ಮಾಡಾಳ್ ಪ್ರಶಾಂತ್ ಹಣದ ವಹಿವಾಟಿನ ಬಗ್ಗೆ ಹೆಚ್ಚಿನ ತನಿಖೆಗೆ ಲೋಕಾಯುಕ್ತ ತನಿಖಾಧಿಕಾರಿ ಶಿಫಾರಸು

ಮಾಡಾಳ್ ಪ್ರಶಾಂತ್, ಸುಂದರ್ ಮತ್ತು ಸಿದ್ದೇಶ್ ಅವರ ಅಕ್ರಮ ವಹಿವಾಟುಗಳು ಮತ್ತು ಬಿಜೆಪಿಯ ಚನ್ನಗಿರಿ ಶಾಸಕ ಹಾಗೂ ಕೆಎಸ್‌ಡಿಎಲ್‌ನ ಮಾಜಿ ಅಧ್ಯಕ್ಷ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್‌ ಒಡೆತನದ ಬೇನಾಮಿ ಆಸ್ತಿಗಳ ಕುರಿತು ಸಮಗ್ರ ತನಿಖೆಗೆ ಲೋಕಾಯುಕ್ತ ತನಿಖಾಧಿಕಾರಿ ಶಿಫಾರಸು ಮಾಡಿದ್ದಾರೆ. 
ಲೋಕಾಯುಕ್ತ
ಲೋಕಾಯುಕ್ತ

ಬೆಂಗಳೂರು: ಬಿಡಬ್ಲುಎಸ್ಎಸ್‍‌ಬಿ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಕುಮಾರ್ ಎಂವಿ ಅಲಿಯಾಸ್ ಪ್ರಶಾಂತ್ ಮಾಡಲ್, ಅವರ ಖಾಸಗಿ ಅಕೌಂಟೆಂಟ್ ಎಸ್ ಸುಂದರ್ ಮತ್ತು ಸಿದ್ದೇಶ್ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ನಿಂದ ಖಾಸಗಿ ಸಂಸ್ಥೆಗಳಿಗೆ ಟೆಂಡರ್‌ಗಳನ್ನು ನೀಡಲು ಹೆಚ್ಚು ಅಕ್ರಮ ಹಣದ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಶಂಕಿಸಿರುವ ಲೋಕಾಯುಕ್ತ ತನಿಖಾಧಿಕಾರಿ, ಅಂತಹ ಅಕ್ರಮ ವಹಿವಾಟುಗಳು ಮತ್ತು ಬಿಜೆಪಿಯ ಚನ್ನಗಿರಿ ಶಾಸಕ ಹಾಗೂ ಕೆಎಸ್‌ಡಿಎಲ್‌ನ ಮಾಜಿ ಅಧ್ಯಕ್ಷ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್‌ ಒಡೆತನದ ಬೇನಾಮಿ ಆಸ್ತಿಗಳ ಕುರಿತು ಸಮಗ್ರ ತನಿಖೆಗೆ ಶಿಫಾರಸು ಮಾಡಿದ್ದಾರೆ. 

ಕಕ್ಷಿದಾರರ ನಡುವಿನ ಹಣ ಅಕ್ರಮ ವಹಿವಾಟು ಹಾಗೂ ಸಿದ್ದೇಶ್ ಹೆಸರಿನಲ್ಲಿ ಪ್ರಶಾಂತ್ ಹೊಂದಿರುವ ಬೇನಾಮಿ ಆಸ್ತಿಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದು ಅಗತ್ಯ ಎಂದು ಬೆಂಗಳೂರು ನಗರ ವಿಭಾಗದ ಎಸ್‌ಪಿ-2 ಅವರಿಗೆ ಸಲ್ಲಿಸಿರುವ ವರದಿಯಲ್ಲಿ ಲೋಕಾಯುಕ್ತ ತನಿಖಾಧಿಕಾರಿ ಬಿ.ಜಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಪ್ರಶಾಂತ್ ಅವರು ತಮ್ಮ ಖಾಸಗಿ ಕಚೇರಿಯಲ್ಲಿ ಮಾರ್ಚ್ 2 ರಂದು 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದರು. ಈ ವೇಳೆ ಸಿದ್ದೇಶ್ (28) ಅಲ್ಲಿ ಕುಳಿತಿದ್ದರು. ಈ ವೇಳೆ, ತಾವು ಚಿತ್ರದುರ್ಗ ಜಿಲ್ಲೆಯ ಭೀಮಸಂದ್ರ ಗ್ರಾಮದ ಕೃಷಿಕ ಮತ್ತು ಪ್ರಶಾಂತ್ ಅವರ ಸಂಬಂಧಿ ಎಂದು ಸಿದ್ದೇಶ್ ತಿಳಿಸಿದರು.ಸೂಕ್ತ ಉತ್ತರ ನೀಡದ ಕಾರಣ ಆತನ ಬ್ಯಾಗ್ ಅನ್ನು ಪರಿಶೀಲಿಸಿದಾಗ 60 ಲಕ್ಷ ರೂ. ಹಣ ಸಿಕ್ಕಿತು. ಅದು ಪ್ರಶಾಂತ್ ಅವರಿಗೆ ನೀಡಬೇಕಾಗಿರುವ ಹಣ ಎಂದು ತಿಳಿಸಿದರೂ, ಅದರ ಮೂಲವನ್ನು ಬಹಿರಂಗಪಡಿಸಿಲ್ಲ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ಈ ಹಣ ಕೂಡ ಕಂಪನಿಯೊಂದರಿಂದ ಪಡೆದ ಲಂಚ ಎಂದು ವರದಿ ಹೇಳಿದೆ. ಸುರೇಂದ್ರ ಮತ್ತು ಸಿದ್ದೇಶ್‌ ಜತೆಗೂಡಿ ಕೆಎಸ್‌ಡಿಎಲ್‌ ಅಧಿಕಾರಿಗಳೊಂದಿಗೆ ಸಂಚು ರೂಪಿಸಿ, ಕರ್ನಾಟಕ ಅರೋಮಾಸ್‌ ಸಂಸ್ಥೆಗೆ ತನ್ನ ಪ್ರಭಾವದ ಮೂಲಕ ಟೆಂಡರ್‌ ಕ್ರಯಪತ್ರ ಪಡೆಯುವಲ್ಲಿ ಸಂಚು ರೂಪಿಸಿದ್ದ ಪ್ರಶಾಂತ್‌ ಸಿಕ್ಕಿಬಿದ್ದಿದ್ದಾರೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. 

<strong>ಮಾಡಾಳ್ ಪ್ರಶಾಂತ್ </strong>
ಮಾಡಾಳ್ ಪ್ರಶಾಂತ್

ಲೋಕಾಯುಕ್ತ ತನಿಖಾಧಿಕಾರಿಯ ಶಿಫಾರಸು ಆಧರಿಸಿ, ಮಾರ್ಚ್ 8 ರಂದು ಪ್ರಶಾಂತ್, ಸುಂದರ್ ಮತ್ತು ಸಿದ್ದೇಶ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ.

ಈ ನಡುವೆ ಗುರುವಾರ ದಾಖಲೆ ಸಮೇತ ಹಾಜರಾಗುವಂತೆ ವಿರೂಪಾಕ್ಷಪ್ಪ ಅವರಿಗೆ ಹೇಳಿದ್ದ ಲೋಕಾಯುಕ್ತ ಪೊಲೀಸರು ಶುಕ್ರವಾರ ಎರಡನೇ ದಿನವೂ ಅವರ ವಿಚಾರಣೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com