ವೇತನ ಹೆಚ್ಚಳ ಆದೇಶಕ್ಕೆ ಸಚಿವಾಲಯ ಸಿಬ್ಬಂದಿ ಅಪಸ್ವರ, ಬೇಡಿಕೆಯನ್ನು ಸೂಕ್ತವಾಗಿ ಮಂಡಿಸುವಲ್ಲಿ ಷಡಕ್ಷರಿ ಎಡವಿದ್ದಾರೆ ಎಂದ ಅಧ್ಯಕ್ಷ!
ರಾಜ್ಯ ಸರ್ಕಾರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 17ರಷ್ಟು ಹೆಚ್ಚಿಸಿ ಆದೇಶ ಹೊರಡಿಸುತ್ತಿದ್ದಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಅದಕ್ಕೆ ಒಪ್ಪಿ ಮುಷ್ಕರವನ್ನು ವಾಪಸ್ ಪಡೆದುಕೊಂಡಿದೆ.
Published: 01st March 2023 02:08 PM | Last Updated: 01st March 2023 07:18 PM | A+A A-

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್ ಷಡಕ್ಷರಿ
ಬೆಂಗಳೂರು: ರಾಜ್ಯ ಸರ್ಕಾರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 17ರಷ್ಟು ಹೆಚ್ಚಿಸಿ ಆದೇಶ ಹೊರಡಿಸುತ್ತಿದ್ದಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಅದಕ್ಕೆ ಒಪ್ಪಿ ಮುಷ್ಕರವನ್ನು ವಾಪಸ್ ಪಡೆದುಕೊಂಡಿದೆ.
ಆದರೆ ಇದಕ್ಕೆ ವಿಧಾನಸೌಧದ ಸಚಿವಾಲಯ ಸಿಬ್ಬಂದಿಯಿಂದಲೇ ವಿರೋಧ ವ್ಯಕ್ತವಾಗಿದೆ. ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ ಬಹಳ ಆತುರವಾಗಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಎಲ್ಲರ ಅಭಿಪ್ರಾಯವನ್ನು ಪಡೆದುಕೊಂಡ ನಿರ್ಧಾರಕ್ಕೆ ಬಂದಿಲ್ಲ. ಸರ್ಕಾರದ ಮುಂದೆ ಸರಿಯಾದ ವಾದ ಮುಂದಿಡುತ್ತಿದ್ದರೆ ಶೇಕಡಾ 25ರವರೆಗೆ ವೇತನ ಹೆಚ್ಚಿಸಲು ಮುಂದಾಗುತ್ತಿತ್ತು ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಹೇಳಿದ್ದಾರೆ.
ನಾವು ಈ ಆದೇಶವನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯ ಸರ್ಕಾರಿ ನೌಕರರು ನೂರಕ್ಕೆ ನೂರರಷ್ಟು ಮೋಸಹೋಗಿದ್ದೇವೆ. ಶೇಕಡಾ 17ರಷ್ಟು ಮಧ್ಯಂತರ ವೇತನ ಹೆಚ್ಚಳವನ್ನು ಏಪ್ರಿಲ್ ನಿಂದ ಹೆಚ್ಚಿಸುತ್ತೇವೆ ಎನ್ನುವುದು ಮೂಗಿಗೆ ತುಪ್ಪ ಸವರಿದಂತೆ. ಇದನ್ನು ವಿಧಾನಸಭೆ, ವಿಧಾನಪರಿಷತ್, ಸಚಿವಾಲಯ ಸಿಬ್ಬಂದಿ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳಕ್ಕೆ ಸರ್ಕಾರ ಅಧಿಕೃತ ಆದೇಶ: ಏಪ್ರಿಲ್ 1 ರಿಂದ ಜಾರಿ
ಸರ್ಕಾರದ ಮುಂದೆ ವೇತನ ಹೆಚ್ಚಳಕ್ಕಿಂತ ಒಪಿಎಸ್ ಜಾರಿ ನಮ್ಮ ಮುಖ್ಯ ಬೇಡಿಕೆಯಾಗಿತ್ತು. ನೂತನ ಪಿಂಚಣಿ ಸರ್ಕಾರಿ ನೌಕರರಿಗೆ ಮಾರಕವಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿರುವ ನೌಕರರ ಸಂಘ ಅಧ್ಯಕ್ಷ ಷಡಕ್ಷರಿ, ಗುರುಸ್ವಾಮಿ ಸಚಿವಾಲಯ ನೌಕರರ ಸಂಘದ ಅಧ್ಯಕ್ಷರಲ್ಲ, ಅವರು ಹಂಗಾಮಿ ಅಧ್ಯಕ್ಷರಷ್ಟೆ ಎಂದರು.
ರಾಜ್ಯ ಸರ್ಕಾರಿ ನೌಕರರಿಗೆ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಅದರಂತೆ ನಿಮ್ಮ ಮೂಲ ವೇತನ, ಪ್ರಸ್ತುತ ತುಟ್ಟಿ ಭತ್ಯೆ ಸೇರಿ ಶೇ.17ರಷ್ಟು ಮಧ್ಯಂತರ ಪರಿಹಾರ ಸಿಗಲಿದೆ.
ರಾಜ್ಯ ಸರ್ಕಾರಿ ನೌಕರರ ಬೇಡಿಕೆಯನುಸಾರ, ನೌಕರರ ಮೂಲ ವೇತನದ ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಆದೇಶ ಹೊರಡಿಸಿದ ಸರ್ಕಾರ.@CMofKarnataka @BSBommai pic.twitter.com/gqSvhJ130Q
— DIPR Karnataka (@KarnatakaVarthe) March 1, 2023