ಬೆಂಗಳೂರು: ಜಾಹೀರಾತು ಏಜೆನ್ಸಿ ಮಾಲೀಕನ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು: ಸಲಿಂಗ ಸಂಬಂಧಕ್ಕೆ ಬೇಸತ್ತು ಸಂಗಾತಿಯಿಂದಲೇ ಹತ್ಯೆ

ಜಾಹೀರಾತು ಏಜೆನ್ಸಿ ಮಾಲೀಕ ಲಿಯಾಕತ್ ಅಲಿ ಖಾನ್ ಕೊಲೆ ಪ್ರಕರಣ ಸಂಬಂಧ, ಕೆಲಸಗಾರ ಇಲಿಯಾಜ್ ಅವರನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜಾಹೀರಾತು ಏಜೆನ್ಸಿ ಮಾಲೀಕ ಲಿಯಾಕತ್ ಅಲಿ ಖಾನ್ ಕೊಲೆ ಪ್ರಕರಣ ಸಂಬಂಧ, ಕೆಲಸಗಾರ ಇಲಿಯಾಜ್ ಅವರನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಚಂದ್ರಾ ಲೇಔಟ್‌ನ ದುರ್ಗಾ ಪರಮೇಶ್ವರಿ ದೇವಸ್ಥಾನ ಬಳಿಯ ನಿವಾಸಿ ಲಿಯಾಕತ್ ಮೃತದೇಹ ನಾಯಂಡನಹಳ್ಳಿಯ ಚೆಟ್ಟೀಸ್ ಬಂಕ್ ಸಮೀಪದಲ್ಲಿರುವ ಮನೆಯಲ್ಲಿ ಫೆ. 27ರಂದು ರಾತ್ರಿ ಪತ್ತೆಯಾಗಿತ್ತು.

ಲಿಯಾಕತ್ ಏಜೆನ್ಸಿ ಕಚೇರಿಯಲ್ಲಿ ಆರೋಪಿ ಇಲಿಯಾಜ್ ಕೆಲಸ ಮಾಡುತ್ತಿದ್ದ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಇವರಿಬ್ಬರು ಹೆಚ್ಚು ಸಮಯ ಒಟ್ಟಿಗೆ ಇರುತ್ತಿದ್ದರು. ಇಬ್ಬರ ನಡುವೆ ಸಲಿಂಗಿ ಸಂಬಂಧ ಬೆಳೆದಿತ್ತು. ಎರಡು ವರ್ಷಗಳಿಂದ ಇವರಿಬ್ಬರ ಸಂಬಂಧ ಮುಂದುವರಿದಿತ್ತು ಎಂದು ಪೊಲೀಸರು ತಿಳಿಸಿದರು.

ಲಿಯಾಕತ್, ಪತ್ನಿ ಹಾಗೂ ಮಕ್ಕಳಿಬ್ಬರ ಜೊತೆ ಚಂದ್ರಾ ಲೇಔಟ್ ದುರ್ಗಾ ಪರಮೇಶ್ವರಿ ದೇವಸ್ಥಾನ ಬಳಿಯ ಮನೆಯಲ್ಲಿ ವಾಸವಿದ್ದರು. ಅವರಿಗೆ ನಾಯಂಡನಹಳ್ಳಿಯ ಚೆಟ್ಟೀಸ್ ಬಂಕ್ ಸಮೀಪದಲ್ಲಿ ಇನ್ನೊಂದು ಮನೆ ಇತ್ತು. ಈ ಮನೆಯಲ್ಲೇ ಇಲಿಯಾಜ್ ಹಾಗೂ ಲಿಯಾಕತ್, ಹಲವು ಬಾರಿ ಖಾಸಗಿ ಕ್ಷಣಗಳನ್ನು ಕಳೆದಿದ್ದರು ಎಂದು ಪೊಲೀಸರು ಹೇಳಿದರು.

