ಟ್ರಾಫಿಕ್ ಜಾಮ್ ಸಮಸ್ಯೆ: ಕೆಂಗೇರಿ ಜಂಕ್ಷನ್ ವಿಸ್ತರಣೆಗೆ NHAI ಗಂಭೀರ ಚಿಂತನೆ

ಮೈಸೂರಿನಿಂದ ಹೊಸದಾಗಿ ಉದ್ಘಾಟನೆಗೊಂಡ 10 ಪಥಗಳ ಎಕ್ಸ್‌ಪ್ರೆಸ್‌ವೇಯಲ್ಲಿ ಗಂಟೆಗೆ 100 ಕಿಮೀ ವೇಗದಲ್ಲಿ ಸಂಚರಿಸುವ ವಾಹನ ಸವಾರರು ಕೆಂಗೇರಿ ಜಂಕ್ಷನ್‌ಗೆ ತಲುಪಿದಾಗ ತಮ್ಮ ವಾಹನಗಳ ವೇಗವನ್ನು ಟ್ರಾಫಿಕ್ ಜಾಮ್ ನಿಂದಾಗಿ ಗಂಟೆಗೆ 10 ಕಿಮೀಗೆ ಇಳಿಸಲು ಒತ್ತಾಯಿಸಲ್ಪಡುತ್ತಿದ್ದಾರೆ.
ಮೈಸೂರು -ಬೆಂಗಳೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
ಮೈಸೂರು -ಬೆಂಗಳೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

ಬೆಂಗಳೂರು: ಮೈಸೂರಿನಿಂದ ಹೊಸದಾಗಿ ಉದ್ಘಾಟನೆಗೊಂಡ 10 ಪಥಗಳ ಎಕ್ಸ್‌ಪ್ರೆಸ್‌ವೇಯಲ್ಲಿ ಗಂಟೆಗೆ 100 ಕಿಮೀ ವೇಗದಲ್ಲಿ ಸಂಚರಿಸುವ ವಾಹನ ಸವಾರರು ಕೆಂಗೇರಿ ಜಂಕ್ಷನ್‌ಗೆ ತಲುಪಿದಾಗ ತಮ್ಮ ವಾಹನಗಳ ವೇಗವನ್ನು ಟ್ರಾಫಿಕ್ ಜಾಮ್ ನಿಂದಾಗಿ ಗಂಟೆಗೆ 10 ಕಿಮೀಗೆ ಇಳಿಸಲು ಒತ್ತಾಯಿಸಲ್ಪಡುತ್ತಿದ್ದಾರೆ. ಹೀಗಾಗಿ ಈ ಭಾಗದ ಜಂಕ್ಷನ್ ಅನ್ನು ವಿಸ್ತರಣೆ ಮಾಡುವ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ  ಗಂಭೀರ ಚಿಂತನೆಯಲ್ಲಿ ತೊಡಗಿದೆ.

10 ಪಥಗಳ ಎಕ್ಸ್ ಪ್ರೆಸ್ ವೇ ಬೆಂಗಳೂರಿನ ಕೆಂಗೇರಿ ಜಂಕ್ಷನ್ ಗೆ ಬರುವ ಹೊತ್ತಿಗೆ 4 ಪಥಗಳ ಚಿಕ್ಕಲೇನ್ ಆಗುತ್ತದೆ. ಇದರಿಂದ ಈ ಭಾಗದಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿದೆ. 90 ನಿಮಿಷದಲ್ಲಿ ಮೈಸೂರಿನಿಂದ ಬೆಂಗಳೂರು ತಲುಪಿದರೂ ಕೆಂಗೇರಿಯಿಂದ ಬೆಂಗಳೂರು ಹೃದಯ ಭಾಗ ತಲುಪಲು ಸವಾರರು ಗಂಟೆಗಟ್ಟಲೆ ಸಮಯ ವ್ಯಯಿಸಬೇಕಾಗಿದೆ. ಇದೇ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈಗ ಜಂಕ್ಷನ್ ಬಳಿ ವಿಸ್ತರಣೆಯ ಮಾರ್ಗಗಳನ್ನು ಪರಿಗಣಿಸುತ್ತಿದ್ದಾರೆ ಎನ್ನಲಾಗಿದೆ.

ಸೋಮವಾರ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಬಳಿಯ ಎಕ್ಸ್‌ಪ್ರೆಸ್‌ವೇ ಪ್ರವೇಶ ಬಿಂದುವಿಗೆ ಟಿಎನ್‌ಐಇ ತಂಡ ಭೇಟಿ ನೀಡಿದಾಗ ಮಧ್ಯಾಹ್ನದ ವೇಳೆಯೂ ಇಲ್ಲಿ ವಾಹನ ದಟ್ಟಣೆ ಉಂಟಾಗಿರುವುದು ಕಂಡು ಬಂತು. ಜನದಟ್ಟಣೆ, ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಈ ಜಂಕ್ಷನ್‌ನಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂದು ಅಲ್ಲಿನ ಟ್ರಾಫಿಕ್‌ ಮೇಲೆ ನಿಗಾ ಇಟ್ಟಿರುವ ಅಧಿಕಾರಿಗಳು ತಿಳಿಸಿದ್ದಾರೆ.

