ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಪ್ರವಾಸೋದ್ಯಮ, ಆರ್ಥಿಕತೆಗೆ ಉತ್ತೇಜನ ನೀಡಲಿದೆ: ಕೇಂದ್ರ ಸಚಿವ ನಿತಿನ್ ಗಡ್ಕರಿ
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ರಾಜ್ಯದ ಅಭಿವೃದ್ಧಿಗೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಭಾನುವಾರ ಹೇಳಿದರು.
Published: 13th March 2023 10:39 AM | Last Updated: 13th March 2023 03:35 PM | A+A A-

ನಿತಿನ್ ಗಡ್ಕರಿ
ಮೈಸೂರು: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ರಾಜ್ಯದ ಅಭಿವೃದ್ಧಿಗೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಭಾನುವಾರ ಹೇಳಿದರು.
ಮದ್ದೂರಿನ ಗೆಜ್ಜಲಗೆರೆಯಲ್ಲಿ ಮೈಸೂರು-ಬೆಂಗಳೂರು ಕಾರಿಡಾರ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಎಕ್ಸ್‌ಪ್ರೆಸ್‌ವೇ ಆರಂಭದಿಂದಾಗಿ ಮೈಸೂರಿಗೆ ಆಗಮಿಸುವ ದೇಶ, ವಿದೇಶಗಳ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಇದು ರಾಜ್ಯದ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದ್ದು, ಯಾವುದೇ ಟ್ರಾಫಿಕ್ ಸಮಸ್ಯೆಯಿಲ್ಲದೆ ನಗರಗಳ ನಡುವೆ ಒಂದು ಗಂಟೆಯಲ್ಲಿ ಪ್ರಯಾಣಿಸಬಹುದಾಗಿದೆ ಎಂದು ಹೇಳಿದರು.
ಹೆದ್ದಾರಿ ನಿರ್ಮಾಣಕ್ಕಾಗಿ ರೈತರಿಂದ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿರುವುದರಿಂದ ಎಕ್ಸ್‌ಪ್ರೆಸ್‌ವೇ ಯೋಜನೆಯು ಆರಂಭಿಕ ಹಂತದಲ್ಲಿ ತೊಂದರೆಗಳನ್ನು ಎದುರಿಸಿತು. ಆದರೆ, ರಾಜ್ಯ ಸರ್ಕಾರ ರೈತರಿಂದ ಅಗತ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಭೂಮಿ ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ಸರ್ಕಾರದಿಂದ ಹೆಚ್ಚುವರಿಯಾಗಿ 4 ಸಾವಿರ ಕೋಟಿ ರೂ. ಬಿಡುಗಡೆಗೊಳಿಸಿದೆ. ಹೆದ್ದಾರಿಯು ಉದ್ಯೋಗವನ್ನು ಸೃಷ್ಟಿಸಲಿದೆ. ಇದು ಎನ್ಹೆಚ್ 209 ರಲ್ಲಿ ತಮಿಳುನಾಡು ಮತ್ತು ಎನ್ಹೆಚ್ 212 ರಲ್ಲಿ ಕೇರಳವನ್ನು ಸಂಪರ್ಕಿಸುತ್ತದೆ. ಇಲ್ಲಿ ಮೈಸೂರಿನ ಸಾಂಪ್ರದಾಯಿಕ ಉತ್ಪನ್ನಗಳನ್ನು ಮಾರಾಟ ಮಾಡಲು ರೆಸ್ಟೋರೆಂಟ್‌ಗಳು, ಪಾರ್ಕಿಂಗ್ ಸ್ಥಳ, ಗ್ಯಾಸ್ ಸ್ಟೇಷನ್‌ಗಳು, ಫುಡ್ ಕೋರ್ಟ್, ವಾಶ್‌ರೂಮ್‌ಗಳು ಮತ್ತು ಸ್ಟಾಲ್‌ಗಳು ಇರುತ್ತವೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಷ್ಟ್ರದ ಬೆಳವಣಿಗೆ ನೋಡುವುದರಲ್ಲಿ ಯುವಕರು ಅಪಾರ ಹೆಮ್ಮೆ ಪಡುತ್ತಿದ್ದಾರೆ: ಮಂಡ್ಯದಲ್ಲಿ ಪ್ರಧಾನಿ ಮೋದಿ ಭಾಷಣ
