ವಾಸ್ತು ನಂಬಿಕೆಗೆ ಡೋಂಟ್ ಕೇರ್ ಎಂದ ಸಿದ್ದರಾಮಯ್ಯ ನಡೆಗೆ ಮೆಚ್ಚುಗೆ ಸೂಚಿಸಿದ 'ಮೇಷ್ಟ್ರು', ನೆಟ್ಟಿಗರು ಕಿಡಿ

ಇದೀಗ ಇಂತದ್ದೇ ವಿಚಾರಕ್ಕೆ ಸಿದ್ದರಾಮಯ್ಯ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಾಸ್ತುವಿನ ಕಾರಣದಿಂದ ಹಲವು ವರ್ಷಗಳಿಂದ ಮುಚ್ಚಿದ್ದ ವಿಧಾನಸೌಧದ ಸಿಎಂ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಸಿದ್ದರಾಮಯ್ಯ ಅವರ ಈ ನಡೆಗೆ ಸಾಹಿತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ನಾಗತಿಹಳ್ಳಿ ಚಂದ್ರಶೇಖರ್
ನಾಗತಿಹಳ್ಳಿ ಚಂದ್ರಶೇಖರ್
Updated on

ಬೆಂಗಳೂರು: ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿರುವ ಸಿದ್ದರಾಮಯ್ಯವರು ತಮ್ಮ ನೇರ ನಡೆ-ನುಡಿಗೆ ಹೆಸರಾದವರು. ಮೊದಲಿನಿಂದಲೂ ಮೌಢ್ಯಗಳನ್ನು ವಿರೋಧಿಸುತ್ತಲೇ ಬಂದವರು. ಅದೇ ಕಾರಣಕ್ಕೆ ಹಲವರಿಗೆ ಸಿದ್ದರಾಮಯ್ಯ ಎಂದರೆ ಎಲ್ಲಿಲ್ಲದ ಅಭಿಮಾನ. ಇನ್ನೂ ಕೆಲವರಿಗೆ ಸಿದ್ದರಾಮಯ್ಯನವರ ಈ ನಡೆಯೇ ಅವರಿಗೆ ವಿರೋಧಿಗಳನ್ನು ಹುಟ್ಟುಹಾಕಿದ್ದುಂಟು. ಅದೇನೇ ಆದರೂ ಸಿದ್ದು ಮಾತ್ರ ತಮನನಿಸಿದ್ದನ್ನೇ ಮಾಡುವವರು. 

ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬುದು ನಡೆದುಕೊಂಡು ಬಂದಿತ್ತು. ಆದರೆ, ಇದಕ್ಕೆ ತಿಲಾಂಜಲಿ ಹಾಡಿದ್ದು ಇದೇ ಸಿದ್ದರಾಮಯ್ಯ. ಮೊದಲನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದ ವೇಳೆ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡುವ ಮೂಲಕ ಈ ಮೌಢ್ಯಕ್ಕೆ ತಿಲಾಂಜಲಿ ಹಾಡಿದ್ದರು.

ಇದೀಗ ಇಂತದ್ದೇ ವಿಚಾರಕ್ಕೆ ಸಿದ್ದರಾಮಯ್ಯ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಾಸ್ತುವಿನ ಕಾರಣದಿಂದ ಹಲವು ವರ್ಷಗಳಿಂದ ಮುಚ್ಚಿದ್ದ ವಿಧಾನಸೌಧದ ಸಿಎಂ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. 

ಶನಿವಾರ (ಜೂನ್ 24) ವಿಧಾನಸೌಧಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ಬಾಗಿಲು ಮುಚ್ಚಿರುವುದನ್ನು ಕಂಡು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ವಾಸ್ತು ಸರಿಯಿಲ್ಲದ ಕಾರಣ ಬಾಗಿಲು ಮುಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ತಕ್ಷಣವೇ ಆ ಬಾಗಿಲು ತೆರೆಯುವಂತೆ ಸೂಚನೆ ನೀಡಿದ್ದಾರೆ. ಬಾಗಿಲು ತೆರೆದ ಬಳಿಕ ಅದೇ ಬಾಗಿಲ ಮೂಲಕವೇ ಸಿಎಂ ಕಚೇರಿಗೆ ಪ್ರವೇಶಿಸಿದ್ದಾರೆ.

