ಸಜೀವ ದಹನವಾದ ಬಿಎಂಟಿಸಿ ನೌಕರನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ, ಸರ್ಕಾರಿ ಹುದ್ದೆ: ಶ್ರೀರಾಮುಲು
ಬಸ್ ನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮೃತಪಟ್ಟ ಬಿಎಂಟಿಸಿ ನೌಕರನ ಕುಟಂಬಕ್ಕೆ ಐದು ಲಕ್ಷ ರೂ. ಪರಿಹಾರ ಹಾಗೂ ಆತನ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಿಸುವಂತೆ ಆದೇಶ ಮಾಡಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
Published: 10th March 2023 03:27 PM | Last Updated: 10th March 2023 08:58 PM | A+A A-

ಶ್ರೀರಾಮುಲು
ಬೆಂಗಳೂರು: ಬಸ್ ನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮೃತಪಟ್ಟ ಬಿಎಂಟಿಸಿ ನೌಕರನ ಕುಟಂಬಕ್ಕೆ ಐದು ಲಕ್ಷ ರೂ. ಪರಿಹಾರ ಹಾಗೂ ಆತನ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಿಸುವಂತೆ ಆದೇಶ ಮಾಡಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಶ್ರೀರಾಮುಲು, ನಿದ್ರೆ ಮಂಪರಿನಲ್ಲಿದ್ದಾಗ ಅನಾಹುತ ಸಂಭವಿಸಿದೆ. ಘಟನೆ ತಿಳಿಯುತ್ತಿದ್ದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಾರಿಗೆ ನೌಕರರಿಗೆ ವೇತನ ಹೆಚ್ಚಳದ ವಿಚಾರದಲ್ಲಿ ಶೀಘ್ರವೇ ಸಿಹಿ ಸುದ್ದಿ ಕೊಡಲಾಗುವುದು. ನಾವು ಶೇ.10ರಷ್ಟು ವೇತನ ಹೆಚ್ಚಳ ಮಾಡುವುದಾಗಿ ತಿಳಿಸಿದ್ದು, ಸರ್ಕಾರಿ ನೌಕರರ ಮಾದರಿಯಲ್ಲಿ ಶೇ.17ರಷ್ಟು ವೇತನ ಹೆಚ್ಚಿಸುವಂತೆ ಸಾರಿಗೆ ಸಿಬ್ಬಂದಿ ಒತ್ತಾಯಿಸುತ್ತಿದ್ದಾರೆ. ಆದರೆ, ಇದರಿಂದ ಸರ್ಕಾರಕ್ಕೆ 6500 ಕೋಟಿ ಹೊರೆಯಾಗಲಿದೆ.
ಅನೇಕ ವರ್ಷಗಳಿಂದ ಸಾರಿಗೆ ಪ್ರಯಾಣ ದರ ಕೂಡ ಹೆಚ್ಚಿಸಿಲ್ಲ. ಈ ಎಲ್ಲ ವಿಚಾರಗಳ ಬಗ್ಗೆ ಆರ್ಥಿಕ ಇಲಾಖೆ ಜತೆ ಚರ್ಚೆ ಮಾಡಿದ್ದು, ಶೀಘ್ರದಲ್ಲೇ ಸಿಎಂ ಜತೆ ಕೂಡ ಚರ್ಚಿಸಲಾಗುವುದು. ಆದಷ್ಟು ಬೇಗ ಸಾರಿಗೆ ಸಿಬಂದಿ ಮನವೊಲಿಸಿ ವೇತನ ಹೆಚ್ಚಳ ಮಾಡಲಾಗುವುದು ಎಂದರು.
ಇದನ್ನೂ ಓದಿ: ಬಿಎಂಟಿಸಿ ಬಸ್ ನಲ್ಲಿ ಬೆಂಕಿ, ಕಂಡಕ್ಟರ್ ಸಜೀವ ದಹನ
ಲಿಂಗಧೀರನಹಳ್ಳಿ ಡಿ ಗ್ರೂಪ್ ಬಡಾವಣೆ ನಿಲ್ದಾಣದಲ್ಲಿ ಗುರುವಾರ ರಾತ್ರಿ ನಿಲ್ಲಿಸಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್‌ನಲ್ಲಿ ಮಲಗಿದ್ದ ನಿರ್ವಾಹಕ ಮುತ್ತಯ್ಯ ಸ್ವಾಮಿ (45) ಸಜೀವವಾಗಿ ದಹನವಾಗಿದ್ದರು. ಸೋಮನಹಳ್ಳಿ ಡಿಪೊ-31ಕ್ಕೆ ಸೇರಿದ್ದ ಬಸ್‌ನಲ್ಲಿ (ಕೆಎ 57 ಎಫ್ 2069) ಬಳ್ಳಾರಿಯ ಮುತ್ತಯ್ಯ ಹಾಗೂ ಚಾಲಕ ಪ್ರಕಾಶ್ (39) ಕರ್ತವ್ಯದಲ್ಲಿದ್ದರು. ಗುರುವಾರ ರಾತ್ರಿ 10.30ಕ್ಕೆ ಕರ್ತವ್ಯ ಮುಗಿಸಿದ್ದ ಅವರಿಬ್ಬರು, ಡಿ ಗ್ರೂಪ್ ಬಡಾವಣೆ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದರು. ಅಲ್ಲಿಯೇ ರಾತ್ರಿ ತಂಗಿದ್ದರು.