'ಧಮ್ಮಿದ್ರೆ, ತಾಕತ್ತಿದ್ರೆ ಎಲ್ಲಾ ಕಡೆಯಿಂದ ಸಂಗ್ರಹಣೆ ಮಾಡಿ 15 ಕೆಜಿ ಅಕ್ಕಿ ಕೊಡಿ': ಬಿಜೆಪಿ ಪ್ರತಿಭಟನೆ, ಪೊಲೀಸರ ವಶ
ಬೆಂಗಳೂರು: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ಕೊಡಲು ನಿರಾಕರಿಸಿರುವ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಒಂದು ಕಡೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಭಾರೀ ಮಳೆಯ ನಡುವೆ ಪ್ರತಿಭಟನೆ ನಡೆಯಿತು.
ಮತ್ತೊಂದೆಡೆ ಕಾಂಗ್ರೆಸ್ ಜನತೆಗೆ ನೀಡಿದ್ದ ಭರವಸೆಯಂತೆ 10 ಕೆ.ಜಿ ಅಕ್ಕಿ ವಿತರಿಸಬೇಕೆಂದು ಆಗ್ರಹಿಸಿ ಬೆಂಗಳೂರು ಸೇರಿ 10 ವಿಭಾಗ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ಮಾಡಲು ಆರಂಭಿಸಿದ ತಕ್ಷಣವೇ ಪೊಲೀಸರು ಅವರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆರ್ ಅಶೋಕ್, ಎನ್ ರವಿಕುಮಾರ್ ಸೇರಿ ಅನೇಕರು ಪ್ರತಿಭಟನೆ ಆರಂಭಿಸಿದರೂ ಕೂಡ ಪೊಲೀಸರು ಅವಕಾಶ ನೀಡಲು ನಿರಾಕರಿಸಿದರು. ಈ ವೇಳೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಇದೊಂದು ಸುಳ್ಳ-ಮಳ್ಳ ಸರ್ಕಾರ. ಸುಳ್ಳು ಹೇಳುವುದು ಮಳ್ಳನ ತರಹ ಮೋಸ ಮಾಡುವುದು. ನಾವು 10 ಕೆ ಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಇಂದು ಒಂದು ಕೆಜಿ ಕೂಡ ಕೊಡೋಕೆ ಇವರಿಂದ ಆಗುತ್ತಾ ಇಲ್ಲ. ಈಗ 5 ಕೆ ಜಿ ಅಕ್ಕಿ ಕೊಡುತ್ತಿರುವುದು ಕೇಂದ್ರ ಸರ್ಕಾರದಿಂದ. ಸುಳ್ಳು ಹೇಳುವ ಕಾಂಗ್ರೆಸ್ ಸರ್ಕಾರದಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ.
ತಾತ್ವಿಕ ಒಪ್ಪಿಗೆ ಕೊಡುವಾಗಲೇ ಅಕ್ಕಿ ಇರಲಿಲ್ಲ. ನಿಮಗೆ ಗ್ಯಾರಂಟಿ ಕೊಡುವಾಗ ಗೊತ್ತಿರಲಿಲ್ಲವಾ? ನಿಮಗೆ ನಿಜವಾಗಿಯೂ ಧಮ್, ತಾಕತ್ ಇದ್ರೆ ಎಲ್ಲ ಕಡೆಯಿಂದ ಅಕ್ಕಿ ಶೇಖರಣೆ ಮಾಡಿ ಒಬ್ಬರಿಗೆ 15 ಕೆಜಿಯಂತೆ ಅಕ್ಕಿ ಕೊಡಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಮಾಜಿ ಸಚಿವ ಆರ್ ಅಶೋಕ್ ಮಾತನಾಡಿ, ಕಾಂಗ್ರೆಸ್ ನಾಯಕರೇ ನಿಮಗೆ ಮಾನ ಮರ್ಯಾದೆ ಇದೆಯೇ,ಢೋಂಗಿ ರಾಜಕಾರಣ ಮಾಡುತ್ತೀರಾ, ಅಕ್ಕಿ ಕೊಡುವುದನ್ನು ಮುಂದೆ ಹಾಕಿದರೆ ದುಡ್ಡು ಉಳಿಸಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಪೊಲೀಸರು ಪ್ರತಿಭಟನೆಗೆ ಮುಂದಾದ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಇವರದ್ದು ಗೂಂಡಾ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