ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆ ಬೆನ್ನಲ್ಲೇ ಭಾರೀ ಪ್ರತಿಭಟನೆ, ವಿರೋಧ: ಟೋಲ್ ಶುಲ್ಕ ಎಷ್ಟಿದೆ?

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾದ ಬೆನ್ನಲ್ಲೇ ಭಾರೀ ಪ್ರತಿಭಟನೆ, ವಿರೋಧ ವ್ಯಕ್ತವಾಗುತ್ತಿದೆ.
ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿ ಟೋಲ್ ಪ್ಲಾಜಾ ಬಳಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿ ಟೋಲ್ ಪ್ಲಾಜಾ ಬಳಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾದ ಬೆನ್ನಲ್ಲೇ ಭಾರೀ ಪ್ರತಿಭಟನೆ, ವಿರೋಧ ವ್ಯಕ್ತವಾಗುತ್ತಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. 

ಇಂದು ಬೆಳಗ್ಗೆ ಟೋಲ್ ಶುಲ್ಕ ಸಂಗ್ರಹಣೆ ಆರಂಭವಾದ ಕೂಡಲೇ ಅದನ್ನು ವಿರೋಧಿಸಿ ಕಾಂಗ್ರೆಸ್, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು ಟೋಲ್ ಗೇಟ್ ಮುರಿದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ.ಸ್ಥಳದಲ್ಲಿ ಧರಣಿ ನಡೆಸುತ್ತಿದ್ದು ಟೋಲ್ ಶುಲ್ಕ ಸಂಗ್ರಹ ಸ್ಥಳ ಬಳಿ ಅವ್ಯವಸ್ಥೆ ಆಗರವಾಗಿದೆ. 

ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ: ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಟೋಲ್ ಬಳಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯುತ್ತಿದೆ. ಹಾಲಿನ ಕ್ಯಾನ್​ ಹಿಡಿದು, ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಲಾಗಿದೆ. ಪೊಲೀಸರು, ಕಾಂಗ್ರೆಸ್​​​ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯಾಗಿದ್ದು ಕಾಂಗ್ರೆಸ್​​ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ ಟ್ರಾಫಿಕ್​ ಜಾಮ್​​ ಉಂಟಾಗಿದೆ. 

ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಕೆ ಬಳಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈ ವೇಳೆ ಟೋಲ್ ಪ್ಲಾಜಾ ಕಂಬಿ ಮುರಿದು ಕನ್ನಡಪರ ಸಂಘಟನೆ ಸದಸ್ಯ ಆಕ್ರೋಶ ಹೊರ ಹಾಕಿದ್ದಾರೆ. ಟೋಲ್ ಕಂಬಿ ಮುರಿದ ಸದಸ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಣಮಿಣಿಕೆ ಬಳಿಯ ಟೋಲ್ ಪ್ಲಾಜಾ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಟೋಲ್‌ ಬಳಿ ಪೊಲೀಸ್ ಬಿಗಿ ಬಂದೋಬಸ್ತ್: ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಕೆ ಬಳಿಯ ಟೋಲ್ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 3 ಕೆಎಸ್​ಆರ್​ಪಿ ತುಕಡಿ, ಸ್ಥಳೀಯ ಪೊಲೀಸರ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ 200‌ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಟೋಲ್ ಶುಲ್ಕ ಎಷ್ಟಿದೆ?: ಕಾರು, ಜೀಪ್​​, ವ್ಯಾನ್​ಗೆ ಏಕಮುಖ ಸಂಚಾರಕ್ಕೆ 135 ರೂಪಾಯಿ
ಕಾರು, ಜೀಪ್​​​, ವ್ಯಾನ್​​ಗೆ​ ಎರಡು ಕಡೆ ಸಂಚಾರಕ್ಕೆ 205 ರೂಪಾಯಿ.
ಸ್ಥಳೀಯ ವಾಹನಗಳ ಏಕಮುಖ ಸಂಚಾರಕ್ಕೆ 70 ರೂಪಾಯಿ ನಿಗದಿ
ಕಾರು, ಜೀಪ್​​​, ವ್ಯಾನ್​​ಗಳಿಗೆ ತಿಂಗಳ ಪಾಸ್​​ ದರ 4,425 ರೂಪಾಯಿ
ಲಘು ಸರಕುವಾಹನ, ಮಿನಿ ಬಸ್​ಗಳ ಏಕಮುಖ ಸಂಚಾರಕ್ಕೆ 220 ರೂಪಾಯಿ
ಲಘು ಸರಕುವಾಹನ, ಮಿನಿ ಬಸ್​ಗಳ ಎರಡು ಕಡೆ ಸಂಚಾರಕ್ಕೆ 330 ರೂಪಾಯಿ
ಲಘು ಸರಕುವಾಹನ, ಮಿನಿ ಬಸ್​ಗಳಿಗೆ ತಿಂಗಳ ಪಾಸ್​ ದರ 7315 ರೂಪಾಯಿ
ಟ್ರಕ್‌/ಬಸ್‌ ಏಕಮುಖ ಸಂಚಾರಕ್ಕೆ ಟೋಲ್​ ದರ 460 ರೂಪಾಯಿ ನಿಗದಿ
ಟ್ರಕ್‌/ಬಸ್‌ ಎರಡು ಕಡೆ ಸಂಚಾರಕ್ಕೆ 690 ರೂಪಾಯಿ ನಿಗದಿ
ಟ್ರಕ್‌/ಬಸ್​​ಗಳ ತಿಂಗಳ ಟೋಲ್ ಪಾಸ್​ ದರ 15,325 ರೂಪಾಯಿ ನಿಗದಿ
3 ಆಕ್ಸೆಲ್‌ ವಾಣಿಜ್ಯ ವಾಹನ ಏಕಮುಖ ಸಂಚಾರ 500, ಎರಡು ಕಡೆ 750 ರೂಪಾಯಿಗಳು 
ಅತಿ ಭಾರದ ವಾಹನಗಳು ಏಕಮುಖ ಸಂಚಾರಕ್ಕೆ 880 ರೂಪಾಯಿ 
ಅತಿ ಭಾರದ ವಾಹನಗಳು ಎರಡು ಕಡೆ ಸಂಚಾರಕ್ಕೆ 1315 ರೂಪಾಯಿ ದರ ನಿಗದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com