ಕಾಂಗ್ರೆಸ್ ಕರೆ ನೀಡಿರುವ ಬಂದ್‌ಗೆ ಜನರಿಂದ ಪ್ರತಿಕ್ರಿಯೆ ಸಿಗಲ್ಲ: ಬಸವರಾಜ ಬೊಮ್ಮಾಯಿ
ಭ್ರಷ್ಟಾಚಾರದ ಆರೋಪದ ಮೇಲೆ ಆಡಳಿತಾರೂಢ ಬಿಜೆಪಿ ವಿರುದ್ಧದ ಹೋರಾಟದ ಭಾಗವಾಗಿ ಮಾರ್ಚ್ 9 ರಂದು ಎರಡು ಗಂಟೆಗಳ ಕಾಲ ಬಂದ್‌ಗೆ ಕಾಂಗ್ರೆಸ್ ಕರೆ ನೀಡಿದ್ದು, ವಿರೋಧ ಪಕ್ಷದ ಈ ಕರೆಗೆ ಜನರಿಂದ ಯಾವುದೇ ಪ್ರತಿಕ್ರಿಯೆ ಸಿಗುವುದಿಲ್ಲ. ಸ್ವತಃ ಬಂದ್ (ಮುಚ್ಚಿ ಹೋಗುವ) ಆಗುವ ಅಂಚಿನಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದ್ದಾರೆ.
Published: 06th March 2023 01:33 PM | Last Updated: 06th March 2023 07:48 PM | A+A A-

ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಭ್ರಷ್ಟಾಚಾರದ ಆರೋಪದ ಮೇಲೆ ಆಡಳಿತಾರೂಢ ಬಿಜೆಪಿ ವಿರುದ್ಧದ ಹೋರಾಟದ ಭಾಗವಾಗಿ ಮಾರ್ಚ್ 9 ರಂದು ಎರಡು ಗಂಟೆಗಳ ಕಾಲ ಬಂದ್‌ಗೆ ಕಾಂಗ್ರೆಸ್ ಕರೆ ನೀಡಿದ್ದು, ವಿರೋಧ ಪಕ್ಷದ ಈ ಕರೆಗೆ ಜನರಿಂದ ಯಾವುದೇ ಪ್ರತಿಕ್ರಿಯೆ ಸಿಗುವುದಿಲ್ಲ. ಸ್ವತಃ ಬಂದ್ (ಮುಚ್ಚಿ ಹೋಗುವ) ಆಗುವ ಅಂಚಿನಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ 'ಅಧಿಕ ಭ್ರಷ್ಟಾಚಾರ'ದಲ್ಲಿ ತೊಡಗಿತ್ತು. ಆಗಿನ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟದಲ್ಲಿ ಸಚಿವರಿಗೆ 'ಟಾರ್ಗೆಟ್' ನೀಡಿದ್ದರು ಎಂದು ಆರೋಪಿಸಿದ್ದಾರೆ.
'ಕಾಂಗ್ರೆಸ್ ಭ್ರಷ್ಟಾಚಾರದ ಕೂಪವಾಗಿದೆ. ಅವರ ಪಾಪಗಳು ಒಂದೆರಡಲ್ಲ. ಸ್ವತಃ ಕಾಂಗ್ರೆಸ್ ಬಂದ್ ಆಗಲು ಮುಂದಾಗಿದೆ. ಹಾಗಾಗಿ ಇಂತಹ ಪ್ರತಿಭಟನೆ ಮತ್ತು ಬಂದ್‌ಗಳ ಮೂಲಕ ತಮ್ಮ ರಾಜಕೀಯ ಭವಿಷ್ಯವನ್ನು ಕಾಪಾಡಲು ಅವರು ಬಯಸುತ್ತಾರೆ. ಆದರೆ, ಅದಕ್ಕೆ ಯಾವುದೇ ಪ್ರತಿಕ್ರಿಯೆ ಸಿಗುವುದಿಲ್ಲ. ಏಕೆಂದರೆ, ಆರೋಪ ಮಾಡುವವರು ಶುದ್ಧ ಹಸ್ತರಾಗಿರಬೇಕು, ಆಗ ಮಾತ್ರ ಅದಕ್ಕೆ ಸ್ವಲ್ಪ ಮೌಲ್ಯ ಬರುತ್ತದೆ' ಎಂದು ಹೇಳಿದರು.
