ಮೂಲ ಸೌಕರ್ಯಗಳ ಕೊರತೆ: ಉತ್ತರ ಕನ್ನಡ ಜಿಲ್ಲೆಯ ಎಂಟು ಗ್ರಾಮಗಳ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ
ಉತ್ತರ ಕನ್ನಡ ಜಿಲ್ಲೆಯ ಎಂಟು ಗ್ರಾಮಗಳ ಜನರು ತಮ್ಮ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ವಿರೋಧಿಸಿ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ.
Published: 11th March 2023 08:10 AM | Last Updated: 11th March 2023 04:37 PM | A+A A-

ಪ್ರಾತಿನಿಧಿಕ ಚಿತ್ರ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಎಂಟು ಗ್ರಾಮಗಳ ಜನರು ತಮ್ಮ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ವಿರೋಧಿಸಿ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಶಿರಸಿ ತಾಲೂಕಿನ ಹಲ್ಕಾಡಿ, ಹೊಸಕೊಪ್ಪ, ಕೊಡಸೂರು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದರೆ ನೀರಿನ ಸಮಸ್ಯೆ ನೀಗಿಸಿ ಇತರೆ ಸೌಕರ್ಯ ಕಲ್ಪಿಸುವುದಾಗಿ ರಾಜಕೀಯ ಪಕ್ಷಗಳು ಈ ಗ್ರಾಮಗಳ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
'ಈ ಬಾರಿ ಅವರು ಮತ ಕೇಳಲು ಬರಲಿ, ನಾವು ಅವರಿಗೆ ಸರಿಯಾದ ಉತ್ತರ ನೀಡುತ್ತೇವೆ. ಪ್ರತಿ ಬಾರಿಯೂ ಪೊಳ್ಳು ಭರವಸೆ ನೀಡಿ ನಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆ’ ಎಂದು ಗ್ರಾಮಸ್ಥ ಮಂಜುನಾಥ ನಾಯ್ಕ ಹೇಳಿದರು.
ಇದನ್ನೂ ಓದಿ: ದೊರಕದ ಭೂಪತ್ರ: ಲಕ್ಕುಂಡಿ ಗ್ರಾಮಸ್ಥರ ಧರಣಿ; ಬೇಡಿಕೆ ಈಡೇರಿಸದಿದ್ದರೆ ವಿಧಾನಸಭೆ ಚುನಾವಣೆ ಬಹಿಷ್ಕಾರ!
ಈ ಗ್ರಾಮಗಳು ಅರಣ್ಯ ಪ್ರದೇಶದಲ್ಲಿದ್ದು, ರಸ್ತೆ, ನೀರು, ಶಾಲೆ, ಶೌಚಾಲಯದಂತಹ ಸೌಕರ್ಯಗಳ ಕೊರತೆಯಿದೆ. ರಾಜಕಾರಣಿಗಳ ವರ್ತನೆಯಿಂದ ಅಸಮಾಧಾನಗೊಂಡ ಜನರು ತಮ್ಮ ಗ್ರಾಮಗಳಿಗೆ ಪ್ರವೇಶವನ್ನು ನಿಷೇಧಿಸಿದ್ದಾರೆ. ‘ರಾಜಕಾರಣಿಗಳಿಗೆ ಇಲ್ಲಿ ಸ್ವಾಗತವಿಲ್ಲ’, ‘ನಮಗೆ ರಸ್ತೆ ಕೊಡಿ ಆಮೇಲೆ ಮತ ಕೇಳಿ’ ಎಂಬ ಬ್ಯಾನರ್‌ಗಳನ್ನು ಹಾಕಿದ್ದಾರೆ.
ಜೊಯಿಡಾ ತಾಲೂಕಿನ ನಂದಿಗಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡು ಹಾಗೂ ಹಳಿಯಾಳ ಗ್ರಾಮ ಪಂಚಾಯಿತಿ ಇನ್ನೂ ಎರಡು ಗ್ರಾಮಗಳು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿವೆ. ಈ ಗ್ರಾಮಗಳಿಗೆ ರಸ್ತೆ, ಸಾರಿಗೆ, ಕುಡಿಯುವ ನೀರಿನ ಕೊರತೆ ಇದೆ.
'ನಾಯಕರು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದಿದ್ದರೆ, ಅವರು ಅಧಿಕಾರದಲ್ಲಿರಲು ಅನರ್ಹರು. ಈ ಬಾರಿ ನಮ್ಮ ಮತವನ್ನು ಚಲಾಯಿಸದಿರಲು ನಿರ್ಧರಿಸಿದ್ದೇವೆ ಎಂದು ಗ್ರಾಮಸ್ಥ ಸೂರಜ್ ದಬ್ಗಾರ್ ಹೇಳಿದರು.