ಬಳಿಕ ಟ್ವೀಟ್ ಮಾಡಿರುವ ಅವರು, ಜನರ ಬಗ್ಗೆ ಕಾಳಜಿ, ನಡತೆಯಲ್ಲಿ ಪ್ರಾಮಾಣಿಕತೆ, ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ದಿಕ್ಕು, ಘಳಿಗೆ, ಮುಹೂರ್ತ ಎಲ್ಲವೂ ನಗಣ್ಯ. ವಾಸ್ತುದೋಷದ ಕಾರಣಕ್ಕಾಗಿ ಕಳೆದ ಐದು ವರ್ಷಗಳಿಂದ ಮುಚ್ಚಲಾಗಿದ್ದ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ, ಅದೇ ಬಾಗಿಲಿನಿಂದ ಕಚೇರಿ ಪ್ರವೇಶ ಮಾಡಿದೆ. ಕೊಠಡಿಯೊಳಗೆ ಒಳ್ಳೆಯ ಗಾಳಿ, ಬೆಳಕು ಬರುವಂತಿದ್ದರೆ ಅದಕ್ಕಿಂತ ಉತ್ತಮ ವಾಸ್ತು ಬೇರಿಲ್ಲ. ನಡೆ-ನುಡಿ ಶುದ್ಧವಿದ್ದರೆ ಮತ್ತೆಲ್ಲವೂ ಶುಭದಾಯಕವಾಗಿರಲಿದೆ. ಜನತೆಯ ಆಶೀರ್ವಾದ ಇರಲಿ ಎಂದು ಬರೆದಿದ್ದಾರೆ.

ಸಿದ್ದರಾಮಯ್ಯ ಅವರ ಈ ನಡೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಹಿತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಇದೊಂದು ಸಣ್ಣ ಘಟನೆ ಎಂದು ಪರಿಗಣಿಸಬಾರದು. ಜನ ತಮ್ಮ ಖಾಸಗಿ ನಂಬಿಕೆಗಳನ್ನು ಅವರ ಮನೆಯೊಳಗೆ ಹೇಗಾದರೂ ಆಚರಿಸಿಕೊಳ್ಳಲಿ. ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ವಾಸ್ತು ವಿರೋಧಿ ನಡೆ ಅವರೆಲ್ಲ ಮಂತ್ರಿಗಳಿಗೂ, ಅಧಿಕಾರಿಗಳಿಗೂ ಮತ್ತು ಸರ್ಕಾರೀ ಕಚೇರಿಗಳಿಗೂ ಮಾದರಿಯಾಗಲಿ. ಒಳ್ಳೆಯ ಗಾಳಿ, ಬೆಳಕು ಮತ್ತು ಹೃದಯ ನಿಜವಾದ ವಾಸ್ತು. ವಿಜ್ಞಾನದ ಎಲ್ಲ ಬಾಗಿಲುಗಳೂ ತೆರೆಯಲಿ' ಎಂದಿದ್ದಾರೆ.

ಇನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರ ಟ್ವೀಟ್‌ಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಅವರು ಕಾಂಗ್ರೆಸ್ ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. 'ಹೃದಯ ವಾಸ್ತು. ಬಡ ಕಾಗೆ ಒಂದು ಕಾರಿನ ಮೇಲೆ ಕುಳಿತ ಕಾರಣ, ಜನರ ತೆರಿಗೆ ಹಣ ಪೋಲು ಮಾಡಿ ಹೊಸ ಕಾರು ಖರೀದಿಸಿದ ಮಾದರಿ ಮುಖ್ಯಮಂತ್ರಿ ಕೂಡ ಇವರೇ.. ಇವರ ಆ ನಡೆ ಅಧಿಕಾರಿಗಳು, ಮಂತ್ರಿಗಳಿಗೆ ಮಾದರಿಯಾಗದಿರಲಿ ಅಂತ ಯಾರು ಹೇಳಲೇ ಇಲ್ಲ ಎಂದು ಟ್ವಿಟರ್ ಬಳಕೆದಾರರೊಬ್ಬರು ಮೂದಲಿಸಿದ್ದಾರೆ.

ಮತ್ತೊಂದು ಕಮೆಂಟ್‌ನಲ್ಲಿ, ವಾಸ್ತು ಕಂಡು ಹಿಡಿದಿದ್ದು ನಿಮ್ಮಂತ ಕಲಾವಿದರು ಮತ್ತು ಸಿದ್ದರಾಮಯ್ಯನಂತಹ ರಾಜಕಾರಣಿಗಳು ಅನ್ನೋದನ್ನ ಮರೆಯಬಾರದು. ವಿಜ್ಞಾನವು ಸೃಷ್ಟಿಕರ್ತ ದೇವರನ್ನೇ ಶ್ರೇಷ್ಠ ಎನ್ನುತ್ತದೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com