'ಈ ಹಿಂದೆ ದಿಂಬು, ಹಾಸಿಗೆ ಖರೀದಿಯಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದ ಅವರು, ಸಣ್ಣ ಯೋಜನೆಗಳಿಂದ ಹಿಡಿದು ದೊಡ್ಡ ನೀರಾವರಿ ಯೋಜನೆಗಳವರೆಗೆ ಭ್ರಷ್ಟಾಚಾರದಲ್ಲಿ ಮುಳುಗಿದ್ದರು. ಅಂದಿನ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಎಲ್ಲ ಸಚಿವರಿಗೆ ಟಾರ್ಗೆಟ್ ನೀಡಿದ್ದರು. ಎಂಬಿ ಪಾಟೀಲ್, ಕೆಜೆ ಜಾರ್ಜ್, (ಎಚ್‌ಸಿ) ಮಹದೇವಪ್ಪ ಸೇರಿದಂತೆ ಇತರರಿಗೆ ಯಾವ ಟಾರ್ಗೆಟ್ ನಿಗದಿಪಡಿಸಲಾಗಿತ್ತು ಎಂದು ಕೇಳಿ. ಕಾಂಗ್ರೆಸ್‌ನಿಂದ ಬಂದ್ ಕರೆಗೆ ಜನರು ಕಿವಿಗೊಡುವುದಿಲ್ಲ. ಅವರ ಕೈಗಳು ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿವೆ' ಎಂದು ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ಬಿಜೆಪಿ ಭ್ರಷ್ಟಾಚಾರ: ಮಾರ್ಚ್ 9 ರಂದು 2 ತಾಸು 'ಕರ್ನಾಟಕ ಬಂದ್'ಗೆ ಕಾಂಗ್ರೆಸ್ ಕರೆ
'ಅವರ (ಕಾಂಗ್ರೆಸ್) ತಂತ್ರಗಳು ಮತ್ತು ಆಟಗಳ ಬಗ್ಗೆ ಜನರಿಗೆ ತಿಳಿದಿದೆ. ಯಾರು ನಿಜ ಎಂದು ಜನರಿಗೆ ತಿಳಿದಿದೆ. ಮೇ ತಿಂಗಳೊಳಗೆ ಚುನಾವಣೆ ನಡೆಯಲಿದೆ ಮತ್ತು ಚುನಾವಣಾ ಯುದ್ಧದಲ್ಲಿ ಜನರು ನಿರ್ಧರಿಸುತ್ತಾರೆ' ಎಂದು ಅವರು ಹೇಳಿದರು.
ಲೋಕಾಯುಕ್ತ ಅಧಿಕಾರಿಗಳು ವಿರೂಪಾಕ್ಷಪ್ಪ ಮಾಡಾಳ್ ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರ ನಿವಾಸದಲ್ಲಿ 6 ಕೋಟಿ ರೂ.ಗೂ ಹೆಚ್ಚು ನಗದು ಮತ್ತು ಖಾಸಗಿ ಕಚೇರಿಯಲ್ಲಿ 2 ಕೋಟಿ ರೂ.ಗೂ ಹೆಚ್ಚು ನಗದು ಪತ್ತೆಯಾಗಿತ್ತು. ಪ್ರಶಾಂತ್ ಮಾಡಾಳ್ ತನ್ನ ತಂದೆಯ ಪರವಾಗಿ ಕೆಎಸ್‌ಡಿಎಲ್‌ಗೆ ಕಚ್ಚಾ ಸಾಮಗ್ರಿಗಳನ್ನು ಖರೀದಿಸಲು ಟೆಂಡರ್ ಮಂಜೂರು ಮಾಡಲು 40 ಲಕ್ಷ ರೂಪಾಯಿ ನಗದು ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಆಪಾದಿತ ಲಂಚ ಪ್ರಕರಣದಲ್ಲಿ ಬಿಜೆಪಿಗೆ ಮತ್ತಷ್ಟು ಮುಜುಗರ ಉಂಟು ಮಾಡುವ ಉದ್ದೇಶದಿಂದ ಕರ್ನಾಟಕ ಕಾಂಗ್ರೆಸ್ ಬಂದ್‌ಗೆ ಕರೆ ನೀಡಿದೆ. ಮಾರ್ಚ್ 9 ರಂದು ಎರಡು ಗಂಟೆಗಳ ಕಾಲ ರಾಜ್ಯ ಬಂದ್‌ಗೆ ಕಾಂಗ್ರೆಸ್ ಕರೆ ನೀಡಿದೆ.
ಗುರುವಾರ ಬೆಳಗ್ಗೆ 9 ರಿಂದ 11 ರವರೆಗೆ ಬಂದ್ ಎಂದು ಘೋಷಿಸಿದ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್, ಶಾಲಾ-ಕಾಲೇಜುಗಳು, ಸಾರಿಗೆ ಮತ್ತು ಆರೋಗ್ಯ ಸೇವೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದಿದ್ದಾರೆ.