ಇಲಿಯಾಜ್‌ಗೆ ಸಲಿಂಗಿ ಸಂಬಂಧದಲ್ಲಿ ಆಸಕ್ತಿ ಇರಲಿಲ್ಲ. ಕೆಲಸ ಕಳೆದುಕೊಳ್ಳುವ ಭಯದಲ್ಲಿ ಆತ, ಮಾಲೀಕ ಹೇಳಿದಂತೆ ಕೇಳುತ್ತಿದ್ದ. ಇಲಿಯಾಜ್‌ಗೆ ಮದುವೆ ಮಾಡಲು ತೀರ್ಮಾನಿಸಿದ್ದ ಆತನ ಮನೆಯವರು, ಹುಡುಗಿ ನೋಡಿ ನಿಶ್ಚಿತಾರ್ಥ ಸಹ ಮಾಡಿಸಿದ್ದರು. ಅದು ತಿಳಿಯುತ್ತಿದ್ದಂತೆ ಲಿಯಾಕತ್, ಹುಡುಗ ಸರಿಯಿಲ್ಲವೆಂದು ಹುಡುಗಿ ಮನೆಯವರಿಗೆ ಹೇಳಿ ನಿಶ್ಚಿತಾರ್ಥ ರದ್ದಾಗುವಂತೆ ಮಾಡಿದ್ದ ಎಂದು ಪೊಲೀಸರು ತಿಳಿಸಿದರು.

ಬೇರೆ ಹುಡುಗಿಗಾಗಿ ಇಲಿಯಾಜ್ ಮನೆಯವರು ಹುಡುಕಾಟ ಮುಂದುವರಿಸಿದ್ದರು. ಈ ಬಾರಿಯೂ ಲಿಯಾಕತ್ ನಿಶ್ಚಿತಾರ್ಥ ರದ್ದುಪಡಿಸಬಹುದೆಂಬ ಭಯ ಆರೋಪಿಗೆ ಇತ್ತು. ಲಿಯಾಕತ್, ಎರಡನೇ ಬಾರಿ ಮದುವೆಯಾಗೋಣವೆಂದು ಪತ್ನಿಗೆ ಹೇಳಿದ್ದರು. ಅದರಂತೆ ಫೆ. 26ರಂದು ಸರಳವಾಗಿ ಮದುವೆ ಸಹ ಆಗಿತ್ತು. ಮರುದಿನ ಫೆ. 27ರಂದು ಇಲಿಯಾಜ್‌ ಜೊತೆ ಲಿಯಾಕತ್ ನಾಯಂಡನಹಳ್ಳಿಯ ಮನೆಗೆ ಹೋಗಿದ್ದರು. ಇಬ್ಬರೂ ಖಾಸಗಿ ಕ್ಷಣ ಕಳೆದಿದ್ದರು ಎಂದು ಪೊಲೀಸರು ಹೇಳಿದರು.

ಸಲಿಂಗಿ ಸಂಬಂಧ ಮುಂದುವರಿಸುವುದು ಬೇಡವೆಂದಿದ್ದ ಇಲಿಯಾಜ್, ವಿಷಯ ಹೊರಗೆ ಗೊತ್ತಾದರೆ, ನನಗೆ ಹಾಗೂ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ. ನನ್ನ ಭವಿಷ್ಯ ಹಾಳು ಮಾಡಬೇಡ ಎಂಬುದಾಗಿ ಕೋರಿದ್ದ. ಇದರಿಂದ ಇಬ್ಬರ ನಡುವೆ ಗಲಾಟೆ ಶುರುವಾಗಿತ್ತು. ಲಿಯಾಕತ್ ಅವರ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದ ಇಲಿಯಾಜ್, ಕತ್ತರಿಯಿಂದ ದೇಹದ ಹಲವೆಡೆ ಚುಚ್ಚಿದ್ದ. ತೀವ್ರ ರಕ್ತಸ್ರಾವದಿಂದ ಲಿಯಾಕತ್ ಮೃತಪಟ್ಟಿದ್ದ.

ಲಿಯಾಕತ್ ನನ್ನು ಕೊಲೆ ಮಾಡಿದ್ದ ಆರೋಪಿ ಇಲಿಯಾಜ್, ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಚಿಕಿತ್ಸೆಗಾಗಿ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ, ಈತನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆ ಬಂಧಿಸಲಾಗಿದೆ. ಕೃತ್ಯದ ಬಗ್ಗೆ ಹೇಳಿಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com