಪೋಷಕರಿಗೂ ಆರು ತಿಂಗಳ ಮಗು ಆರೈಕೆ ರಜೆ ಸೌಲಭ್ಯ
ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಒಂಟಿ ಪುರುಷ ಪೋಷಕರಿಗೆ(Single male parent) ಇನ್ನು ಮುಂದೆ ಆರು ತಿಂಗಳವರೆಗೆ ಶಿಶುಪಾಲನಾ ರಜೆ ಸಿಗಲಿದೆ.
Published: 10th June 2023 01:35 PM | Last Updated: 10th June 2023 02:30 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಒಂಟಿ ಪುರುಷ ಪೋಷಕರಿಗೆ(Single male parent) ಇನ್ನು ಮುಂದೆ ಆರು ತಿಂಗಳವರೆಗೆ ಶಿಶುಪಾಲನಾ ರಜೆ ಸಿಗಲಿದೆ.
ನಿನ್ನೆ ಶುಕ್ರವಾರ ಹೊರಡಿಸಲಾದ ಸರ್ಕಾರಿ ಆದೇಶದ ಪ್ರಕಾರ, ವಿಧುರರು, ವಿಚ್ಛೇದನ ಪಡೆದವರು ಅಥವಾ ಅವಿವಾಹಿತ ಪುರುಷರಿದ್ದು ಮಗು ಪಡೆದುಕೊಂಡವರು ಈ ಸೌಲಭ್ಯವನ್ನು ಪಡೆಯಬಹುದು.
ಕರ್ನಾಟಕ ಇಂತಹ ಸೌಲಭ್ಯವನ್ನು ಪರಿಚಯಿಸುತ್ತಿರುವುದು ಇದೇ ಮೊದಲು. ಕರ್ನಾಟಕದಲ್ಲಿ ಸರ್ಕಾರಿ ನೌಕರರು 180 ದಿನಗಳ ಹೆರಿಗೆ ರಜೆ ಮತ್ತು 15 ದಿನಗಳ ಪಿತೃತ್ವ ರಜೆಗೆ ಅರ್ಹರಾಗಿರುತ್ತಾರೆ.
ಪ್ರಸ್ತುತ, 2021 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪರಿಚಯಿಸಿದ ಶಿಶುಪಾಲನಾ ರಜೆಗೆ (ಹೆರಿಗೆ ರಜೆ ಹೊರತುಪಡಿಸಿ) ಮಹಿಳಾ ಉದ್ಯೋಗಿಗಳು ಮಾತ್ರ ಅರ್ಹರಾಗಿದ್ದರು. ಅಲ್ಲಿ ಮಹಿಳಾ ಉದ್ಯೋಗಿಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ನೋಡಿಕೊಳ್ಳಲು ಆರು ತಿಂಗಳವರೆಗೆ ರಜೆ ತೆಗೆದುಕೊಳ್ಳಬಹುದಾಗಿತ್ತು.
ಕರ್ನಾಟಕ ನಾಗರಿಕ ಸೇವಾ ನಿಯಮಗಳ ಉಪ ನಿಯಮ 18 (D) (1) ರಂತೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿರುವ ಸೇವೆಯ ಮಹಿಳಾ ಸದಸ್ಯರಿಗೆ ಸಕ್ಷಮ ಪ್ರಾಧಿಕಾರದಿಂದ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಬಹುದು.
ಆದೇಶದ ಪ್ರಕಾರ, ಹಲವಾರು ಇಲಾಖೆಗಳು ಒಂಟಿ ಪುರುಷ ಪೋಷಕರಿಂದ (ಅವಿವಾಹಿತರು, ವಿಚ್ಛೇದಿತರು ಅಥವಾ ವಿಧುರರು) ಶಿಶುಪಾಲನಾ ರಜೆಗಾಗಿ ಹಲವು ವಿನಂತಿಗಳು ಬಂದಿದ್ದವು. ಈ ವಿನಂತಿಗಳು ಮಾನ್ಯವಾಗಿರುವಂತೆ ತೋರುತ್ತಿರುವುದರಿಂದ ಈಗ ಪುರುಷ ಉದ್ಯೋಗಿಗಳಿಗೆ ಸೌಲಭ್ಯವನ್ನು ವಿಸ್ತರಿಸಲಾಗುತ್ತಿದೆ.
ಪುರುಷ ಉದ್ಯೋಗಿಗಳು ಮಗುವನ್ನು ಆರೈಕೆ ಮಾಡಲು ಆರು ತಿಂಗಳವರೆಗೆ ರಜೆ ತೆಗೆದುಕೊಳ್ಳಬಹುದು. ಅದನ್ನು 180 ದಿನಗಳಿಗಿಂತ ಹೆಚ್ಚು ವಿಸ್ತರಿಸಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮಹಿಳಾ ಸಿಂಗಲ್ ಪೇರೆಂಟ್ ಪೋಷಕರಿಗೆ ಘೋಷಿಸಲಾದ ಮಾರ್ಗಸೂಚಿಗಳು ಪುರುಷರಿಗೆ ಕೂಡ ಅನ್ವಯವಾಗುತ್ತದೆ.
ಶಿಶುಪಾಲನಾ ರಜೆಯ ಅವಧಿಯಲ್ಲಿ ಸಿಂಗಲ್ ಪೇರೆಂಟ್ ಪುರುಷರು ವಿವಾಹವಾದರೆ, ಸೌಲಭ್ಯವನ್ನು ತಕ್ಷಣವೇ ಜಾರಿಗೆ ಬರುವಂತೆ (ಅವರ ಮದುವೆಯ ದಿನಾಂಕದಿಂದ) ರದ್ದುಗೊಳಿಸಲಾಗುವುದು ಎಂದು ಸರ್ಕಾರದ ಆದೇಶ ಹೇಳುತ್ತದೆ. ಈ ಸೌಲಭ್ಯವನ್ನು ಸೇರಿಸಲು ಕರ್ನಾಟಕ ನಾಗರಿಕ ಸೇವಾ ನಿಯಮಗಳಿಗೆ ಶೀಘ್ರದಲ್ಲೇ ತಿದ್ದುಪಡಿ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.