ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಟೋಲ್ ವಿಚಾರ: ರಾಷ್ಟ್ರೀಯ ಹೆದ್ದಾರಿಯವರಿಗೆ ವರದಿ ಕೊಡಲು ತಿಳಿಸಿದ್ದೇನೆ- ಸಿಎಂ ಬೊಮ್ಮಾಯಿ
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಟೋಲ್ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಈ ಕುರಿತು ರಾಷ್ಟ್ರೀಯ ಹೆದ್ದಾರಿಯವರಿಗೆ ವಿವರವಾದ ವರದಿ ಕೊಡಲು ತಿಳಿಸಿದ್ದೇನೆ ಎಂದಿದ್ದಾರೆ.
Published: 14th March 2023 02:13 PM | Last Updated: 14th March 2023 06:07 PM | A+A A-

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಆನೆಗುಂದಿಯಲ್ಲಿ ಅಂಜನಾದ್ರಿ ಬೆಟ್ಟದ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು
ಅಂಜನಾದ್ರಿ ಬೆಟ್ಟ(ಕೊಪ್ಪಳ): ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಟೋಲ್ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಈ ಕುರಿತು ರಾಷ್ಟ್ರೀಯ ಹೆದ್ದಾರಿಯವರಿಗೆ ವಿವರವಾದ ವರದಿ ಕೊಡಲು ತಿಳಿಸಿದ್ದೇನೆ ಎಂದಿದ್ದಾರೆ.
ಟೋಲ್ ಶುಲ್ಕ ಆರಂಭವಾದಾಗ ಈ ರೀತಿಯ ವಿವಾದಗಳು ಸಾಮಾನ್ಯ. ಅವುಗಳನ್ನು ಪರಿಹರಿಸುತ್ತೇವೆ. ರಘು ಆಚಾರ್ ಆಡಿಯೋ ಬಗ್ಗೆ ಕೇಳಲಾದ ಪ್ರಶ್ನೆಗೆ ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಯಾರು ಏನು ಮಾತನಾಡುತ್ತಾರೆ, ಅದಕ್ಕೆ ಅವರೇ ಜವಾಬ್ದಾರರು ಎಂದರು.
ಪಕ್ಷ ನಮಗೆ ತಾಯಿಯಿದ್ದಂತೆ, ನಾವೆಲ್ಲಾ ಮಕ್ಕಳಂತೆ, ಪಕ್ಷಕ್ಕೆ ತಕ್ಕಂತೆ ಎಲ್ಲರೂ ನಡೆದುಕೊಳ್ಳುತ್ತಾರೆ, ನಡೆದುಕೊಳ್ಳಬೇಕಾಗುತ್ತದೆ ಎಂದು ಟಿಕೆಟ್ ಹಂಚಿಕೆ, ಪಕ್ಷಕ್ಕೆ ಬರುವವರು, ಪಕ್ಷ ಬಿಟ್ಟು ಹೋಗುವವರ ಕುರಿತು ಕೇಳಿದ್ದಕ್ಕೆ ಸಿಎಂ ಪ್ರತಿಕ್ರಿಯಿಸಿದರು.
140 ಕೋಟಿ ರೂಪಾಯಿ ಅನುದಾನ: ಈಗಾಗಾಗಲೇ ಸರ್ಕಾರ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ 120 ಕೋಟಿ ಅನುದಾನ ನೀಡಿದೆ. ಅದರಂತೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯು 20 ಕೋಟಿ ಅನುದಾನ ನೀಡಿದ್ದು, ಒಟ್ಟು 140 ಕೋಟಿ ಅನುದಾನದ ವಿವಿಧ ಯೋಜನೆಗಳು ನಡೆಯುತ್ತಿವೆ ಎಂದರು.
ಇಂದು ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು, ದರ್ಶನ ಪಥ, ಶಾಪಿಂಗ್ ಕಾಂಪ್ಲೆಕ್ಸ್, ಪ್ರವಾಸಿ ಮಂದಿರ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ ಎಂದರು.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆ ಬೆನ್ನಲ್ಲೇ ಭಾರೀ ಪ್ರತಿಭಟನೆ, ವಿರೋಧ: ಟೋಲ್ ಶುಲ್ಕ ಎಷ್ಟಿದೆ?
ಬೆಳಗ್ಗೆ ಹನುಮನ ಜನ್ಮ ಸ್ಥಾನ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯನಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ದೇವಸ್ಥಾನ ಆಡಳಿತ ಮಂಡಳಿ ಪೂರ್ಣ ಕುಂಭ, ನಾದಸ್ವರ, ಕಳಸ ಬೆಳಗುವ ಮೂಲಕ ಸಿಎಂಗೆ ಸ್ವಾಗತ ಕೋರಿದರು. ಬೆಟ್ಟದ ಕೆಳಭಾಗದಲ್ಲಿನ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಅಂಜನಾದ್ರಿಯಲ್ಲಿ ಪ್ರದರ್ಶನ ಪಥ, ವಾಣಿಜ್ಯ ಸಂಕೀರ್ಣ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಶೀಘ್ರದಲ್ಲಿಯೇ ಕಲ್ಪಿಸಲಾಗುವುದು. ಬಹಳ ಸಂತೋಷದಿಂದ ಅಂಜನಾದ್ರಿಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದ್ದೇನೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮಮಂದಿರ-ಕರ್ನಾಟಕದಲ್ಲಿ ಅಂಜನಾದ್ರಿ: ಆಂಜನೇಯ ಮನುಕುಲಕ್ಕೆ ಒಳ್ಳೆಯದನ್ನು ಮಾಡಲಿ, ನಮ್ಮೆಲ್ಲರ ಪರಿಕಲ್ಪನೆ ಅಂಜನಾದ್ರಿಯನ್ನು ಐತಿಹಾಸಿಕ ಸ್ಥಳವನ್ನಾಗಿ ಮಾಡಿದೆ. ಈಗಾಗಲೇ 120 ಕೋಟಿ ಅನುದಾನ ಕೊಡಲಾಗಿದೆ. ಕೆಲವೇ ದಿನಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣ ಗೊಳಿಸಲಾಗುತ್ತಿದೆ. ಅಯ್ಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಅದರಂತೆ, ಅವರ ಭಕ್ತ ಆಂಜನೇಯನ ಕ್ಷೇತ್ರ ಅಭಿವೃದ್ಧಿ ಮಾಡುವ ಭಾಗ್ಯ ಬಿಜೆಪಿ ಸರಕಾರಕ್ಕೆ ದೊರೆತಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಫಲಾನುಭವಿಗಳ ಸಮಾವೇಶ ಮತ್ತು ಸಾರ್ವಜನಿಕ ಸಮಾರಂಭ, ಗಂಗಾವತಿ, ಕೊಪ್ಪಳ ಜಿಲ್ಲೆ. https://t.co/jW515te25z
— CM of Karnataka (@CMofKarnataka) March 14, 2023