ಲೋಕಾಯುಕ್ತ ಬೇಟೆ: ರಾಜ್ಯದ ಹಲವೆಡೆ ಭ್ರಷ್ಟ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ದಾಳಿ, ದಾಖಲೆಗಳ ವಶ

ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಮುಂದುವರಿದಿದೆ. ರಾಜ್ಯಾದ್ಯಂತ ಇಂದು ಬುಧವಾರ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ(Lokayukta raid) ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಮುಂದುವರಿದಿದೆ. ರಾಜ್ಯಾದ್ಯಂತ ಇಂದು ಬುಧವಾರ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ(Lokayukta raid) ನಡೆದಿದೆ.

ಭ್ರಷ್ಟಾಚಾರ ಆರೋಪಗಳು ಹಾಗೂ ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯ ಹಲವೆಡೆ ದಾಳಿ ಮಾಡಿದ್ದು, ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಬೆಂಗಳೂರಿನ ಹಲವೆಡೆ ಲೋಕಾಯುಕ್ತ ದಾಳಿ: ಬೆಂಗಳೂರಿನ ಹಲವೆಡೆ ಲೋಕಾಯುಕ್ತ ದಾಳಿಯಾಗಿದೆ. ಕೆ.ಆರ್​​.ಪುರಂ ತಹಶೀಲ್ದಾರ್​ ಅಜಿತ್​​ ರೈ ಮನೆ ಸೇರಿದಂತೆ 10 ಕಡೆ ಲೋಕಾಯುಕ್ತ ದಾಳಿ ಮಾಡಿದ್ದು, ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ. ದಾಳಿ ವೇಳೆ ಅಜಿತ್ ಮನೆಯಲ್ಲಿ ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿದೆ. ಅಜಿತ್ ಕೆಲ ದಿನಗಳ ಹಿಂದೆ ಕೆ.ಆರ್​.ಪುರಂನಿಂದ ವರ್ಗಾವಣೆಯಾಗಿದ್ದರು. ಇವರ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ದಾಳಿ: ಬಾಗಲಕೋಟೆಯಲ್ಲಿ ಸಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿದ್ಯಾಗಿರಿಯಲ್ಲಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಬೀಳಗಿ ಸಹಾಯಕ ನಿರ್ದೇಶಕ ಕೃಷ್ಣ ಶಿರೂರ ಮನೆಗಳಲ್ಲಿ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ಪರಿಶೀಲಿಸಿದ್ದಾರೆ.

ಅವರ ಕಚೇರಿಗಳಲ್ಲಿ ಸಹ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು ಚೇತನಾ ಪಾಟೀಲ ಚುನಾವಣೆ ವೇಳೆ ವರ್ಗಾವಣೆಗೊಂಡಿದ್ದರು. ಕೆಲ ದಿನಗಳ ಹಿಂದೆ ಅವರು ಇದೇ ಕಚೇರಿಗೆ ಮರಳಿ ಬಂದಿದ್ದರು. ಲೋಕಾಯುಕ್ತ ಡಿವೈಎಸ್ಪಿಗಳಾದ ಶಂಕರ ರಾಗಿ, ಪು|ಷ್ಪಲತಾ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿದೆ.

ಶಿವಮೊಗ್ಗ, ಚಾಮರಾಜನಗರದಲ್ಲಿ ಲೋಕಾಯುಕ್ತ ದಾಳಿ: ಖಾತೆ ಬದಲಾವಣೆಗೆ ವ್ಯಕ್ತಿಯೊಬ್ಬರಿಂದ 15 ಸಾವಿರ ರೂಪಾಯಿ ಲಂಚ ಪಡೆಯುವಾಗ ಸೊರಬ ಪುರಸಭೆಯ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಸೊರಬ ಪುರಸಭೆಯ ಎಫ್ ಡಿಎ ಚಂದ್ರಕಲಾ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದವರಾಗಿದ್ದಾರೆ. 

ಇ ಸ್ವತ್ತು ಮಾಡಿಕೊಡಲು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಗರಸಭೆ ಕಂದಾಯ ನಿರೀಕ್ಷಕ ಚಾಮರಾಜನಗರದಲ್ಲಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ನಗರಸಭೆಯ ಕಂದಾಯ ನಿರೀಕ್ಷಕ ನಾರಾಯಣ್ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ.

ತುಮಕೂರಿನಲ್ಲಿ ಕೃಷಿ ಇಲಾಖೆ ಜೆಡಿ ರವಿ ನಿವಾಸದ ಮೇಲೆ ದಾಳಿ: ತುಮಕೂರು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಅವರ ನಿವಾಸ ಹಾಗೂ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರಿನ ಶಂಕರಪುರದಲ್ಲಿರುವ ನಿವಾಸ ಹಾಗೂ ರಾಮನಗರದ ಫಾರಂ ಹೌಸ್ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆಯಲ್ಲಿ ತೊಡಗಿದ್ದಾರೆ. ತುಮಕೂರು ಕೃಷಿ ಇಲಾಖೆಯಲ್ಲಿ ಜೆಡಿ ಆಗಿ ಕೆಲಸ ನಿರ್ವಹಿಸುತ್ತಿರುವ ರವಿ, ಹಾಸನದಿಂದ ತುಮಕೂರಿಗೆ ವರ್ಗಾವಣೆಯಾಗಿದ್ದರು.

ಬೆಳಗಾವಿ ನಗರದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ: ಬೆಳಗಾವಿ ನಗರದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಹೆಸ್ಕಾಂ ‌ಕಾರ್ಯನಿರ್ವಾಹಕ ಇಂಜಿನಿಯರ್ ಶೇಖರ್ ಬಹುರೂಪಿ ಮನೆ ಮೇಲೆ ದಾಳಿ ಮಾಡಲಾಗಿದೆ. ಸದ್ಯ ಶೇಖರ್ ಬಹುರೂಪಿ ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೇಖರ್ ಬಹುರೂಪಿ ಅವರು 2019ರಲ್ಲಿ ಅಥಣಿಯಲ್ಲಿ ಕಾರ್ಯನಿರ್ವಹಿಸುವಾಗ ಪ್ರವಾಹದ ಸಂದರ್ಭದಲ್ಲಿ ನಡೆದ ಅವ್ಯವಹಾರ ಸಂಬಂಧ ಅಮಾನತುಗೊಂಡಿದ್ದರು.

ಕೋಲಾರ ನಗರದ ಹಲವೆಡೆ ಲೋಕಾಯುಕ್ತ ದಾಳಿ: KRDL ಎಇಇ ಕೋದಂಡರಾಮಯ್ಯ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲಾರದ ಕುವೆಂಪು ನಗರದ ಮನೆ ಸೇರಿ ಐದು ಕಡೆ ದಾಳಿಯಾಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಕೋಲಾರ ಲೋಕಾಯುಕ್ತ ಎಸ್​​ಪಿ ಉಮೇಶ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ರಾಯಚೂರಿನಲ್ಲೂ ದಾಳಿ: ರಾಯಚೂರು ಜಿಲ್ಲೆ ನಗರ ಮತ್ತು ಗ್ರಾಮೀಣ ಯೋಜನಾ ಘಟಕದ ಸಹಾಯಕ ನಿರ್ದೇಶಕ ಶರಣಪ್ಪ ಮಡಿವಾಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಸಿಂಧನೂರು ಪಟ್ಟಣದ ಕಚೇರಿ ಮತ್ತು ಮನೆ ಹಾಗೂ ಕಲಬುರಗಿಯ ನಾಗನಹಳ್ಳಿ-ಖಣದಾಳ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com