“ದಟ್ಟಣೆಯ ಸಮಯದಲ್ಲಿ, ಕೆಂಗೇರಿ ಜಂಕ್ಷನ್ ಅಸ್ತವ್ಯಸ್ತವಾಗಿರುತ್ತದೆ. ರಾಮನಗರ, ಮಂಡ್ಯ ಮತ್ತು ಮೈಸೂರು ಕಡೆಯಿಂದ ಸಾವಿರಾರು ವಾಹನಗಳು ಬೆಂಗಳೂರು ಕಡೆಗೆ ಹೋಗುತ್ತವೆ. ಮೈಸೂರಿನಿಂದ ಗಂಟೆಗೆ 100 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸಬಹುದಾದರೂ, ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ತಲುಪಿದ ನಂತರ ವೇಗ ತಗ್ಗಿಸುವುದು ಅನಿವಾರ್ಯವಾಗುತ್ತದೆ ಎಂದು ವಾಹನ ಚಾಲಕ ಪ್ರಕಾಶ್ ಮುರುಗನ್ ಹೇಳಿದರು.

ಇದರಿಂದ ಮೆಡಿಕಲ್ ಕಾಲೇಜು ಬಳಿಯಿಂದ ಕೆಂಗೇರಿ ಜಂಕ್ಷನ್ ವರೆಗೆ 2 ಕಿ.ಮೀ.ಗೂ ಹೆಚ್ಚು ದೂರದವರೆಗೆ ವಾಹನಗಳು ಆಮೆ ಗತಿಯಲ್ಲಿ ಸಾಗುತ್ತವೆ. ಈ ಬಗ್ಗೆ ರಸ್ತೆ ಬಳಕೆದಾರರೊಬ್ಬರು ಟಿಎನ್‌ಐಇ ಜೊತೆ ಮಾತನಾಡಿ, ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಕೆಂಗೇರಿ ಜಂಕ್ಷನ್ ನಡುವಿನ ರಸ್ತೆಯಲ್ಲಿ ಜಾಯ್‌ವಾಕಿಂಗ್ ಮಾಡಲಾಗುತ್ತಿದೆ. ಜನ ಎಲ್ಲೆಂದರಲ್ಲಿ ರಸ್ತೆ ದಾಟಲು ಮುಂದಾಗುತ್ತಾರೆ. ಇದರಿಂದ ಇಲ್ಲಿ ಟ್ರಾಫಿಕ್ ಜಾಮ್ ತಲೆದೋರುತ್ತಿದೆ ಎಂದು ದೂರಿದರು.

ಜಂಕ್ಷನ್ ಬಳಿ ಜಾಯ್‌ವಾಕಿಂಗ್ ವಿಪರೀತವಾಗಿದೆ ಎಂದು ಟ್ರಾಫಿಕ್ ಪೊಲೀಸ್ ಒಬ್ಬರು ಹೇಳಿದ್ದು, ಅಲ್ಲಿ ಸ್ಕೈವಾಕ್‌ಗಳನ್ನು ನಿರ್ಮಿಸುವುದರಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು ಮತ್ತು ಟ್ರಾಫಿಕ್ ನಿಧಾನವಾಗುವುದನ್ನು ತಡೆಯಬಹುದು ಎಂದು ಹೇಳಿದರು. ಈ ಬಗ್ಗೆ ಈಗಾಗಲೇ ಸಂಚಾರ ಪೊಲೀಸರು ಬಿಬಿಎಂಪಿ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಬಸ್ ಗಳಿಂದಲೂ ಟ್ರಾಫಿಕ್ ಜಾಮ್
ಇನ್ನು ಕೆಂಗೇರಿ ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನು ಇಳಿಸಿದ ನಂತರ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಿಬ್ಬಂದಿ ತಮ್ಮ ಬಸ್‌ಗಳನ್ನು ಕೆಂಗೇರಿ ಬಸ್ ಟರ್ಮಿನಲ್‌ಗೆ ಹೋಗುವ ರಸ್ತೆಯ ಎರಡೂ ಬದಿಯಲ್ಲಿ ನಿಲ್ಲಿಸುತ್ತಾರೆ. ಇದರಿಂದಲೂ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ಕೆಲವು ಪ್ರಯಾಣಿಕರು ಹೇಳಿದರು. ಇದರಿಂದ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಎಕ್ಸ್‌ಪ್ರೆಸ್‌ವೇ ಯೋಜನೆಯನ್ನು ಅನುಷ್ಠಾನಗೊಳಿಸುವಾಗ ಅಧಿಕಾರಿಗಳು ಈ ಸಮಸ್ಯೆಗಳನ್ನು ಪರಿಗಣಿಸಿಲ್ಲ ಎಂದು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. "ಈಗ, ಎಕ್ಸ್‌ಪ್ರೆಸ್‌ವೇಯ ಈ ವಿಸ್ತರಣೆಯಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಅಧಿಕಾರಿಗಳಿಗೆ ಕಷ್ಟವಾಗುತ್ತಿದೆ" ಎಂದು ಅವರು ಹೇಳಿದರು.

ಯಾವುದೇ ಪ್ರಮುಖ ಯೋಜನೆಯನ್ನು ಯೋಜಿಸುವಾಗ ಮತ್ತು ಕಾರ್ಯಗತಗೊಳಿಸುವಾಗ ಭೂಸ್ವಾಧೀನದಂತಹ ನೂರಾರು ಅಡಚಣೆಗಳು ಉಂಟಾಗುತ್ತವೆ ಎಂದು NHAI ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದು ಎಷ್ಟೇ ಉತ್ತಮವಾಗಿದ್ದರೂ ಸಹ ದೂರುಗಳಿಲ್ಲದ ಯಾವುದೇ ಯೋಜನೆಗಳಿಲ್ಲ. "ನಾವು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ" ಎಂದು ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com