ಮೈಸೂರು-ಕುಶಾಲನಗರ ಕಾರಿಡಾರ್ ಯೋಜನೆಯಲ್ಲಿ, ಬೆಂಗಳೂರು ಮತ್ತು ಮಂಗಳೂರನ್ನು ಸಂಪರ್ಕಿಸುವ 93 ಕಿಮೀ ವ್ಯಾಪ್ತಿಯು ಈ ಪ್ರದೇಶದ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಮೈಸೂರು ಮತ್ತು ಕುಶಾಲನಗರ ನಡುವಿನ ಪ್ರಯಾಣವನ್ನು ಐದು ಗಂಟೆಗಳಿಂದ ಅರ್ಧಕ್ಕೆ ಇಳಿಸಲಾಗುವುದು. ಇದರಿಂದ ಇಂಧನ ಉಳಿತಾಯ ಮತ್ತು ಮಾಲಿನ್ಯವನ್ನು ಕಡಿಮೆಯಾಗುತ್ತದೆ. ಕೂರ್ಗ್ ಅನ್ನು ದೇಶದ ಅಗ್ರ ಗಿರಿಧಾಮಗಳಲ್ಲಿ ಒಂದೆಂದು ರೇಟ್ ಮಾಡಲಾಗಿದ್ದು, ಪ್ರಯಾಣಿಕರು ತಮ್ಮ ಗಮ್ಯಸ್ಥಾನವನ್ನು ಸುಲಭವಾಗಿ ತಲುಪಲು ಇದು ಸಹಾಯ ಮಾಡುತ್ತದೆ ಎಂದರು.
ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿದೆ. ಚೆನ್ನೈ-ಬೆಂಗಳೂರು-ಸೂರತ್ ಎಕ್ಸ್‌ಪ್ರೆಸ್‌ವೇ ಕಾಶ್ಮೀರದಿಂದ ಕನ್ಯಾಕುಮಾರಿಗೆ ಸಂಪರ್ಕ ಕಲ್ಪಿಸಲಿದೆ. ಈಗಾಗಲೇ ಶೇ 50ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಡಿಸೆಂಬರ್ ಅಂತ್ಯದೊಳಗೆ ಉಳಿದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇ ಸಾವಿರಾರು ಜನರ ಜೀವನೋಪಾಯವನ್ನು ಕಸಿದುಕೊಳ್ಳಲಿದೆ: ಹೆಚ್'ಡಿ ಕುಮಾರಸ್ವಾಮಿ
ಬೆಂಗಳೂರು ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಕೇಂದ್ರವು 70,000 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದ್ದು, ಮಾರ್ಚ್ 2024 ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಹೊರ ವರ್ತುಲ ರಸ್ತೆಯು ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದು ಮೈಸೂರು ಕಡೆಗೆ ಪ್ರಯಾಣಿಸಲು ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ಪ್ರಯಾಣಿಕರಿಗೆ ಸಹಾಯ ಮಾಡುತ್ತದೆ.
ರಾಜ್ಯದಲ್ಲಿ ಮೂಲಸೌಕರ್ಯ ಯೋಜನೆಗಳಿಗಾಗಿ ಸರ್ಕಾರ 2 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, 2024 ರ ವೇಳೆಗೆ ಸುಮಾರು 3 ಲಕ್ಷ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಸರ್ಕಾರ ಕೈಗೆತ್ತಿಕೊಳ್ಳಲಿದೆ. ಐಟಿ ರಾಜಧಾನಿ ಬೆಂಗಳೂರು ದೇಶದ ಬೆಳವಣಿಗೆಯ ಎಂಜಿನ್ ಆಗಿದ್ದು, ಮೈಸೂರು ರಾಜ್ಯದ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂದರು.